ನವದೆಹಲಿ, ಏ.27– ಪಾಕಿಸ್ತಾನದ ಮೇಲೆ ಯುದ್ಧ ಬೇಡ. ನಮಗೆ ಶಾಂತಿ ಬೇಕು ಎಂಬ ಕರ್ನಾಟದ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಪಾಕಿಸ್ತಾನದ ಪ್ರಸಿದ್ಧ ನ್ಯೂಸ್ ಚಾನೆಲ್ ಜಿಯೋ ನ್ಯೂಸ್‌ನಲ್ಲಿ ಪ್ರಸಾರವಾಗಿದೆ.
ಭಾರತದ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಪಾಕ್ ಜೊತೆ ಯುದ್ಧ ಮಾಡುವ ಯಾವುದೇ ಅಗತ್ಯ ಇಲ್ಲ ಅಂತ ಹೇಳಿದ್ದಾರೆ ಅಂತ ಜಿಯೋ ನ್ಯೂಸ್ ವರದಿ ಮಾಡಿದೆ.ಸಿದ್ದರಾಮಯ್ಯ ಅವರ ಹೇಳಿಕೆ ಪಾಕಿಸ್ತಾನ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿದ್ದು, ಅಲ್ಲಿನ ಟಿವಿ ಮಾಧ್ಯಮಗಳು ಪದೇ ಪದೇ ಇವರ ಹೇಳಿಕೆಯನ್ನು ತೋರಿಸುತ್ತಾ, ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ವಿಚಾರದಲ್ಲಿ ಭಾರತದಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿದೆ ಬಿಂಬಿಸುತ್ತಿವೆ.
ಇದನ್ನು ಕಂಡು ಬಿಜೆಪಿ ನಾಯಕರು ಫುಲ್ ಗರಂ ಆಗಿದ್ದು, ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ಸನ್ನದ್ದವಾಗಿದೆ. ಆದರೆ, ಕೇಂದ್ರದ ಈ ನಿರ್ಧಾರಕ್ಕೆ ಭಾರತದೊಳಗೇ ಅಸಮಾಧಾನ ಎದ್ದಿದೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಹಲ್ಯಾಮ್ ನಲ್ಲಿ ಆಗಿರುವ ಘಟನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ಮಾಡುವ ಅವಶ್ಯತೆಯೇನಿಲ್ಲ. ಪಹಲ್ಯಾಮ್ ಘಟನೆ ಭದ್ರತಾ ವೈಫಲ್ಯದಿಂದ ಆಗಿರುವಂಥದ್ದು. ಅದನ್ನು ಈಗಾಗಲೇ ಒಪ್ಪಿಕೊಂಡಿರುವ ಕೇಂದ್ರ ಸರ್ಕಾರ, ಸುಮ್ಮನೇ ಪಾಕಿಸ್ತಾನವನ್ನು ಈ ವಿಚಾರದಲ್ಲಿ ಬಲಿಪಶು ಮಾಡಲು ಹೊರಟಿದೆ ಎಂದು ಹೇಳಿದ್ದಾರೆ ಎಂದು ಬಿತ್ತರಿಸಿದೆ.
ಪಾಕಿಸ್ತಾನ ರತ್ನ ಸಿಎಂ ಸಿದ್ದರಾಮಯ್ಯ:
ತಮ್ಮ ಬಾಲಿಶ, ಅಸಂಬದ್ದ ಹೇಳಿಕೆಗಳಿಂದ ಈಗ ರಾತ್ರೋರಾತ್ರಿ ಪಾಕಿಸ್ತಾನದಲ್ಲಿ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದೀರಿ. ತಮಗೆ ಅಭಿನಂದನೆಗಳು. ಮುಂದೆಂದಾದರೂ ತಾವು ಪಾಕಿಸ್ತಾನಕ್ಕೆ ಭೇಟಿ ಕೊಟ್ಟರೆ ತಮಗೆ ರಾಜಾತಿಥ್ಯ ಗ್ಯಾರಂಟಿ. ಪಾಕಿಸ್ತಾನದ ಪರ ವಕಾಲತ್ತು ವಹಿಸಿದ ಮಹಾನ್ ಶಾಂತಿದೂತ ಎಂದು ಪಾಕಿಸ್ತಾನ ಸರ್ಕಾರ ತಮಗೆ ಅಲ್ಲಿನ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ನಿಶಾನ್-ಎ-ಪಾಕಿಸ್ತಾನ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಿದರೂ ಅಚ್ಚರಿಯಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಗರಂ ಆಗಿದ್ದಾರೆ.
