ಬೆಂಗಳೂರು, ಸೆ.29- ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಚರ್ಚೆ ಮಾಡಿ ಕಾವೇರಿ ನದಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹೇಳಿದರು.
ಕರ್ನಾಟಕ ಬಂದ್ ಪ್ರಯುಕ್ತ ಕನ್ನಡ ಚಲನಚಿತ್ರವಾಣಿಜ್ಯ ಮಂಡಳಿ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾವೇರಿ ತಾಯಿ ಇಲ್ಲಿಯೂ ಇರಬೇಕು, ಅಲ್ಲಿಗೂ ಹೋಗಬೇಕು. ಅದಕ್ಕೆ ತಾಯಿಯನ್ನು ದೇವರು ಎನ್ನುತ್ತೇವೆ. ಆಕೆ ಎಲ್ಲ ನೋವನ್ನು ತಡೆದುಕೊಳ್ಳುತ್ತಾಳೆ. ಆ ಶಕ್ತಿ ಆಕೆಗಿದೆ ಎಂದರು.
ಕಾವೇರಿ ಹೋರಾಟಕ್ಕೆ ಚಿತ್ರರಂಗದ ಕಲಾವಿದರು ಬಂದಿಲ್ಲ ಎಂದು ಪ್ರಶ್ನೆ ಮಾಡಲಾಗುತ್ತಿದೆ. ನಾವು ಬಂದು ಏನು ಮಾಡುವುದು. ನಾವು ನಿಮ್ಮಂತೆ ಮನುಷ್ಯರು, ಪ್ರತಿಭಟನೆಗೆ ಬಂದು ನಿಂತುಕೊಳ್ಳಬಹುದಷ್ಟೆ. ನಮಗೆ ಸ್ಟಾರ್ಡಂ ಕೊಟ್ಟಿರುವುದೇ ನೀವು, ಬೇಕಿದ್ದರೆ ಅದನ್ನು ವಾಪಾಸ್ ಕಿತ್ತುಕೊಳ್ಳಿ ಎಂದು ಪರೋಕ್ಷ ಅಸಮಧಾನ ವ್ಯಕ್ತಪಡಿಸಿದರು.
ಅಲ್ಲಿ ಮತ್ತು ಇಲ್ಲಿ ಇರುವ ಎರಡೂ ಸರ್ಕಾರಗಳು ಕುಳಿತು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಇದಕ್ಕೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಅಲ್ಲಿ ಮತ್ತು ಇಲ್ಲಿನ ರೈತರು ಒಂದೇ, ಸಮಸ್ಯೆ ಯಾರಿಗೆ ಆದರೂ ಅದು ನೋವೆ ತಾನೆ. ಚುನಾಯಿತ ಸರ್ಕಾರಗಳು ಕುಳಿತು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಕಾವೇರಿಗಾಗಿ ಕೆರಳಿದ ಚಿತ್ರರಂಗ, ಒಂದಾಗಿ ಹೋರಾಟಕ್ಕಿಳಿದ ತಾರೆಯರು
ಮೊನ್ನೆ ತಮಿಳುನಾಡಿನ ನಟ ಸಿದ್ಧಾರ್ಥ್ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸುವುದಕ್ಕೆ ಕೆಲವರು ಅಡ್ಡಿ ಪಡಿಸಿದ್ದಾರೆ, ಅದು ಯಾರು ಎಂದು ಗೋತ್ತಿಲ್ಲ. ಆದರೆ ಅವರು ಮಾಡಿದ್ದು ತಪ್ಪು. ನಟ ಸಿದ್ಧಾರ್ಥ್ಗೆ ಇದು ನೋವುಂಟು ಮಾಡಿದೆ, ದಯವಿಟ್ಟು ಕ್ಷಮಿಸಿ ಎಂದು ನಾವು ಅವರ ಕ್ಷಮೆ ಕೇಳುತ್ತೇವೆ. ಕನ್ನಡಿಗರು ಸಮಸ್ಯೆಯನ್ನು ನುಂಗಿ ಬದುಕುತ್ತಾರೆ. ಸಮಸ್ಯೆಯನ್ನು ನಾವು ಸಹಿಸಿಕೊಳ್ಳಬೇಕು, ಅದನ್ನು ಬಗೆಹರಿಸಲು ಯೋಚಿಸಬೇಕು. ಕನ್ನಡಿಗರು ಎಲ್ಲಾ ಭಾಷೆಯ ಚಿತ್ರಗಳನ್ನು ನೋಡುತ್ತಾರೆ ಎಂದರು.
