Saturday, July 19, 2025
Homeರಾಜಕೀಯ | Politicsವಿಜಯೇಂದ್ರ ಮೊದಲು ತನ್ನ ಕುರ್ಚಿ ಕಾಲುಗಳನ್ನ ಭದ್ರ ಮಾಡಿಕೊಳ್ಳಲಿ : ಸಿದ್ದರಾಮಯ್ಯ ತಿರುಗೇಟು

ವಿಜಯೇಂದ್ರ ಮೊದಲು ತನ್ನ ಕುರ್ಚಿ ಕಾಲುಗಳನ್ನ ಭದ್ರ ಮಾಡಿಕೊಳ್ಳಲಿ : ಸಿದ್ದರಾಮಯ್ಯ ತಿರುಗೇಟು

Siddaramaiah hits back at BY Vijayendra

ಬೆಂಗಳೂರು, ಜು.17-ತಾನು ಕೂತಿರುವ ಕುರ್ಚಿಯ ನಾಲ್ಕು ಕಾಲುಗಳನ್ನು ಭದ್ರವಾಗಿ ಇಟ್ಟುಕೊಳ್ಳಲಾಗದ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಂಗ್ರೆಸ್‌‍ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರಾಗಬೇಕೆಂದು ಸಲಹೆ ನೀಡುತ್ತಿರುವುದು ಅವರ ಅಜ್ಞಾನ ಮತ್ತು ಅತ್ಮವಂಚನೆಯನ್ನು ಮಾತ್ರವಲ್ಲ, ದುರಹಂಕಾರವನ್ನೂ ಸೂಚಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯೇಂದ್ರ ಅವರಿಗೆ ಓದುವ ಅಭ್ಯಾಸವಿದ್ದರೆ, ಈ ದೇಶದ ಹಿಂದುಳಿದ ಜಾತಿಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಭಾರತೀಯ ಜನತಾ ಪಕ್ಷ ಯಾವ ಯಾವ ಕಾಲದಲ್ಲಿ ಹೇಗೆಲ್ಲಾ ನಡೆಸಿಕೊಂಡಿದೆ ಎಂಬ ಇತಿಹಾಸವನ್ನು ಓದಿ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

ಬಂಡಾರುಲಕ್ಷ್ಮಣ ಎಂಬ ಅಮಾಯಕ ದಲಿತ ನಾಯಕನನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ, ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಜೈಲಿಗೆ ತಳ್ಳಿದ್ದು ಮಾತ್ರವಲ್ಲ, ಅದೇ ಕೊರಗಿನಲ್ಲಿ ಅವರು ಸಾಯುವಂತೆ ಮಾಡಿದವರು ಯಾರು? ಎಂದು ಪ್ರಶ್ನಿಸಿದ್ದಾರೆ.

ಮಾತೆತ್ತಿದರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರನ್ನು ಮೆರೆಸುವ ಬಿಜೆಪಿ ಅವರನ್ನೇ ಪ್ರಧಾನಮಂತ್ರಿ ಯಾಕೆ ಮಾಡಿಲ್ಲ? ಎ.ಪಿ.ಜೆ ಅಬ್ದುಲ್‌ ಕಲಾಮ್‌ ಅವರನ್ನು ರಾಷ್ಟ್ರಪತಿ ಮಾಡಿದ್ದೇ ಸಾಧನೆ ಎಂದು ಹೇಳಿಕೊಳ್ಳುವವರು, ಪ್ರಸಕ್ತ ಲೋಕಸಭೆಯಲ್ಲಿ ಬಿಜೆಪಿಗೆ ಸೇರಿರುವ ಒಬ್ಬನೇ ಒಬ್ಬ ಮುಸ್ಲಿಂ ಸಂಸದ ಯಾಕೆ ಇಲ್ಲ? ಕಳೆದ ಲೋಕಸಭಾ ಚುನಾವಣೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ನಾಯಕನಿಗೆ ಯಾಕೆ ಟಿಕೆಟ್‌ ಕೊಟ್ಟಿಲ್ಲ ಎನ್ನುವ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವೇ? ಎಂದು ಅವರು ಪ್ರಶ್ನೆಗಳ ಮಳೆಗರೆದಿದ್ದಾರೆ.

