Sunday, March 9, 2025
Homeರಾಜ್ಯದೇಶದಲ್ಲೇ ಅತಿಹೆಚ್ಚು ಬಜೆಟ್ ಮಂಡಿಸಿದ 2ನೇ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಿದ್ದರಾಮಯ್ಯ

ದೇಶದಲ್ಲೇ ಅತಿಹೆಚ್ಚು ಬಜೆಟ್ ಮಂಡಿಸಿದ 2ನೇ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಿದ್ದರಾಮಯ್ಯ

Siddaramaiah becomes the 2nd Chief Minister to present the highest budget in the country

ಬೆಂಗಳೂರು, ಮಾ.7- ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸಕ್ತ 2025-26ನೇ ಸಾಲಿನ ಆಯವ್ಯಯವನ್ನು ಮಂಡಿಸುವ ಮೂಲಕ ದೇಶದಲ್ಲೇ ಅತಿಹೆಚ್ಚು ಬಜೆಟ್ ಮಂಡಿಸಿದ 2ನೇ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕರ್ನಾಟಕದ ರಾಜ್ಯಪಾಲರಾಗಿದ್ದ ಗುಜರಾತ್‌ನ ಹಣಕಾಸು ಸಚಿವ ವಜುಬಾಯಿ ವಾಲಾ ಅವರು ಅಲ್ಲಿನ ಹಣಕಾಸು ಸಚಿವರಾಗಿದ್ದ ವೇಳೆ 18 ಬಜೆಟ್ ಮಂಡಿಸಿದ ದಾಖಲೆ ಅವರ ಹೆಸರಿನಲ್ಲಿದೆ. ಇದನ್ನು ಬಿಟ್ಟರೆ ದೇಶದಲ್ಲಿ 2ನೇ ಅತಿಹೆಚ್ಚು ಬಜೆಟ್ ಮಂಡಿಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ.

ಈ ಹಿಂದೆ ಅಂದರೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು 13 ಬಜೆಟ್ ಮಂಡಿಸಿದ್ದರು. ಆ ದಾಖಲೆಯನ್ನು ಮುರಿದಿರುವ ಸಿದ್ದರಾಮಯ್ಯನವರು ಇದೀಗ 16 ಬಜೆಟ್ ಮಂಡಿಸಿದ ಏಕೈಕ ಹಣಕಾಸು ಸಚಿವರೆಂಬ ಕೀರ್ತಿಗೆ ಭಾಜನರಾಗಿದ್ದಾರೆ. 1994ರಲ್ಲಿ ಮೊದಲ ಬಾರಿಗೆ ಜನತಾದಳ ಅಧಿಕಾರದಲ್ಲಿದ್ದಾಗ ಹಣಕಾಸು ಖಾತೆ ಹೊಂದಿದ್ದ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿ ಗಮನಸೆಳೆದಿದ್ದರು. ಆದಾದ ಬಳಿಕ ಮತ್ತೊಂದು ಬಜೆಟ್ ಮಂಡನೆ ಮಾಡಿದರು.

ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ದೇವೇಗೌಡರಿಗೆ ಪ್ರಧಾನಿ ಹುದ್ದೆ ಲಭಿಸಿದ್ದರಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಬಳಿಕ ಜೆ.ಎಚ್.ಪಟೇಲ್ ಅವರು ಸಿಎಂ ಆಗಿ, ಸಿದ್ದರಾಮಯ್ಯನವರು ಡಿಸಿಎಂ ಹುದ್ದೆಗೆ ಬಡ್ತಿ ಪಡೆದು ಬಜೆಟ್ ಮಂಡನೆ ಮಾಡಿದ್ದರು.
2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ಧರ್ಮಸಿಂಗ್‌ ಮುಖ್ಯಮಂತ್ರಿಯಾದರೆ ಸಿದ್ದರಾಮಯ್ಯನವರು ಡಿಸಿಎಂ ಆಗಿದ್ದರು. ಆ ವೇಳೆಯೂ ಎರಡು ಬಜೆಟ್ ಮಂಡನೆ ಮಾಡಿದ್ದರು.

ನಂತರ 2013ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಸತತ 5 ವರ್ಷಗಳ ಕಾಲ ಸುದೀರ್ಘ ಬಜೆಟ್ ಮಂಡನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. 2023ರಲ್ಲಿ ಕಾಂಗ್ರೆಸ್ ಪುನಃ ಜನಾದೇಶ ಪಡೆದು ಅಧಿಕಾರ ಹಿಡಿದಾಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದರ ಜೊತೆಗೆ ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡು ಎರಡು ಬಾರಿ ಬಜೆಟ್ ಮಂಡಿಸಿದ್ದರು.

ಇದೀಗ ಮತ್ತೊಂದು ಬಜೆಟ್ ಮಂಡಿಸುವ ಮೂಲಕ ಕರ್ನಾಟಕದಲ್ಲಿ 16 ಬಜೆಟ್ ಮಂಡಿಸಿದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆ ಗೆ ಪಾತ್ರರಾಗಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದ ರಾಮಕೃಷ್ಣ ಹೆಗಡೆ, ವೀರಪ್ಪ ಮೊಯ್ಲಿ, ಕೆಂಗಲ್ ಹನುಮಂತಯ್ಯ, ಎಸ್.ಆರ್.ಕಂಠಿ, ಎಸ್.ಬಂಗಾರಪ್ಪ, ಎಸ್.ಎಂ.ಕೃಷ್ಣ, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್ ಹಾಗೂ ಹಣಕಾಸು ಸಚಿವರಾಗಿದ್ದ ಎಂ.ವೈ.ಗೋರ್ಪಡೆ, ಎಂ.ವಿ.ರಾಜಶೇಖರ್ ಮೂರ್ತಿ ಬಜೆಟ್ ಮಂಡಿಸಿದ್ದರು.

RELATED ARTICLES

Latest News