ಬೆಂಗಳೂರು,ಫೆ.16– ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಶಕ್ತಿ. ಪಂಚಾಯತ್ನಿಂದ ಪಾರ್ಲಿಮೆಂಟ್ವರೆಗೂ ಎಲ್ಲಾ ಚುನಾವಣೆಗೂ ಅವರ ಅಗತ್ಯ ಪಕ್ಷಕ್ಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮುಂದಿನ ಚುನಾವಣೆಗೆ ಸಿದ್ದರಾಮಯ್ಯ ಅನಿವಾರ್ಯ ಎಂದು ಸಚಿವ ಸತೀಶ್ ಜಾರಕಿಹೊಳಿಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಮಲ್ಲಿ ಯಾವುದೇ ಗೊಂದಲಗಳಿಲ್ಲ. ವ್ಯತಿರಿಕ್ತ ಹೇಳಿಕೆ ನೀಡುವವರನ್ನು ಕಾಂಗ್ರೆಸ್ ಪಕ್ಷ ಗಮನಿಸುತ್ತಿದೆ ಎಂದರು.
ದೇಶದಲ್ಲೇ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನು ಎರಡನೇ ಅವಧಿಗೆ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಅವರು ನಮ ನಾಯಕರು. ಇದರಲ್ಲಿ ಯಾವುದೇ ಚರ್ಚೆಯ ಅಗತ್ಯ ಇಲ್ಲ. ಸಿದ್ದರಾಮಯ್ಯ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಚೆನ್ನಾಗಿ ಆಡಳಿತ ನಡೆಸುತ್ತಿದೆ. ಈ ವಿಷಯದಲ್ಲಿ ಚರ್ಚೆಯೇ ಅಗತ್ಯವಿಲ್ಲ ಎಂದರು.
ಇಲ್ಲಿಂದಲೇ ನಮಸ್ಕರಿಸುತ್ತೇನೆ :
ನೀರಾವರಿಯ ವಿಚಾರದಲ್ಲಿ ಪಕ್ಷಬೇಧ ಮರೆತು ಹೋರಾಟ ನಡೆಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ನೆಲ, ಜಲ ಹಿತರಕ್ಷಣೆಗೆ ನಾನು ಎಲ್ಲರ ಜೊತೆಯೂ ಕೈ ಜೋಡಿಸುತ್ತೇನೆ. ಮಹದಾಯಿ ಯೋಜನೆಯ ಅನುಷ್ಠಾನಕ್ಕೆ ಒಂದು ದಿನದಲ್ಲೇ ಸಹಿ ಹಾಕಿಸಲು ಅವಕಾಶವಿತ್ತು. ಈ ಬಗ್ಗೆ ನಾನು ಕೇಂದ್ರ ಸಚಿವರ ಎಲ್ಲರ ಜೊತೆಗೂ ಮಾತುಕತೆ ನಡೆಸಿದ್ದೇನೆ. ಇದು ದೇವೇಗೌಡರ ಹೋರಾಟ ಮಾತ್ರವಲ್ಲ. ರಾಜ್ಯದ ಜನರ ಹೋರಾಟ ಎಂದರು.
ನೀರಾವರಿ ವಿಚಾರದಲ್ಲಿ ನಾವೂ ಕೂಡ ರಾಜಕೀಯ ಮಾಡುವುದಿಲ್ಲ. ನಮಗೆ ಅದರ ಅಗತ್ಯ ಕೂಡ ಇಲ್ಲ. ಅವರಿಗೆ ರಾಜಕಾರಣ ಮಾಡಿ ರೂಢಿ ಇರಬಹುದು. ಆದರೆ ನಮಗಿಲ್ಲ. ಈ ಮೊದಲು ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಾವು ಹೋರಾಟ ಮಾಡಿದ್ದೇವೆ, ಹೆಜ್ಜೆ ಹಾಕಿದ್ದೇವೆ. ಆಗ ನಮನ್ನು ಯಾವ ರೀತಿ ಟೀಕಿಸಿದ್ದರು ಎಂಬುದೂ ನನಗೆ ಗೊತ್ತಿದೆ ಎಂದು ಹೇಳಿದರು.
