ಬೆಂಗಳೂರು,ಜೂ.17- ಬಕ್ರೀದ್ ಹಬ್ಬದ ಅಂಗವಾಗಿ ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು.
ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಧಾರ್ಮಿಕ ಮುಖಂಡರು ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿ ಅಮಾಮ್ ಹಾಗೂ ಶಾಲು ಹಾಕಿ ಸನಾನಿಸಿದರು. ಈ ವೇಳೆ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಮಕ್ಕಳೊಂದಿಗೆ ಮುಖ್ಯಮಂತ್ರಿ ಫೋಟೊಗೆ ಫೋಸ್ ನೀಡಿದರು.
ಪ್ರಾರ್ಥನೆ ಬಳಿಕ ಮಾತನಾಡಿದ ಸಿದ್ದರಾಮಯ್ಯನವರು ಮುಸ್ಲಿಂ ಹಾಗೂ ಎಲ್ಲರಿಗೂ ಬಕ್ರೀದ್ ಶುಭಾಶಯಗಳನ್ನು ಕೋರಿದರು. ಎಲ್ಲರೂ ಅಣ್ಣ-ತಮಂದಿರಂತೆ ಬದುಕಿ ಬಾಳಬೇಕು. ಪ್ರೀತಿ ವಿಶ್ವಾಸದಿಂದ ಬದುಕುವ ಅಗತ್ಯವಿದೆ. ದೇಶದಲ್ಲಿ ಬಹುತ್ವದ ಸಂಸ್ಕೃತಿ ಇದೆ. ಇಲ್ಲಿ ವಿವಿಧ ಧರ್ಮ, ಜಾತಿ, ಭಾಷೆ, ಪ್ರಾಂತ್ಯದ ಜನ ವಾಸಿಸುತ್ತಿದ್ದಾರೆ. ಮನುಷ್ಯತ್ವ ಎಲ್ಲದಕ್ಕಿಂತಲೂ ದೊಡ್ಡದು.
ಪರಸ್ಪರ ಪ್ರೀತಿ ಸಹಿಷ್ಣತೆಯಿಂದ ಬದುಕಬೇಕು. ಮತ್ತೊಂದು ಜಾತಿ ಹಾಗೂ ಧರ್ಮವನ್ನು ಪ್ರೀತಿಸುವ, ಸಹಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ನಮ ಸರ್ಕಾರ ಸರ್ವಧರ್ಮದಲ್ಲಿ ನಂಬಿಕೆ ಇಟ್ಟಿದ್ದು, ಸಂವಿಧಾನದ ಆಶಯದಂತೆ ನಡೆದುಕೊಳ್ಳುತ್ತದೆ. ಪ್ರತಿಯೊಬ್ಬರ ನಂಬಿಕೆ ಹಾಗೂ ಧರ್ಮಗಳನ್ನು ತಾರತಮ್ಯ ಇಲ್ಲದಂತೆ ನೋಡಿಕೊಳ್ಳಲಾಗುವುದು. ರಾಜ್ಯದಲ್ಲಿರುವ ಎಲ್ಲಾ ಧರ್ಮಗಳ 7 ಕೋಟಿ ಜನರಿಗೂ ರಕ್ಷಣೆ ನೀಡುವುದು ನಮ ಜವಾಬ್ದಾರಿ ಮತ್ತು ಬದ್ಧತೆ ಎಂದರು.
ಅಲ್ಪಸಂಖ್ಯಾತರು ಆತಂಕ ಮತ್ತು ಭಯ ಬೀಳುವ ಅಗತ್ಯವಿಲ್ಲ. ಅಲ್ಪಸಂಖ್ಯಾತರು ಹಾಗೂ ಬಹುಸಂಖ್ಯಾತರಿಗೆ ಒಂದೇ ರೀತಿಯ ರಕ್ಷಣೆ ನೀಡುವ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಮಳೆ, ಬೆಳೆ ಹೆಚ್ಚಾಗಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಅವರು ಹಾರೈಸಿದರು.