Sunday, September 8, 2024
Homeಅಂತಾರಾಷ್ಟ್ರೀಯ | Internationalಚುನಾವಣಾ ರ‍್ಯಾಲಿ ವೇಳೆ ಟ್ರಂಪ್ ಮೇಲೆ ಗುಂಡಿನ ದಾಳಿ, ಪ್ರಾಣಾಪಾಯದಿಂದ ಪಾರು

ಚುನಾವಣಾ ರ‍್ಯಾಲಿ ವೇಳೆ ಟ್ರಂಪ್ ಮೇಲೆ ಗುಂಡಿನ ದಾಳಿ, ಪ್ರಾಣಾಪಾಯದಿಂದ ಪಾರು

ಚಿಕಾಗೋ, ಜು.14- ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ಈ ವರ್ಷದ ನವೆಂಬರ್‍ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಅವರು ಚುನಾವನಾ ರ್ಯಾಲಿಯಲ್ಲಿ ಮಾತನಾಡುತ್ತಿದ್ದಾಗ ಬಂದೂಕುಧಾರಿ ದುಷ್ಕರ್ಮಿಯೊಬ್ಬ ಗುಂಡಿನ ಮಳೆಗರೆದಿದ್ದು, ಗಾಯಗೊಂಡಿರುವ ಟ್ರಂಪ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರ ರ್ಯಾಲಿಯನ್ನುದ್ದೇಶಿಸಿ ಟ್ರಂಪ್ ಅವರು ಭಾಷಣ ಮಾಡುತ್ತಿದ್ದಾಗ ಈ ಗುಂಡಿನ ದಾಳಿ ನಡೆದಿದೆ. ಅವರು ಸುರಕ್ಷಿತವಾಗಿದ್ದಾರೆ ಮತ್ತು ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಅವರಿಗೆ ಆರೈಕೆ ಮಾಡಲಾಗುತ್ತಿದೆ ಎಂದು ಟ್ರಂಪ್ ಅವರ ವಕ್ತಾರ ಸ್ಟೀವನ್ ಶ್ಯೂಗ್ ಅವರು ತಿಳಿಸಿದ್ದಾರೆ.

ಟ್ರಂಪ್ ಅವರ ಮುಖ ಮತ್ತು ಕಿವಿಯ ಬಳಿ ರಕ್ತ ಸೋರುತ್ತಿದ್ದು, ಕುತ್ತಿಗೆಯನ್ನು ಹಿಡಿದುಕೊಂಡು ನರಳಿದರು. ಅವರ ಭಾಷಣದ ವೇಳೆ ಹಲವಾರು ಸುತ್ತು ಗುಂಡು ಹಾರಾಟದ ಸದ್ದು ಕೇಳಿಸಿತು ಎಂದು ಮಾಧ್ಯಮಗಗಳ ವರದಿಗಳು ತಿಳಿಸಿವೆ.

ಸೀಕ್ರೆಟ್ ಸರ್ವೀಸ್‍ನ ಭದ್ರತಾ ಸಿಬ್ಬಂದಿ ತತ್‍ಕ್ಷಣವೇ ಕಾರ್ಯಪ್ರವತ್ತರಾಗಿ ಟ್ರಂಪ್ ಅವರನ್ನು ಸುತ್ತುವರೆದು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಈ ಸಂದರ್ಭದಲ್ಲಿ ಟ್ರಂಪ್ ಅವರು ಗಾಳಿಯಲ್ಲಿ ಮುಷ್ಟಿ ಗುದ್ದಿ ಆಕ್ರೋಶ ವ್ಯಕ್ತಪಡಿಸಿದರೆ, ನೆರೆದಿದ್ದ ಜನಸಮೂಹ ಚೀರಾಡಿದ ಸದ್ದು ಕೇಳಿಬಂದಿತು.

ಮಾಜಿ ಅಧ್ಯಕ್ಷರ ಮೇಲೆ ನಡೆದ ಹತ್ಯೆ ಯತ್ನದ ಕುರಿತು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಪ್ರಾಥಮಿಕ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.ಈ ಘೋರ ಕೃತ್ಯ ನಡೆದಾಗ ಕ್ಷಿಪ್ರ ಕ್ರಮ ಕೈಗೊಂಡ ಭದ್ರತಾ ಸಿಬ್ಬಂದಿಗೆ ಟ್ರಂಪ್ ಧನ್ಯವಾದ ಅರ್ಪಿಸಿದ್ದಾರೆ ಎಂದು ಶ್ಯೂಗ್ ಹೇಳಿದ್ದಾರೆ.

ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಅವರ ರ್ಯಾಲಿಯಲ್ಲಾದ ದಾಳಿಯ ಸುದ್ದಿ ಕೇಳಿ ನನಗೆ ದಿಗ್ಭ್ರಮೆಯಾಯಿತು. ಅವರು ಸುರಕ್ಷಿತವಾಗಿರುವ ಬಗ್ಗೆ ತಿಳಿದು ಸಮಾಧಾನವಾಯಿತು. ರಾಜಕೀಯ ಹಿಂಸಾಚಾರಕ್ಕೆ ನಮ್ಮ ದೇಶದಲ್ಲಿ ತಾಣವಿಲ್ಲ ಎಂದು ಸೆನೆಟ್‍ನ ಬಹುಮತದ ನಾಯಕ ಚಕ್‍ಷೂಮರ್ ನುಡಿದಿದ್ದಾರೆ.