ಮಹದಾಯಿ ಭದ್ರಾ ಮೇಲ್ದಂಡೆ ವಿಚಾರವಾಗಿ ಮಾಜಿ ಪ್ರಧಾನಿ ದೇವೇಗೌಡರು ಒಂದು ದಿನವೂ ಸಂಸತ್ನಲ್ಲಿ ಚರ್ಚೆ ಮಾಡಲಿಲ್ಲ. ಆ ಹಣವನ್ನೂ ಕೊಡಿಸಲಿಲ್ಲ. ರಾಜ್ಯಸರ್ಕಾರದಿಂದ ಯಾವುದೇ ರೀತಿಯ ಪರಿಹಾರವನ್ನು ನಾವು ನೀಡಲು ಸಿದ್ಧ ಎಂದರು.
ಬೆಂಗಳೂರಿಗೆ ಅಗತ್ಯವಾದ ಕುಡಿಯುವ ನೀರು ಪೂರೈಸಲು ನಾವು ಕ್ರಮಗಳನ್ನು ಕೈಗೊಂಡಿದ್ದೇವೆ. ಜಲಸಂಪನೂಲ ಸಚಿವನಾಗುತ್ತಿದ್ದಂತೆ ಬೆಂಗಳೂರಿಗೆ 6 ಟಿಎಂಸಿ ನೀರನ್ನು ಕಾಯ್ದಿರಿಸುವ ಕುರಿತು ಸರ್ಕಾರಿ ಆದೇಶ ಹೊರಡಿಸಿದ್ದೇನೆ. ಜೆಡಿಎಸ್ನ ಡಿ.ಸಿ.ತಮಣ್ಣ ಅವರಿಗೆ ಅಂಕಿ ಅಂಶ ಗೊತ್ತಿಲ್ಲ. ಹೀಗಾಗಿ ಅವರ ಮೂಲಕ ವ್ಯತಿರಿಕ್ತ ಹೇಳಿಕೆ ಕೊಡಿಸುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಅಸಮಾಧಾನ ಹೊರಹಾಕಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಿ :
ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಕಾಂಗ್ರೆಸ್ ಪಕ್ಷ ಈಗಾಗಲೇ ತಯಾರಿ ಆರಂಭಿಸಿದೆ. ಮೀಸಲಾತಿಯೂ ಸಿದ್ಧವಾಗಿದೆ. ನ್ಯಾಯಾಲಯಗಳಿಂದ ಯಾವುದೇ ಸಂದರ್ಭದಲ್ಲಿ ನಿರ್ದೇಶನ ಬರುವ ಸಾಧ್ಯತೆಯಿದೆ.
ತಕ್ಷಣವೇ ಚುನಾವಣೆಯೂ ಘೋಷಣೆಯಾಗಲಿದೆ. ಬಿಬಿಎಂಪಿಗೂ ಚುನಾವಣೆ ನಡೆಸಲು ಗ್ರೇಟರ್ ಬೆಂಗಳೂರು ಯೋಜನೆಗೆ ಶಾಸಕ ರಿಜ್ವಾನ್ ಅರ್ಷದ್ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಪಾಲಿಕೆ ಚುನಾವಣೆಗಳನ್ನು ನಡೆಸಲು ನಡೆಸಲು, ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಹಾಗೂ ಸಮನ್ವಯತೆಗಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ವಿಭಾಗವಾರು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ.
ಸಮಿತಿಯ ಮುಖಂಡರು ಅವರ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡು ಪಕ್ಷಕ್ಕೆ ವರದಿ ಸಲ್ಲಿಸಲಿದ್ದಾರೆ. ಶೇ.50 ರಷ್ಟು ಮಹಿಳಾ ಮೀಸಲಾತಿಯ ಅನ್ವಯ ಮಹಿಳಾ ಧುರೀಣರನ್ನು ಗುರುತಿಸಲು ಈ ಸಮಿತಿ ಕೆಲಸ ಮಾಡಲಿದೆ ಎಂದು ತಿಳಿಸಿದರು.