ಹಾವೇರಿ,ಅ.25- ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಯಾಸೀರ್ ಖಾನ್ ಪಠಾಣ್ ಓರ್ವ ರೌಡಿಶೀಟರ್ ಆಗಿದ್ದು ಗೂಂಡಾ ಹಿನ್ನಲೆ ಹೊಂದಿದ್ದಾರೆ ಎಂದು ಟಿಕೆಟ್ ವಂಚಿತ ಅಜ್ಜಂಫೀರ್ ಖಾದ್ರಿ ಸ್ಪೋಟಕ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾಸೀರ್ ಖಾನ್ ಪಠಾಣ್ ಮೇಲೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ. ಅವರೊಬ್ಬ ರೌಡಿಶೀಟರ್ ಹಿನ್ನಲೆಯುಳ್ಳವರು. ಗೂಂಡಾ ಹಿನ್ನಲೆಯ ಈ ವ್ಯಕ್ತಿಗೆ ಟಿಕೆಟ್ ಕೊಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.
ಈ ಹಿಂದೆಯೂ ಶಿಗ್ಗಾವಿಯಲ್ಲಿ ಸ್ಪರ್ಧಿಸಿದ್ದ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದ ಬಸವರಾಜ ಬೊಮಾಯಿ ಪರವಾಗಿಯೂ ಕೆಲಸ ಮಾಡಿದ್ದರು. ಅವರು ಬಿಜೆಪಿಯ ಏಜೆಂಟ್ ಎಂಬುದರಲ್ಲಿ ಎರಡು ಮಾತಿಲ್ಲ. ಪಕ್ಷ ದ್ರೋಹಿಯಾಗಿರುವ ಪಠಾಣ್ಗೆ ಯಾವ ಆಧಾರದ ಮೇಲೆ ಟಿಕೆಟ್ ಕೊಟ್ಟರು ಎಂದು ಪ್ರಶ್ನೆ ಮಾಡಿದರು.
ಖಾದ್ರಿಗೆ ಟಿಕೆಟ್ ಕೊಡಿ ಎದು ನಮ ಸಿದ್ದರಾಮಯ್ಯ ಸಾಹೇಬ್ರು, ಸಲೀಂ ಅಹದ್ ಸೇರಿದಂತೆ ಎಲ್ಲ ನಾಯಕರು ಹೇಳಿದ್ದರು. ಶಾಸಕ ಶ್ರೀನಿವಾಸ್ ಮಾನೆ ಕೂಡಾ ನನಗೆ ಟಿಕೆಟ್ ಕೊಡಿ ಎಂದು ಶಿಫಾರಸ್ಸು ಮಾಡಿದ್ದರು. ಯಾಸೀರ್ ಖಾನ್ ಪಠಾಣ್ ರನ್ನು ಬಲಿ ಕಾ ಬಕ್ರಾ ಮಾಡೋಣ ಎಂದು ಶ್ರೀನಿವಾಸ್ ಮಾನೆ ನನ್ನ ಬಳಿ ಹೇಳಿದ್ದರು ಎಂದು ತಿಳಿಸಿದರು.
ಯಾಸೀರ್ ಖಾನ್ ಪಠಾಣ್ಗೆ ಟಿಕೆಟ್ ಸಿಕ್ಕಿದೆ. ಈ ಹಿಂದೆ ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡಿದವನು. ಬಂಕಾಪುರದಲ್ಲಿ ಅವರ ಮಾವನ ಮನೆ ಇದೆ. ಅವನು, ಅವರ ಮಾವ ಎಲ್ಲಾ ಬಿಜೆಪಿ ಪರ ಕೆಲಸ ಮಾಡಿದವರು ಎಂದು ಆರೋಪಿಸಿದರು. ಕಳೆದ ಬಾರಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಹದಮ್ ಯೂಸೂಫ್ ಸವಣೂರು ಹೆಸರು ಘೋಷಿಸಿ ಕೊನೆಗೆ ಯಾಸೀರ್ ಖಾನ್ ಪಠಾಣ್ಗೆ ಟಿಕೆಟ್ ನೀಡಿದಂತೆ ಈಗಲೂ ಮಾಡಲಿ ಎಂದರು.
ಯಾಸೀರ್ ಖಾನ್ ಪಠಾಣ್ ಬದಲಿಸಿ ನನ್ನನ್ನು ಕಾಂಗ್ರೆಸ್ ಅಧೀಕೃತ ಅಭ್ಯರ್ಥಿ ಮಾಡಿದರೆ ಕಾಂಗ್ರೆಸ್ ಅಭ್ಯರ್ಥಿ ಆಗಿ ನಾಮಿನೇಶನ್ ಮಾಡುವೆ. ಇಲ್ಲದಿದ್ದರೆ ಬೆಂಬಲಿಗರ ಅಭಿಪ್ರಾಯ ಕೇಳಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಅಜ್ಜಂಫೀರ್ ಖಾದ್ರಿ ಹೇಳಿದರು.