Tuesday, August 26, 2025
Homeರಾಷ್ಟ್ರೀಯ | Nationalಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಶಿವರಾಜ್‌ಸಿಂಗ್‌ ಚೌಹಾಣ್‌ ಆಯ್ಕೆ ಬಹುತೇಕ ಫಿಕ್ಸ್..?

ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಶಿವರಾಜ್‌ಸಿಂಗ್‌ ಚೌಹಾಣ್‌ ಆಯ್ಕೆ ಬಹುತೇಕ ಫಿಕ್ಸ್..?

Shivraj Singh Chouhan Likely to Become BJP National President

ನವದೆಹಲಿ,ಆ.26- ಹಲವು ತಿಂಗಳಿನಿಂದ ಹರಿದಾಡುತ್ತಿರುವ ಅಂತೆಕಂತೆ ಗಾಳಿಸುದ್ದಿ, ಊಹಾಪೋಹಗಳಿಗೆ ಸದ್ಯದಲ್ಲೇ ತೆರೆಬೀಳುವ ಸಾಧ್ಯತೆ ದಟ್ಟವಾಗಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ ನಡುವೆ ಸುದೀರ್ಘ ಮಾತುಕತೆ ನಡೆದಿದೆ.

ಪ್ರಮುಖ ಅಂಶವೇನಂದರೆ, ಬಿಜೆಪಿಯ ರಾಷ್ಟ್ರಾಧ್ಯಕ್ಷ ಹುದ್ದೆಗೆ ಮಂಚೂಣಿಯಲ್ಲಿ ಕೇಳಿ ಬರುತ್ತಿದ್ದ ಹೆಸರು ಶಿವರಾಜ್‌ ಸಿಂಗ್‌. ಮೂಲಗಳ ಪ್ರಕಾರ, ಆರ್‌ಎಸ್‌‍ಎಸ್‌‍ ಪ್ರಥಮ ಆಯ್ಕೆ ಕೂಡಾ ಇವರೇ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಹಾಗಾಗಿ, ರಾಷ್ಟ್ರಾಧ್ಯಕ್ಷ ಹುದ್ದೆಗೆ ಯಾರ ಹೆಸರು ಅಂತಿಮವಾಗುತ್ತದೆ ಎನ್ನುವ ಕುತೂಹಲಕ್ಕೆ ಸದ್ಯದಲ್ಲೇ ತೆರೆಬೀಳಲಿದೆ ಎಂದು ಹೇಳಲಾಗುತ್ತಿದೆ.

ಸುಮಾರು ಎರಡು ವರ್ಷಗಳ ನಂತರ, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ಮೋಹನ್‌ ಭಾಗವತ್‌ ನಡುವಿನ ಭೇಟಿಯಾಗಿದೆ. ದೆಹಲಿಯ ಝಂಡೇವಾಲ್‌ನಲ್ಲಿರುವ ಸಂಘದ ಕೇಶವಕುಂಜ ಕಚೇರಿಯಲ್ಲಿ ಈ ಭೇಟಿಯಾಗಿದೆ ಎಂದು ಹೇಳಲಾಗುತ್ತಿದೆ.

ಉಪರಾಷ್ಟ್ರಪತಿ ಚುನಾವಣೆ ಇದೇ ಬರುವ ಸೆಪ್ಟಂಬರ್‌ ಒಂಬತ್ತರಂದು ನಡೆಯಲಿದೆ. ಇದು ಮುಗಿದ ಬೆನ್ನಲ್ಲೇ, ಬಿಜೆಪಿಯು ತನ್ನ ಹೊಸ ರಾಷ್ಟ್ರಾಧ್ಯಕ್ಷರ ಹೆಸರನ್ನು ಪ್ರಕಟಿಸುವ ಸಾಧ್ಯತೆಯಿದೆ. ಆ ಮೂಲಕ ಬಹುದಿನಗಳಿಂದ ಪೆಂಡಿಂಗ್‌ ಇರುವ ಈ ಪ್ರಕ್ರಿಯೆಗೆ ಫುಲ್‌ ಸ್ಟಾಪ್‌ ಬೀಳಲಿದೆ.
ಸುಮಾರು 45 ನಿಮಿಷಗಳ ಕಾಲ ಇಬ್ಬರೂ ನಾಯಕರು ಮಾತುಕತೆಯನ್ನು ನಡೆಸಿದ್ದಾರೆ.