ಹಿಂದುಳಿದ ನಾಯಕರನ್ನು ಬಿಜೆಪಿ ಹೇಗೆ ನಡೆಸಿಕೊಳ್ಳುತ್ತಾ ಬಂದಿದೆ ಎನ್ನುವುದಕ್ಕೆ ರಾಜ್ಯದ ಹಿಂದುಳಿದ ಜಾತಿಗಳ ನಾಯಕ ಎಸ್‌‍.ಬಂಗಾರಪ್ಪನವರೇ ಸಾಕ್ಷಿ. ಬಂಗಾರಪ್ಪನವರನ್ನು ನಿಮ ತಂದೆ ಬಿ.ಎಸ್‌‍. ಯಡಿಯೂರಪ್ಪನವರು ಮುಗಿಸಿದರೆ, ಅವರ ಮಗ ಕುಮಾರ್‌ ಬಂಗಾರಪ್ಪನವರ ರಾಜಕೀಯವನ್ನು ನೀವು ಮುಗಿಸಲು ಹೊರಟಿದ್ದೀರಿ. ಇದರ ವಿವರವನ್ನು ಅವರು ನೀಡುತ್ತಲೇ ಇದ್ದಾರೆ. ಬಂಗಾರಪ್ಪನವರಿರಲಿ, ಪ್ರಧಾನಿ ನರೇಂದ್ರ ಮೋದಿ ಅವರೇ ಇರಲಿ, ಎಲ್ಲಿಯ ವರೆಗೆ ಇವರು ವರ್ಣ ವ್ಯವಸ್ಥೆ ಆಧಾರಿತ ಹಿಂದುತ್ವದ ಅಜೆಂಡಾಕ್ಕೆ ತಲೆ ಬಗ್ಗಿಸುತ್ತಾ ಇರುತ್ತಾರೋ, ಅಲ್ಲಿಯವರೆಗೆ ಮಾತ್ರ ಅವರ ತಲೆಗಳು ಸುರಕ್ಷಿತ. ಇದು ಮೋದಿಯವರಿಗೂ ತಿಳಿದಿರಲಿ ಎಂದು ಅವರು ಹೇಳಿದ್ದಾರೆ.

ವಿಜಯೇಂದ್ರ ಅವರೇ, ದಲಿತ ಮತ್ತು ಹಿಂದುಳಿದ ಜಾತಿಗಳ ಬಗ್ಗೆ ನಿಮಗೆ ಅಷ್ಟೊಂದು ಅಕ್ಕರೆ, ಕಾಳಜಿಗಳಿದ್ದರೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಒಬ್ಬ ದಲಿತ ನಾಯಕನಿಗೆ ಬಿಟ್ಟುಬಿಡಿ. ನಿಮಗೆ ಅನುಕೂಲವಾಗಲೆಂದು ಆ ಹೆಸರನ್ನು ನಾನೇ ಸೂಚಿಸುತ್ತೇನೆ. ದಲಿತ ನಾಯಕ ಗೋವಿಂದ ಕಾರಜೋಳ ಅವರು ಇತ್ತೀಚೆಗೆ ನಿಮ ಸಂಗಕ್ಕೆ ಬಿದ್ದು ಏನೇನೋ ಮಾತನಾಡುತ್ತಿದ್ದಾರೆ. ಆದರೆ ನನ್ನ ಸಹೋದ್ಯೋಗಿಯಾಗಿದ್ದ ಅವರು ಮೂಲತಃ ಸಜ್ಜನ ವ್ಯಕ್ತಿ. ನಿಮಗೆ ಮತ್ತು ನಿಮ ಪಕ್ಷಕ್ಕೆ ಧಮು,ತಾಕತ್‌ ಇದ್ದರೆ ಕಾರಜೋಳ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಅವರನ್ನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಬಿಡಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಇಂತಹ ಒಳ್ಳೆಯ ಕೆಲಸವನ್ನು ನೀವು ಮಾಡುವುದೇ ಇಲ್ಲ ಎನ್ನುವುದು ನನಗೆ ಗೊತ್ತು. ಬೇರೆ ಪಕ್ಷಗಳಲ್ಲಿನ ದಲಿತ ನಾಯಕರ ಚಾರಿತ್ರ್ಯಹನನ ಮಾಡಲಷ್ಟೇ ಬಿಜೆಪಿ ತನ್ನ ದಲಿತ ನಾಯಕರನ್ನು ಬಳಸಿಕೊಳ್ಳುತ್ತದೆಯೇ ಹೊರತು, ಅವರಿಗೆ ಯಾವುದೇ ಗೌರವದ ಮತ್ತು ಪ್ರಮುಖ ಸ್ಥಾನಮಾನ ನೀಡುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.

