ಬೆಂಗಳೂರು,ಮಾ.28-ಸಿನಿಮಾ ಥಿಯೇಟರ್‍ಗಳು ಹಾಗೂ ಖಾಸಗಿ ಟಿವಿ ಚಾನೆಲ್‍ಗಳಲ್ಲಿ ನಟ ಶಿವರಾಜ್‍ಕುಮಾರ್ ಅವರ ಸಿನಿಮಾ ಹಾಗೂ ಜಾಹೀರಾತುಗಳನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹೇಳಿದೆ.
ಸರ್ಕಾರಿ ಒಡೆತನದ ದೂರದರ್ಶನ ಹಾಗೂ ಡಿಡಿ ಚಂದನದಲ್ಲಿ ಮಾತ್ರ ಶಿವರಾಜ್‍ಕುಮಾರ್ ಅವರ ಸಿನಿಮಾ ಪ್ರಸಾರವನ್ನು ನಿರ್ಬಂಧಿಸಬಹುದು ಎಂದಿದೆ. ನಟ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಅವಧಿಯಲ್ಲಿ ಅವರ ಸಿನಿಮಾ ಮತ್ತು ಜಾಹೀರಾತುಗಳ ಪ್ರಸಾರವನ್ನು ನಿರ್ಬಂಧಿಸಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಆರ್ ರಘು ಕೌಟಿಲ್ಯ ದೂರು ನೀಡಿದ್ದರು.
ಜನಪ್ರಿಯ ಸಿನಿಮಾ ನಟ ಆಗಿರುವ ಕಾರಣ ಶಿವರಾಜ್‍ಕುಮಾರ್ ಅವರು ಜನರ ಮೇಲೆ ಪ್ರಭಾವ ಬೀರುತ್ತಾರೆ. ಆದ್ದರಿಂದ ಅವರ ಸಿನಿಮಾ ಪ್ರಸಾರಕ್ಕೆ ತಡೆ ನೀಡಬೇಕು ಎಂದು ದೂರು ನೀಡಿದ್ದರು. ಬಿಜೆಪಿ ಮುಖಂಡ ನೀಡಿದ್ದ ದೂರಿಗೆ ಪ್ರತಿಯಾಗಿ ಚುನಾವಣಾ ಆಯೋಗ ಈ ನಿರ್ಧಾರ ಕೈಗೊಂಡಿದೆ.
ಚುನಾವಣೆಗೆ ಸ್ರ್ಪಧಿಸುವ ನಟರು ಇರುವ ಸಿನಿಮಾಗಳು ಮತ್ತು ಜಾಹೀರಾತುಗಳ ಪ್ರಸಾರವನ್ನು ಖಾಸಗಿ ಟಿವಿ ಚಾನೆಲ್‍ಗಳು ಅಥವಾ ಚಿತ್ರಮಂದಿರಗಳಲ್ಲಿ ನಿರ್ಬಂಧಿಸಲಾಗುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ತನ್ನ ನಿರ್ದೇಶನದಲ್ಲಿ ನೀಡಿದೆ. ಅದೇ ಅಂಶವನ್ನು ರಾಜ್ಯ ಚುನಾವಣಾ ಅಧಿಕಾರಿಗಳು ತಮ್ಮ ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಿದ್ದಾರೆ. ಆದಾಗ್ಯೂ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸರ್ಕಾರಿ ಸ್ವಾಮ್ಯದ ದೂರದರ್ಶನ ಮತ್ತು ಡಿಡಿ ಚಂದನದಲ್ಲಿ ಚಲನಚಿತ್ರಗಳ ಪ್ರಸಾರವನ್ನು ನಿರ್ಬಂಧಿಸಬಹುದು ಎಂದು ಹೇಳಿದ್ದು, ಜಾಹೀರಾತುಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ.
ಶಿವರಾಜ್‍ಕುಮಾರ್ ಪತ್ನಿ ಗೀತಾ ಶಿವರಾಜ್‍ಕುಮಾರ್ ಶಿವಮೊಗ್ಗದಿಂದ ಲೋಕಸಭಾ ಚುನಾವಣೆಗೆ ಸ್ರ್ಪಧಿಸಿದ್ದಾರೆ. ಬಿಜೆಪಿಯ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಎದುರು ಕಾಂಗ್ರೆಸ್‍ನಿಂದ ಗೀತಾ ಶಿವರಾಜ್ ಕುಮಾರ್ ಕಣದಲ್ಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರಿ ಹಾಗೂ ಸಚಿವ ಮಧು ಬಂಗಾರಪ್ಪ ಅವರ ಅಕ್ಕ ಕೂಡ ಆಗಿರುವ ಗೀತಾ ಶಿವರಾಜ್ ಕುಮಾರ್ ಪರ ಶಿವರಾಜ್ ಕುಮಾರ್ ಅವರು ಪ್ರಚಾರ ನಡೆಸುತ್ತಿದ್ದಾರೆ. ಅದಲ್ಲದೇ ಕಾಂಗ್ರೆಸ್‍ನ ವಿವಿಧ ಅಭ್ಯರ್ಥಿಗಳ ಪರವಾಗಿಯೂ ಶಿವರಾಜ್ ಕುಮಾರ್ ಪ್ರಚಾರ ನಡೆಸಲಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಅವರು ಎರಡನೇ ಸಲ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಹಿಂದೆ 2014ರಲ್ಲಿ ಗೀತಾ ಶಿವರಾಜ್ ಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಸ್ರ್ಪಧಿಸಿದ್ದರು. ಆದರೆ, ಸೋಲು ಅನುಭವಿಸಿದರು. ಅದಾದ ಬಳಿಕ ಈಗ ಮತ್ತೆ ಗೀತಾ ಶಿವರಾಜ್ ಕುಮಾರ್ ಸ್ರ್ಪಧಿಸುತ್ತಿದ್ದಾರೆ. ಆದರೆ, 2009ರಿಂದಲೂ ಶಿವಮೊಗ್ಗ ಕ್ಷೇತ್ರ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿವೈ ರಾಘವೇಂದ್ರ ಹಿಡಿತದಲ್ಲಿದ್ದು, ಬಂಗಾರಪ್ಪ ಕುಟುಂಬ ಸೋಲುತ್ತಾ ಬಂದಿದೆ.