ಬೆಂಗಳೂರು,ಅ.25-ಸ್ಟೋಟದಿಂದ ಮನೆ ಧ್ವಂಸವಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಈ ಬಗ್ಗೆ ತನಿಖೆಯಾಗ ಬೇಕೆಂದು ಆಗ್ರಹಿಸಿದ್ದಾರೆ. ಕೆಆರ್‌ಪುರಂನ ತ್ರಿವೇಣಿ ನಗರದ ಮನೆಯೊಂದರಲ್ಲಿ ಸ್ಟೋಟ ಸಂಭವಿಸಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅವರು ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಇಷ್ಟು ಪ್ರಮಾಣದಲ್ಲಿ ಹಾನಿಯಾಗಲು ಸಾಧ್ಯನಾ ಎಂದು ಪ್ರಶ್ನಿಸಿದ್ದಾರೆ.
ಗಟ್ಟಿಮುಟ್ಟಾದ ಆರ್‌ಸಿಸಿ ಮನೆ ಧ್ವಂಸವಾಗಲು ಸಾಧ್ಯವೇ ಅಥವಾ ಬೇರೆನಾ ಅನ್ನೋದು ತನಿಖೆಯಾಗಬೇಕು ಎಂದರು.ಈ ಘಟನೆಯಿಂದ ಸುತ್ತಮುತ್ತಲಿನ ಜನರು ಭಯಬೀತರಾಗಿದ್ದಾರೆ. ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ಇದು ಹೇಗೆ ಬ್ಲಾಸ್ಟ್ ಆಯ್ತು, ಕಾರಣ ಏನು ಎಂಬುವುದರ ಬಗ್ಗೆ ಸಮಗ್ರ ತನಿಖೆಯಾಗಲಿ.ಮೃತ ವೃದ್ಧೆ ಕುಟುಂಬಕ್ಕೆ ಸರ್ಕಾರ ಪರಿಹಾರ ಕೊಡಲಿ ಎಂದರು.
ದಿಗ್ಬ್ರಾಂತನಾದೆ: ಶಾಸಕ ಬೈರತಿ ಬಸವರಾಜು ರವರು ಪ್ರತಿಕ್ರಿಯಿಸಿ ಘಟನೆ ನೋಡಿ ದಿಗ್ಬ್ರಾಂತನಾದೆ. ಗ್ಯಾಸನಿಂದ ಆಗಿದೆಯೋ, ಸ್ಟೋಟಕದಿಂದ ಆಗಿದೆಯೋ ಗೊತ್ತಾಗಬೇಕು. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿರುವುದು ನೋಡಿದರೆ ಅನುಮಾನ ಬರುತ್ತಿದೆ ಎಂದರು. ಗಾಯಾಳುಗಳ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ ಶಾಸಕರು,ಇದೇ ವೇಳೆ ವೈಯಕ್ತಿಕವಾಗಿ ಮೃತರ ಕುಟುಂಬಕ್ಕೆ 1ಲಕ್ಷ ಪರಿಹಾರ ಘೋಷಿಸಿದರು.
ತನಿಖೆ ಮುಂದುವರೆದಿದೆ: ಈ ಮನೆಯಲ್ಲಿ ಬೆಳಗ್ಗೆ 7.30 ರ ಸುಮಾರಿಗೆ ಗ್ಯಾಸ್ ಸ್ಟವ್ ಹಚ್ಚುತ್ತಿದ್ದಂತೆ ಸ್ಟೋಟವಾಗಿದೆ. ಇವರ ಮನೆಯಿಂದ ಗ್ಯಾಸ್ ವಾಸನೆ ಬರುತ್ತಿತ್ತು ಎಂದು ನೆರೆಹೊರೆಯವರು ಹೇಳುತ್ತಿದ್ದಾರೆ.ತನಿಖೆ ಮುಂದುವರೆಸಿದ್ದೇವೆ ಎಂದು ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದ್ದಾರೆ.
ಸೊಕೋ ತಂಡ, ಎಫ್‌ಎಸ್‌ಎಲ್ ತಂಡ ಮತ್ತು ಬಾಂಬ್ ನಿಷ್ಕ್ರಿಯದಳದಿಂದ ಪರಿಶೀಲನೆ ನಡೆಯುತ್ತಿದೆ ಎಂದರು.ಸ್ಟೋಟದಿಂದ ಅಕ್ಕಯ್ಯಮ ಎಂಬುವವರು ಮೃತಪಟ್ಟಿದ್ದಾರೆ. ಅವರ ಮಗ, ಮೊಮಕ್ಕಳು ಮನೆಯಲ್ಲಿದ್ದರು. ಒಬ್ಬರ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