ವಿಜಯೇಂದ್ರ ಅವರೇ, ಮೇಲನೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ತಲೆ ಮೇಲೆ ಚಡ್ಡಿತುಂಬಿದ ಬುಟ್ಟಿಹೊರಿಸಿ ಕಳಿಸುವ ಬದಲಿಗೆ ನೀವು ಮತ್ತು ನಿಮ ತಂದೆಯವರು ಯಾಕೆ ಅದನ್ನು ಹೊತ್ತುಕೊಂಡು ಹೋಗಿಲ್ಲ? ಇದಕ್ಕೆ ಉತ್ತರ ಇದೆಯಾ ನಿಮಲ್ಲಿ? ಎಂದು ಪ್ರಶ್ನಿಸಿದ್ದಾರೆ, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರು ಮಾತ್ರವಲ್ಲ ದೇಶ ಮೆಚ್ಚುವ ಒಬ್ಬ ಮುತ್ಸದ್ಧಿ ನಾಯಕ.

ಶ್ರದ್ಧೆ, ಶ್ರಮ ಮತ್ತು ಜನಪಪರ ಕಾಳಜಿ ಮೂಲಕ ಅವರು ನಾಯಕರಾಗಿ ಬೆಳೆದಿದ್ದಾರೆಯೇ ಹೊರತು, ಎಂದೂ ದಲಿತ ಕಾರ್ಡ್‌ ಪ್ರದರ್ಶಿಸಿ ರಾಜಕೀಯ ಮಾಡಿಲ್ಲ. ಅವರ ಬೆಳವಣಿಗೆಗೆ ಯಾರ ಶಿಫಾರಸುಗಳ ಅಗತ್ಯವೂ ಇಲ್ಲ. ಕಾಂಗ್ರೆಸ್‌‍ ಪಕ್ಷದಲ್ಲಿ ಪ್ರಧಾನಮಂತ್ರಿ ಯಾರು ಆಗಬೇಕೆನ್ನುವುದನ್ನು ನಮ ಪಕ್ಷ ನಿರ್ಧರಿಸುತ್ತದೆ. ಅದರ ಬಗ್ಗೆ ಬಿಜೆಪಿ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾರೆ.

ವಿಜಯೇಂದ್ರ ಅವರೇ ನೀವು ಯೋಚಿಸಬೇಕಾಗಿರುವುದು ನಿಮ ಪಕ್ಷದ ಬಗ್ಗೆ. ಎಪ್ಪತ್ತೈದು ವರ್ಷ ತುಂಬಿರುವ ನರೇಂದ್ರ ಮೋದಿ ಅವರ ಪದಚ್ಯುತಿಯ ಸೂಚನೆಯನ್ನು ಆರ್‌ಎಸ್‌‍ಎಸ್‌‍ ಸರಸಂಘ ಚಾಲಕ ಮೋಹನ್‌ ಭಾಗವತ್‌ ನೀಡಿದ್ದಾರೆ. ದಲಿತ ಪ್ರಧಾನಮಂತ್ರಿಯನ್ನು ಮಾಡಲು ಬಿಜೆಪಿಗೆ ಇದೊಂದು ಸದವಕಾಶ. ಆ ಪ್ರಯತ್ನ ನಿಮಿಂದಲೇ ಶುರುವಾಗಲಿ.

ಬೇರೆಯವರಿಗೆ ಬೋಧನೆ ಮಾಡುವ ಬದಲಿಗೆ ಬಿಜೆಪಿಯ ಪ್ರಧಾನಮಂತ್ರಿ ಸ್ಥಾನಕ್ಕೆ ಒಬ್ಬ ದಲಿತ ನಾಯಕನನ್ನು ನೀವೇ ಮೊದಲೇ ಸೂಚಿಸಿ ನಿಮ ದಲಿತ ಪ್ರೇಮವನ್ನು ಸಾಬೀತುಪಡಿಸಿ. ಆ ಹೆಸರುಗಳು ಗೋವಿಂದ ಕಾರಜೋಳ ಅವರೋ, ಛಲವಾದಿ ನಾರಾಯಾಣ ಸ್ವಾಮಿ ಅವರದ್ದಾಗಿದ್ದರೆ ಅವರನ್ನು ಅಭಿನಂದಿಸುವವರಲ್ಲಿ ನಾನು ಮೊದಲಿಗನಾಗುತ್ತೇನೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News