ಬೆಂಗಳೂರು, ಆ.19- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಜಾತಿಗಣತಿ ಮತ್ತು ಮೀಸಲಾತಿಯ ಸಂಬಂಧಪಟ್ಟಂತ ಚರ್ಚೆಗಳು ತೀವ್ರಗೊಳ್ಳುತ್ತಿದ್ದು ಇಂದು ಸಂಜೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಮತ್ತೊಂದೆಡೆ ನಿನ್ನೆ ರಾತ್ರಿ ಲಿಂಗಾಯತ ವೀರಶೈವ ಸಮುದಾಯದ ಮುಖಂಡರು ಈ ಸಂಬಂಧ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಿರುವುದು ಕುತೂಹಲ ಕೆರಳಿಸಿದೆ.
ಮೂಲಗಳ ಪ್ರಕಾರ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ನ್ಯಾ. ನಾಗಮೋಹನ ದಾಸ್ ಅವರ ಏಕ ಸದಸ್ಯ ಆಯೋಗ ನೀಡಿರುವ ಸಮೀಕ್ಷೆ ಹಾಗೂ ಶಿಫಾರಸ್ಸುಗಳ ವರದಿಯನ್ನು ಸಚಿವ ಸಂಪುಟ ಸಭೆ ಅಂಗೀಕರಿಸಲಿದೆ. ಪರಿಶಿಷ್ಟ ಜಾತಿಗಳಲ್ಲಿ ವರದಿ ಅಂಗೀಕಾರಗೊಳ್ಳಬಾರದು ಎಂದು ಬಲಗೈ ಸಮುದಾಯ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.
ಲಂಬಾಣಿ ಮತ್ತು ಭೋವಿ ಸಮುದಾಯಗಳ ವರದಿಯ ವಿಚಾರವಾಗಿ ನಕಾರಾತಕ ಅಭಿಪ್ರಾಯ ಹೊಂದಿದ್ದು, ಈವರೆಗೂ ಬೀದಿಗಿಳಿದಿಲ್ಲ ಎಂಬುದನ್ನು ಹೊರತುಪಡಿಸಿದರೆ ಒಳಗೊಳಗೆ ವಿರೋಧವಿದೆ. ಎಡಗೈ ಸಮುದಾಯ ವರದಿ ಜಾರಿ ಆಗಲೇಬೇಕು ಎಂದು ಪಟ್ಟು ಹಿಡಿದಿದೆ.
ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ಸಂಪುಟದಲ್ಲಿರುವ ಸಚಿವರಾದ ಡಾ. ಜಿ ಪರಮೇಶ್ವರ್, ಎಚ್.ಸಿ. ಮಹದೇವಪ್ಪ, ಪ್ರಿಯಾಂಕ ಖರ್ಗೆ, ಕೆಎಚ್ ಮುನಿಯಪ್ಪ, ಆರ್.ಬಿ.ತಿವಾಪುರ್, ಶಿವರಾಜ ತಂಗಡಗಿ, ವಿಧಾನಸಭೆಯ ಉಪಾಧ್ಯಕ್ಷ ರುದ್ರಪ ಲಮಾಣಿ ಅವರುಗಳ ನಡುವೆಯೇ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದ್ದು, ಹಲವು ಸುತ್ತಿನ ಸಭೆಗಳ ನಡುವೆಯೂ ಒಮತದ ತೀರ್ಮಾನ ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಹೀಗಾಗಿ ಶನಿವಾರ ನಡೆಯಬೇಕಿದ್ದ ವಿಶೇಷ ಸಚಿವ ಸಂಪುಟ ಸಭೆ ಇಂದಿಗೆ ಮುಂದೂಡಿಕೆಯಾಗಿದೆ. ಬಹುತೇಕ ವರದಿಯನ್ನು ಸರ್ಕಾರ ಅಂಗೀಕರಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.