ಬೆಂಗಳೂರು,ಜು.10- ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ನಡೆಯುತ್ತಲೇ ಇವೆ, ಅದರಿಂದ ಯಾವುದೇ ಬದಲಾವಣೆಯಾಗಿಲ್ಲ, ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಖಚಿತ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಎಂದು ಪದೇಪದೇ ಪ್ರಸ್ತಾಪಿಸಲಾಗುತ್ತಿದೆ. ಈ ಚರ್ಚೆಗಳೇ ಅನಗತ್ಯ ಮತ್ತು ಅಪ್ರಸ್ತುತ ಎಂದರು.
ಎಐಸಿಸಿಯ ಹಿಂದುಳಿದ ವರ್ಗಗಳ ಘಟಕಕ್ಕೆ ಸಿದ್ದರಾಮಯ್ಯ ಅವರನ್ನು ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಿಸಿದಾಕ್ಷಣ ಅದು ಬಡ್ತಿಯಲ್ಲ. ಸಮಿತಿ ಅಧ್ಯಕ್ಷನನ್ನಾಗಿ ಮಾಡಲಾಯಿತು ಎಂದು ತಪ್ಪು ಮಾಹಿತಿ ಹರಡಲಾಯಿತು. ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಧ್ವನಿ. ಆ ಕಾರಣಕ್ಕೆ ಸಲಹಾ ಸಮಿತಿಗೆ ನೇಮಿಸಲಾಗಿದೆ. ಇದನ್ನು ಬಡ್ತಿ ಎಂದಾಗಲೀ, ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಎಂದಾಗಲೀ ಭಾವಿಸಬೇಕಿಲ್ಲ ಎಂದು ಹೇಳಿದರು.
ದೇಶದಲ್ಲಿ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರು ಸಮಿತಿಯಲ್ಲಿರಬೇಕು ಎಂಬ ಕಾರಣಕ್ಕೆ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದೆ. ಅದನ್ನು ವಿಪರೀತವಾಗಿ ಅಂದಾಜಿಸುವ ಅಗತ್ಯವಿಲ್ಲ. ಚರ್ಚೆ ನಡೆಸುವವರಿಗೂ ಸಾಮಾನ್ಯ ಜ್ಞಾನವಾದರೂ ಇರಬೇಕು. ಓಬಿಸಿ ಸಮಿತಿಯ ಸಲಹೆಗಾರರಾಗಿಯಷ್ಟೇ ನೇಮಕವಾಗಿದೆ. ಅದನ್ನು ಮುಖ್ಯಮಂತ್ರಿ ಬದಲಾವಣೆಗೆ ಮುನ್ಸೂಚನೆ ಎನ್ನುವ ಅಗತ್ಯ ಇಲ್ಲ. ನವೆಂಬರ್‌ಗೆ ಸರ್ಕಾರಕ್ಕೆ ಎರಡೂವರೆ ವರ್ಷಗಳಾಗಲಿದೆ. ಮುಖ್ಯಮಂತ್ರಿ ಆಕಾಂಕ್ಷಿಯಾದವರು ತಮಗೆ ಅವಕಾಶ ಕೊಡಿ ಎಂದು ಹೇಳುತ್ತಾರೆ. ಅದರಲ್ಲೇನೂ ವಿಶೇಷ ಇಲ್ಲ. ಎರಡೂವರೆ ವರ್ಷಗಳ ಒಪ್ಪಂದವೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸರ್ಕಾರ ಭಾಗ್ಯ ಯೋಜನೆಗಳನ್ನು ನೀಡಿದರೆ ಅಥವಾ ಗ್ಯಾರಂಟಿ ಯೋಜನೆಗಳನ್ನು ಒದಗಿಸಿದರೆ ಟೀಕೆಗಳು ಕೇಳಿಬರುತ್ತವೆ. ಅದೇ ಕೇಂದ್ರ ಸರ್ಕಾರ ಶ್ರೀಮಂತರ ಲಕ್ಷಾಂತರ ಕೋಟಿ ರೂ. ಸಾಲಮನ್ನಾ ಮಾಡಿದರೆ ಅದನ್ನು ಯಾರೂ ಪ್ರಶ್ನಿಸುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಉಚಿತವಾಗಿ ಅಕ್ಕಿ ನೀಡುವುದರಿಂದ ಬಡವರಿಗೆ ಹೊಟ್ಟೆ ತುಂಬಾ ಊಟ ಸಿಗುತ್ತದೆ. ಆದರೆ ಅಕ್ಕಿಯಿಂದಲೇ ಜೀವನ ನಡೆಯುತ್ತದೆ ಎಂದಲ್ಲ. ಬದುಕಿಗೆ ಇನ್ನೂ ಬಹಳಷ್ಟು ಬೇಕು. ತಲೆತಲಾಂತರದಿಂದ ಬೇರೆಯವರಿಂದ ಊಳಿಗತನ ಮಾಡಿಸಿಕೊಳ್ಳುತ್ತಿರುವವರು ಮಾತ್ರ ಉಚಿತ ಅಕ್ಕಿಯಿಂದ ಜನ ಸೋಮಾರಿಗಳಾಗುತ್ತಾರೆ ಎಂದು ಹೇಳಲು ಸಾಧ್ಯ. ಹಿಂದೆ ಸಿದ್ದರಾಮಯ್ಯನವರ ಸರ್ಕಾರ ಹಲವಾರು ಭಾಗ್ಯ ಸರಣಿಯ ಕಾರ್ಯಕ್ರಮಗಳನ್ನು ನೀಡಿದಾಗಲೂ ಇದೇ ರೀತಿಯ ಟೀಕೆಗಳಿದ್ದವು. ಹಾಗಿದ್ದರೆ ಅಲ್ಲಿದ್ದ ಜನ ಸೋಮಾರಿಗಳಾಗಿದ್ದಾರೆಯೇ ಎಂದು ಪ್ರಶ್ನಿಸಿದರು.
- ಸಿದ್ದರಾಮಯ್ಯನವರೇ ಸಿಎಂ ಆಗಿ ಸಿದ್ದು ಮುಂದುವರೆಯುತ್ತಾರೆ : ಪುತ್ರ ಯತೀಂದ್ರ
- ಪಾಲಿಕೆಗಳ ನೌಕರರ ಕಷ್ಟಗಳನ್ನೂ ಕೇಳಿಸಿಕೊಳ್ಳಿ : ರಾಜ್ಯ ಸರ್ಕಾರಕ್ಕೆ HDK ಆಗ್ರಹ
- ಬೆಂಗಳೂರಿನ ಬೀದಿ ನಾಯಿಗಳಿಗೆ ನಿತ್ಯ ಬಾಡೂಟದ ಭಾಗ್ಯ
- ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಮೊಬೈಲ್ ಕಳವು ಮಾಡುತ್ತಿದ್ದ ಚೋರನ ಬಂಧನ
- ದಕ್ಷಿಣ ಭಾರತೀಯರು ಡ್ಯಾನ್ಸ್ ಬಾರ್ ನಡೆಸಲು ಮಾತ್ರ ಯೋಗ್ಯರು : ಶಿವಸೇನೆ ಶಾಸಕ ಗಾಯಕ್ವಾಡ್