ಬೆಂಗಳೂರು,ಜ.26– ಅಮೆರಿಕಾದಲ್ಲಿ ಮೂತ್ರಕೋಶ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಒಂದು ತಿಂಗಳ ನಂತರ ತಾಯ್ನಾಡಿಗೆ ಮರಳಿದರು.
ಅಮೆರಿಕಾದಿಂದ ದುಬೈಗೆ, ಅಲ್ಲಿಂದ ನೇರವಾಗಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಶಿವರಾಜ್‌ಕುಮಾರ್ ದಂಪತಿಗೆ ಹೂಗುಚ್ಛ ನೀಡಿ ಬರಮಾಡಿಕೊಂಡರು.
ವಿಮಾನ ನಿಲ್ದಾಣದಿಂದ ಗೇಟ್ ಬಳಿ ಬರುತ್ತಿದ್ದಂತೆ ಶಿವರಾಜ್‌ಕುಮಾರ್ ಆಗಮನವನ್ನೇ ಚಾತಕಪಕ್ಷಿಯಂತೆ ಕಾಯುತ್ತಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಪಟಾಕಿ ಸಿಡಿಸಿ, ಹಾರ ಹಾಕಿ ಜೈಕಾರ ಕೂಗಿ ನೂರು ಕಾಲ ಬದುಕಲಿ ಎಂದು ಹಾರೈಸಿದರು.
ಅಲ್ಲಿಂದ ನಾಗವಾರ ರಸ್ತೆಯ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಇಲ್ಲಿಯೂ ಕೂಡ ಜನಜಂಗುಳಿಯೇ ನೆರೆದಿತ್ತು. ಅಭಿಮಾನಿಗಳು ಮೂರು ಜೆಸಿಬಿಯಲ್ಲಿ ಸೇಬು ಹಣ್ಣಿನ ಹಾರ ಹಾಕಿ ಅಭಿಮಾನ ಮೆರೆದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸ್ನೇಹಿತರು, ಸಂಬಂಧಿಕರು ನನಗೆ ಧೈರ್ಯ ತುಂಬಿದ್ದಾರೆ. ಹೋಗಬೇಕಾದರೆ ಭಾವುಕನಾಗಿದ್ದೆ. ಮನೆಯಲ್ಲಿ ಎಲ್ಲರ ಬೆಂಬಲ ಸಿಕ್ಕಿತು ಅಲ್ಲಿ ಹೋದ ಮೇಲೆ ಆತವಿಶ್ವಾಸ ಬಂತು. 6 ಗಂಟೆ ಮನೆಯವರಿಗೂ ಚಿಂತೆ ಕಾಡಿತ್ತು. ಎರಡು ಮೂರು ದಿನ ಲಿಕ್ವಿಡ್ ಫುಡ್‌ನಲ್ಲೇ ಇದ್ದೆ. ಎರಡು ದಿನ, ಮೂರು ದಿನದ ಬಳಿಕ ಲೈಟ್ ವಾಕ್ ಶುರು ಮಾಡಿದೆ ಎಂದರು.
ಜೀವನನೇ ಒಂದು ಪಾಠ. ಜೀವನದಲ್ಲಿ ಇದೆಲ್ಲ ತಾನಾಗಿ ಬರುತ್ತದೆ, ನಾನು ಎಲ್ಲವನ್ನೂ ಧೈರ್ಯವಾಗಿ ಮಾಡಿದೆ ಎಂದು ಭಾವುಕರಾಗಿ ನುಡಿದರು. ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾತನಾಡಿದ ಅವರು, ಈಗ 131 ಸಿನಿಮಾ ಬಗ್ಗೆ ಪ್ಲ್ಯಾನ್ ಮಾಡಿದ್ದೇವೆ. ರಾಮ್‌ಚರಣ್ ಅವರ ಸಿನಿಮಾ ಮಾಡುತ್ತಿದ್ದೇನೆ ಎಂದರು.
ಮೂತ್ರಕೋಶದ ಕ್ಯಾನ್ಸರ್ ಸಂಬಂಧ ಆಪರೇಷನ್ ಮಾಡಿಸಿಕೊಳ್ಳಲು ನಟ ಶಿವರಾಜಕುಮಾರ್ ಡಿ.18ರಂದು ಅಮೆರಿಕಕ್ಕೆ ತೆರಳಿದ್ದರು. ಬಳಿಕ ಡಿ.24 ರಂದು ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಆಪರೇಷನ್ ಆದ ಒಂದು ತಿಂಗಳ ಬಳಿಕ ಅಮರಿಕಾದಿಂದ ತಾಯ್ನಾಡಿಗೆ ಇಂದು ಮರಳಿದ್ದಾರೆ.