ದೇಶ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಎದುರಿಸುತ್ತಿರುವಾಗ, ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವಾಗ ಈ ರೀತಿ ಶತ್ರುರಾಷ್ಟ್ರದ ಕೈಗೊಂಬೆಯಂತೆ ವರ್ತಿಸುತ್ತಿದ್ದೀರಲ್ಲ, ನಿಮ್ಮಂತಹವರು ಸಾರ್ವಜನಿಕ ಬದುಕಿನಲ್ಲಿ ಇರುವುದೇ ನಮ್ಮ ದೇಶದ ಅತ್ಯಂತ ದೊಡ್ಡ ದುರಂತ ಎಂದು ಆರ್.ಅಶೋಕ್ ಟ್ವಿಟ್ ಮೂಲಕ ಕಿಡಿಕಾರಿದ್ದಾರೆ.
ಖಂಡನೀಯ: ಸಿಎಂ ಸಿದ್ದರಾಮಯ್ಯನವರ ಹೇಳಿಕೆ ಪ್ರಸಾರದ ವಿಡಿಯೋ ಶೇರ್ ಮಾಡಿಕೊಂಡಿರುವ ಪ್ರಹ್ಲಾದ್ ಜೋಶಿ ಅವರು ಕೂಡ ವಾಗ್ದಾಳಿ ನಡೆಸಿದ್ದಾರೆ. ಇಡೀ ವಿಶ್ವವೇ ಭಾರತಕ್ಕೆ ಸಾಂತ್ವನ ಹೇಳುತ್ತಿದೆ. ಭಯೋತ್ಪಾದಕರಿಗೆ ಅವರಿಗೆ ಅರ್ಥವಾಗುವ ಜೊತೆಗೆ ಪಾಠ ಕಲಿಸಲು ಭಾರತಕ್ಕೆ ಎಂದು ದೇಶಗಳು ಹೇಳುತ್ತಿವೆ. ಈ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವವರನ್ನು ಶಿಕ್ಷಿಸುವುದು ಬೇಡ. ನಮ್ಮ ಭದ್ರತೆಯನ್ನು ಕಾಪಾಡಿ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತು ಖಂಡನೀಯ ಎಂದಿದ್ದಾರೆ.
ಸಿದ್ದರಾಮಯ್ಯ ಹೇಳಿದ್ದೇನು:
ಸುದ್ದಿಗಾರರೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯುದ್ಧ ಮಾಡುವ ಅನಿವಾರ್ಯತೆ ಇಲ್ಲ, ಕೇಂದ್ರ ಸರ್ಕಾರ ಬಿಗಿ ಭದ್ರತೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸಬೇಕು, ಜನಕ್ಕೆ ಖಂಡಿತವಾಗಿಯೂ ಯುದ್ಧ ಬೇಕಿಲ್ಲ, ಶಾಂತಿ ಮತ್ತು ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿಯಾಗಬೇಕು ಎಂದು ಹೇಳಿದ್ದರು.
ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಅನಿವಾರ್ಯತೆ ಇದೆಯಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಸಿಎಂ ಸಿದ್ದರಾಮಯ್ಯ ಅವರು, ಯುದ್ಧ ಮಾಡುವ ಅಗತ್ಯ ಇಲ್ಲ, ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ. ಭದ್ರತಾ ವ್ಯವಸ್ಥೆಯನ್ನು ಬಿಗಿ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು. ನಾವು ಯುದ್ಧದ ಪರ ಇಲ್ಲ, ಶಾಂತಿ ಇರಬೇಕು, ಜನರಿಗೆ ಭದ್ರತೆ ಇರಬೇಕು. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ವಹಿಸಬೇಕು ಎಂದು ಹೇಳಿದ್ದರು.