ಸಣ್ಣಪುಟ್ಟ ಬದಲಾವಣೆ ಹಾಗೂ ಒಳಜಾತಿಗಳ ಸಮೀಕರಣ ಕುರಿತಂತೆ ಒಂದಿಷ್ಟು ಬದಲಾವಣೆಗಳಾಗುವ ನಿರೀಕ್ಷೆ ಇದ್ದು, ವರದಿ ಅಂಗೀಕಾರಗೊಂಡರೆ, ಪರಿಶಿಷ್ಟ ಜಾತಿಗಳಲ್ಲಿ ಪ್ರತಿರೋಧ ಪ್ರತಿಭಟನೆ ನಡೆಯುವ ನಿರೀಕ್ಷೆ ಇದೆ. ಇತ್ತ ರಾಜ್ಯಾದ್ಯಂತ ಜಾತಿ ಜನಗಣತಿ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ವೀರಶೈವ ಲಿಂಗಾಯಿತ ಸಮುದಾಯಗಳ ವಿರೋಧ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಈ ಮೊದಲು ನಡೆಸಲಾಗಿದ್ದ ಸಮೀಕ್ಷೆಯನ್ನು ಅನಿವಾರ್ಯ ಕಾರಣಗಳಲ್ಲಿ ತಿರಸ್ಕರಿಸಲಾಯಿತು. ಹೊಸದಾಗಿ ಸಮೀಕ್ಷೆ ನಡೆಸಲು ನಿರ್ಧರಿಸಿ ಅದಕ್ಕೆ 90 ದಿನಗಳ ಗಡುವು ನೀಡಲಾಗಿದೆ. ಸಮೀಕ್ಷೆ ಬಹುತೇಕ ಈ ಅಧಿವೇಶನದ ಬಳಿಕ ಆರಂಭಗೊಳ್ಳುವ ನೀರಿಕ್ಷೆ ಇದೆ. ಆದರೆ ಲಿಂಗಾಯಿತ ಹಾಗೂ ವೀರಶೈವ ಸಮುದಾಯಗಳು ವೃತ್ತಿ ಆಧಾರಿತವಾಗಿ ಗುರುತಿಸಿಕೊಂಡಿರುವ ಸಮುದಾಯಗಳನ್ನು ಏಕೀಕೃತಗೊಳಿಸಿ ಸಮೀಕ್ಷೆ ನಡೆಸಬೇಕು ಎಂಬುದು ವೀರಶೈವ ಲಿಂಗಾಯತ ಸಮುದಾಯದ ಒತ್ತಾಯವಾಗಿದೆ.
ಈ ಸಂಬಂಧ ಚರ್ಚೆ ನಡೆಸಲು ಶನಿವಾರ ವೀರಶೈವ ಲಿಂಗಾಯಿತ ಸಮುದಾಯದ ಸಚಿವರು ಶಾಸಕರು ಸಭೆ ನಡೆಸಿದ್ದು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿವರಿಸಿದ್ದಾರೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಸಮೀಕ್ಷೆ ನಡೆಸುವಾಗ ಲಿಂಗಾಯತ ವೀರಶೈವ ಉಪ ಪಂಗಡಗಳನ್ನು ಕರಾರುವಕ್ಕಾಗಿ ಲೆಕ್ಕ ಹಾಕಬೇಕು ಎಂಬ ಸಮುದಾಯದ ಬೇಡಿಕೆಯನ್ನು ಮುಖ್ಯಮಂತ್ರಿ ಅವರ ಮುಂದೆ ಇಡಲಾಗಿದೆ ಎನ್ನಲಾಗಿದೆ.
- ಶಾಸಕ ಮುನಿರತ್ನ ಕಾಲೆಳೆದ ಡಿಸಿಎಂ ಡಿಕೆಶಿ
- ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆ, ಜಗದೀಶ್ ವಿರುದ್ಧ ದೂರು
- ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರಿದ ಶಕ್ತಿ ಯೋಜನೆ
- ಮಳೆಗೆ ಮುಂಬೈ ಚಿತ್ : ರೈಲು, ವಾಹನ ಸಂಚಾರ ಸ್ಥಗಿತ
- ಮಾದಕ ವಸ್ತು ನಿರ್ಮೂಲನೆಗೆ ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಿ :ಸೀಮಂತ್ಕುಮಾರ್ ಸಿಂಗ್ ಮನವಿ