ಹರಿದಾಡುತ್ತಿದ್ದ ಸುದ್ದಿಯ ಪ್ರಕಾರ, ಶಿವರಾಜ್‌ ಸಿಂಗ್‌ ಚೌಹಾಣ್‌, ಧರ್ಮೇಂದ್ರ ಪ್ರಧಾನ್‌ ಮತ್ತು ಭೂಪೇಂದ್ರ ಯಾದವ್‌, ಈ ಮೂವರ ಹೆಸರು ರಾಷ್ಟ್ರಾಧ್ಯಕ್ಷರ ಹುದ್ದೆಗೆ ಕೇಳಿ ಬರುತ್ತಿತ್ತು.
ಮೋಹನ್‌ ಭಾಗವತ್‌ ಅವರನ್ನು ಭೇಟಿಯಾಗುವ ಮುನ್ನ ಶಿವರಾಜ್‌ ಸಿಂಗ್‌, ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಮತ್ತು ಡಾ. ಚಿನಯ್‌ ಪಾಂಡ್ಯ ಅವರೊಂದಿಗೆ, ರಾಜಧಾನಿಯ ಪ್ರಗತಿ ಮೈದನಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರ್‌ಎಸ್‌‍ಎಸ್‌‍ ಮುಖ್ಯಸ್ಥರ ಜೊತೆಗಿನ ಭೇಟಿಯ ನಂತರ, ಶಿವರಾಜ್‌, ಭೋಪಾಲ್‌ಗೆ ಪ್ರಯಾಣ ಬೆಳೆಸಿದರು.

ಇಬ್ಬರು ನಾಯಕರ ನಡುವಿನ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಯ ಆಂತರಿಕ ಮೂಲಗಳ ಪ್ರಕಾರ, ಸೆಪ್ಟಂಬರ್‌ 28ರೊಳಗೆ ರಾಷ್ಟ್ರಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಆ ಮೂಲಕ, ಬಿಹಾರ ಚುನಾವಣೆಗೂ ಮುನ್ನವೇ ಕುತೂಹಲಕ್ಕೆ ತೆರೆ ಎಳೆಯಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಬಿಜೆಪಿ ನಾಯಕರು ಮತ್ತು ಸಂಘದ ನಾಯಕರ ನಡುವಿನ ಸಮನ್ವಯದ ಕೊರತೆಯಿಂದಾಗಿ ಅಧ್ಯಕ್ಷರ ಆಯ್ಕೆ ವಿಳಂಬವಾಗಿದೆ ಎಂದು ಹೇಳಲಾಗುತ್ತಿದೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಆಯ್ಕೆಗೆ ಸಂಘದಲ್ಲಿ ಸಹಮತ ವ್ಯಕ್ತವಾಗದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಮುಂದಕ್ಕೆ ಹೋಗುತ್ತಲೇ ಇತ್ತು.

ಈ ಹಿನ್ನೆಲೆಯಲ್ಲಿ ಮೋಹನ್‌ ಭಾಗವತ್‌ ಶಿವರಾಜ್‌ ಸಿಂಗ್‌ ಚೌಹಾಣ್‌ ಭೇಟಿ ಮಹತ್ವವನ್ನು ಪಡೆದುಕೊಂಡಿದೆ. ಆರ್‌ಎಸ್‌‍ಎಸ್‌‍ ಮುಖ್ಯಸ್ಥರನ್ನು ಚೌಹಾಣ್‌, ಭೇಟಿಯಾಗಿರುವುದು ಪಾರ್ಟಿಯಲ್ಲಿ ಸಂಭಾವ್ಯ ಬದಲಾವಣೆಯ ಮುನ್ಸೂಚನೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಇದುವರೆಗೆ ಚೌಹಾಣ್‌, ಬಿಜೆಪಿ ಮತ್ತು ಸಂಘದಿಂದ ವ್ಯಕ್ತವಾಗಿಲ್ಲ.

RELATED ARTICLES

Latest News