ಇದು ಪ್ರತಿಯೊಬ್ಬ ಸ್ವಾತಂತ್ರ್ಯಪ್ರೇಮಿ ಅಮೆರಿಕನ್ನರಿಗೂ ಆಘಾತಕಾರಿ ಘಟನೆಯಾಗಿದೆ. ಅಧ್ಯಕ್ಷೀಯ ಅಭ್ಯರ್ಥಿಗಳ ಮೇಲಿನ ಹಿಂಸಾಚಾರವನ್ನು ನಡೆಯಲು ಬಿಡಬಾರದು. ನಾವು ಡೊನಾಲ್ಡ್ ಟ್ರಂಪ್, ಅವರ ಇಡೀ ಕುಟುಂಬದ ಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ ಎಂದು ಅಧ್ಯಕ್ಷೀಯ ಚುನಾವಣೆ ರಿಪಬ್ಲಿಕನ್ ಪಕ್ಷದ ಮಾಜಿ ಅಭ್ಯರ್ಥಿ ನಿಕ್ಕಿ ಹ್ಯಾರಿ ತಿಳಿಸಿದ್ದಾರೆ.

ಟ್ರಂಪ್ ಅವರಿಗೆ ನನ್ನ ಬೆಂಬಲ ಇದೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್‍ನ ಸಿಇಒ ಮತ್ತು ಮಾಲೀಕ ಎಲಾನ್ ಮಸ್ಕ್ ಅವರು ಪ್ರತಿಪಾದಿಸಿದ್ದಾರೆ.ನಾನು ಟ್ರಂಪ್ ಅವರಿಗೆ ಪೂರ್ಣ ಬೆಂಬಲ ನೀಡುತ್ತೇನೆ ಮತ್ತು ಅವರ ಶೀಘ್ರ ಚೇತರಿಕೆಗೆ ಹಾರೈಸುತ್ತೇನೆ ಎಂದು ಅವರು ಹೇಳಿದ್ದಾರೆ.

ಟ್ರಂಪ್ ಅವರ ನಿಕಟವರ್ತಿ, ಭಾರತೀಯ ಮೂಲದ ಅಮೆರಿಕನ್ ವಿವೇಕ್ ರಾಮಸ್ವಾಮಿ ಅವರು ಟ್ರಂಪ್‍ಗಾಗಿ ಪ್ರಾರ್ಥಿಸಿ ಎಂದು ಕರೆ ನೀಡಿದ್ದಾರೆ.ಅಮೆರಿಕದ ಮಾಧ್ಯಮ ವರದಿಗಳ ಪ್ರಕಾರ, ಡೊನಾಲ್ಡï ಟ್ರಂಪ್ ಪೆನ್ಸಿಲ್ವೇನಿಯಾದ ಬಟ್ಲರ್‍ನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆಗ ಏಕಾಏಕಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳು ಒಂದರ ಹಿಂದೆ ಒಂದರಂತೆ ಹಲವು ಸುತ್ತು ಗುಂಡು ಹಾರಿಸಿದ್ದಾರೆ.

ಟ್ರಂಪ್ ಬಲ ಕಿವಿಗೆ ಗಾಯವಾಗಿದೆ, ರಹಸ್ಯ ಸೇವಾ ತಂಡ ಕೂಡಲೇ ಅವರನ್ನು ಸ್ಥಳದಿಂದ ಹೊರಗೆ ಕರೆದೊಯ್ದರು. ಟ್ರಂಪ್ ಮೇಲೆ ಬುಲೆಟ್ ಹಾರಿದ ತಕ್ಷಣ, ಪೊಲೀಸರೂ ಕಾರ್ಯಪ್ರವೃತ್ತರಾಗಿ ಪ್ರತಿದಾಳಿ ಆರಂಭಿಸಿದರು. ದಾಳಿಯಲ್ಲಿ ಶಂಕಿತ ಶೂಟರ್ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ತಮ್ಮ ಪ್ರತಿಸ್ಪರ್„ ಟ್ರಂಪ್ ಮೇಲಿನ ಮಾರಣಾಂತಿಕ ದಾಳಿಯನ್ನು ಖಂಡಿಸಿದರು.

ಜಾರ್ಜ್ ಬುಷ್, ಬರಾಕ್ ಒಬಾಮಾ ಸೇರಿದಂತೆ ಇತರರು ದಾಳಿಯನ್ನು ಖಂಡಿಸಿದ್ದಾರೆ.ನಮ್ಮ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಹಿಂಸೆಗೆ ಜಾಗವಿಲ್ಲ ಏನಾಯಿತು ಎಂದು ನಮಗೆ ಇನ್ನೂ ನಿಖರವಾಗಿ ತಿಳಿದಿಲ್ಲ, ಟ್ರಂಪ್ ಗಂಭೀರವಾಗಿ ಗಾಯಗೊಂಡಿಲ್ಲ ಇದಕ್ಕಾಗಿ ನಾವು ನಿರಾಳರಾಗಬೇಕು ಎಂದಿದ್ದಾರೆ.

RELATED ARTICLES

Latest News