ಹೋರಾಟ ಮಾಡಬೇಕು, ಏನು ಹೋರಾಟ ಮಾಡುವುದು. ಯಾರೇ ಆದರೂ ಪರಿಸ್ಥಿತಿ ನೋಡಿ ಅನುಕೂಲ ಪಡೆದುಕೊಳ್ಳಬಾರದು. ಅದು ಹೋರಾಟದ ಉದ್ದೇಶವಲ್ಲ. ಕಲ್ಲು ಹೊಡೆದರೆ ಅದು ಹೋರಾಟವೇ ಎಂದು ಪ್ರಶ್ನಿಸಿದರು.ಕನ್ನಡಿಗರಿಗೆ ವಿಶ್ವಾದ್ಯಂತ ಗೌರವ ಇದೆ. ಟ್ವಿಟ್ ಮಾಡಿದಾಕ್ಷಣ ಕಾವೇರಿ ಬಗ್ಗೆ ಪ್ರೀತಿ ಇದೆ, ಇಲ್ಲವಾದರೆ ಇಲ್ಲ ಎಂದಲ್ಲ.
ನಾನು ಹೃದಯದಿಂದ ಮಾತನಾಡುತ್ತೇನೆ. ಮೈಂಡ್ನಿಂದ ಮಾತನಾಡುವುದಿಲ್ಲ. ಚಿತ್ರರಂಗದ ಯಾರನ್ನೂ ಬ್ಲೆಮ್ ಮಾಡಬೇಡಿ. ಅವರು ಬಂದಿಲ್ಲ, ಇವರು ಬಂದಿಲ್ಲ ಎಂದು ದೂಷಿಸಬೇಡಿ. ಏನೇ ಮಾಡಿದರೂ ಪ್ರಾಮಾಣಿಕವಾಗಿ ಮಾಡಿ, ನಾವು ಇರುವುದರಿಂದ ಎಲ್ಲರೂ ಬಂದಂತೆ. ತಮಿಳುನಾಡು ಎಲ್ಲಿದೆ ಪಕ್ಕದಲ್ಲೇ ಇದೆ ತಾನೇ. ಇಲ್ಲಿಗೆ ಬರದಿದ್ದರೆ ಎಂದರೆ ಅವರಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಇಷ್ಟ ಇಲ್ಲ ಎಂದಲ್ಲ. ಕೆಲವರು ನಮ್ಮ ಮುಖ ನೋಡಲು ಬರುತ್ತಾರೆ, ಇನ್ನೂ ಕೆಲವರು ಸೆಲಿ ತೆಗೆದುಕೊಳ್ಳಲು ಬರುತ್ತಾರೆ. ನಮಗೂ ಸ್ವಲ್ಪ ಕಾಲಾವಕಾಶ ಕೊಡಿ ಎಂದರು.
ತಮಿಳುನಾಡು ಸರ್ಕಾರದ ಜೊತೆ ಚರ್ಚೆ ಮಾಡಿ, ಕೇಂದ್ರ ಸರ್ಕಾರವೂ ಮಧ್ಯ ಪ್ರವೇಶ ಮಾಡಲಿ. ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆ ಹರಿಸಿ. ವಾರದಲ್ಲಿ ಮಳೆ ಬಂದರೆ ಸಮಸ್ಯೆ ತನ್ನಷ್ಟಕ್ಕೆ ಬಗೆ ಹರಿಯುತ್ತದೆ. ಇದಕ್ಕೆ ಪರಸ್ಪರ ನಂಬಿಕೆ ವಿಶ್ವಾಸ ಬೇಕು ಎಂದು ಹೇಳಿದರು.