ಹುಬ್ಬಳ್ಳಿ,ಜು.21- ರಾಜ್ಯದ ಎಲ್ಲಾ ಶಾಸಕರ ಕ್ಷೇತ್ರಗಳಿಗೂ ತಲಾ 50 ಕೋಟಿ ರೂ. ಅನುದಾನ ನೀಡುವ ಸಂದರ್ಭದಲ್ಲಿ ನಡೆದ ಚರ್ಚೆಯನ್ನು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರಾಗಿರುವ ಬಸವರಾಜರಾಯರೆಡ್ಡಿ ಬಹಿರಂಗಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ತಯಾರಿಕೆಯ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಎಲ್ಲಾ ಶಾಸಕರಿಗೂ ತಲಾ 50 ಕೋಟಿ ರೂ.ಗಳನ್ನು ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ನಾನು ಕೂಡ ಇದ್ದೆ. ಎಲ್ಲರಿಗೂ 50 ಕೋಟಿ ರೂ. ನೀಡಬೇಕು ಎಂದರೆ ಸುಮಾರು 11,200 ಕೋಟಿ ರೂ.ಗಳ ಹಣ ಬೇಕಾಗುತ್ತದೆ. ನಮ್ಮ ಬಳಿ ಅಷ್ಟೊಂದು ಅನುದಾನ ಲಭ್ಯವಿಲ್ಲ ಎಂದು ಆರ್ಥಿಕ ಇಲಾಖಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಅದರ ಬದಲಾಗಿ ಬಿಬಿಎಂಪಿಗೆ ಈ ವರ್ಷ 7 ಸಾವಿರ ಕೋಟಿ ರೂ.ಗಳ ವಿಶೇಷ ಅನುದಾನ ನೀಡುತ್ತಿದ್ದೇವೆ. ಆ ವ್ಯಾಪ್ತಿಗೆ ತಲಾ 50 ಕೋಟಿ ದೊಡ್ಡ ಮೊತ್ತ ಆಗುವುದಿಲ್ಲ. ಬಿಬಿಎಂಪಿಯಲ್ಲಿ 28 ಶಾಸಕರ ಪೈಕಿ ಕಾಂಗ್ರೆಸ್‍ನ 12 ಮಂದಿ, ವಿರೋಧಪಕ್ಷದ 16 ಮಂದಿ ಶಾಸಕರಿದ್ದಾರೆ. ಅವರಿಗೆ ವಿಶೇಷ ಅನುದಾನದಲ್ಲೇ ಅಗತ್ಯತೆ ಆಧರಿಸಿ ಅನುದಾನ ಒದಗಿಸಬಹುದು. ಇದರಿಂದ 100 ಕೋಟಿ ರೂ. ಅಥವಾ 200 ಕೋಟಿ ರೂ.ಗಳಷ್ಟಾದರೂ ಅವರಿಗೆ ದೊರೆಯುವ ಸಾಧ್ಯತೆ ಇದೆ ಎಂದರು.
ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ 41 ಶಾಸಕರಲ್ಲಿ 27 ಮಂದಿ ಕಾಂಗ್ರೆಸಿಗರು, 14 ಮಂದಿ ವಿರೋಧಪಕ್ಷದ ಶಾಸಕರಿದ್ದಾರೆ. ಕೆಕೆಆರ್‍ಡಿಬಿಗೂ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡುತ್ತದೆ. ಹೀಗಾಗಿ ಅವರಿಗೂ 50 ಕೋಟಿ ರೂ. ಬದಲಾಗಿ 25 ಕೋಟಿ ರೂ. ಸಾಕು ಎಂಬ ಸಲಹೆ ಕೇಳಿಬಂದಿತು. ಒಂದು ವೇಳೆ ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಒತ್ತಡ ಹಾಕಿದರೆ ವಿಶೇಷ ಮಂಜೂರಾತಿ ಮಾಡಿ 50 ಕೋಟಿ ರೂ.ಗಳನ್ನು ನೀಡುವ ವಿವೇಚನಾಧಿಕಾರವನ್ನು ಮುಖ್ಯಮಂತ್ರಿಗಳು ಕಾಯ್ದುಕೊಳ್ಳಬಹುದು ಎಂದು ಹೇಳಲಾಯಿತು. ವಿರೋಧಪಕ್ಷದವರಿಗೆ ತಲಾ 25 ಕೋಟಿ ರೂ., ಆಡಳಿತ ಪಕ್ಷದವರಿಗೆ 50 ಕೋಟಿ ರೂ. ಅನುದಾನ ನೀಡುವುದನ್ನು ಒಳಗೊಂಡಂತೆ ಒಟ್ಟು 7,425 ಕೋಟಿ ರೂ.ಗಳ ವೆಚ್ಚವಾಗುವ ಅಂದಾಜಿತ್ತು. ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್ ಶಾಸಕರು ಪಟ್ಟು ಹಿಡಿದಾಗ ಅವರಿಗೆ ಹೆಚ್ಚುವರಿ ಮಂಜೂರು ಮಾಡಿದರೆ 8,075 ಕೋಟಿ ರೂ.ಗಳ ಹಣಕಾಸಿನ ವ್ಯವಸ್ಥೆಯಾಗಬೇಕಾಗುತ್ತದೆ ಎಂಬ ಅಂದಾಜು ಮಾಡಬೇಕು. ಇದರಲ್ಲಿ ತಾರತಮ್ಯ ಮಾಡುವ ಉದ್ದೇಶ ಇರಲಿಲ್ಲ. ಕೆಕೆಆರ್‍ಡಿಬಿ ವ್ಯಾಪ್ತಿಯಲ್ಲಿ ನಮ್ಮ ಪಕ್ಷದವರಿಗೂ ಕಡಿಮೆ ಅನುದಾನ ನೀಡಿದ್ದೇವೆ. ನಾವು ಎಲ್ಲಾ ಶಾಸಕರನ್ನೂ ಸಮನಾಂತರವಾಗಿ ನೋಡುತ್ತೇವೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿಯಾಗಬೇಕು ಎಂದು ಮೊದಲ ಬಾರಿ ಹೇಳಿದ್ದು ನಾನೇ. ಮುಂದಿನ ದಿನಗಳಲ್ಲಿ ಅವರು ಪ್ರಧಾನಿಯಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಅವರು ಪಕ್ಷಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ ಎಂದರು. ಕರ್ನಾಟಕದಲ್ಲಿ ಮುಂದಿನ 2 ವರ್ಷ 10 ತಿಂಗಳು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಶಾಸಕಾಂಗ ಪಕ್ಷ ಅವರನ್ನು ಆಯ್ಕೆ ಮಾಡಿದೆ. ಹೈಕಮಾಂಡ್ ಕೂಡ ಸಹಮತ ವ್ಯಕ್ತಪಡಿಸಿದೆ. ಹೀಗಾಗಿ ಜನನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.