ಬೆಂಗಳೂರು,ಸೆ.9– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಕಾಂಗ್ರೆಸ್ ಪಕ್ಷವಿದ್ದು, ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿಯವರ ಹುನ್ನಾರ ಫಲಿಸುವುದಿಲ್ಲ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ತಿಳಿಸಿದ್ದಾರೆ.ಕೆಪಿಸಿಸಿ ಕಚೇರಿಗಿಂದು ಆಗಮಿಸಿದ ಅವರು ಕಾರ್ಯಕರ್ತರ ಅಹವಾಲು ಸ್ವೀಕರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಕುರ್ಚಿಯನ್ನು ಅಲುಗಾಡಿಸಲು ಬಿಜೆಪಿ-ಜೆಡಿಎಸ್ನಲ್ಲಿನ ನಾಯಕರು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಅದ್ಯಾವುದೂ ಯಶಸ್ವಿಯಾಗುವುದಿಲ್ಲ. ಇಲ್ಲಸಲ್ಲದ ವಿಚಾರಗಳನ್ನು ಮುಂದಿಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ನಲ್ಲೇ ಸಚಿವರು ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಹಲವು ರೀತಿಯ ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಯಾರೂ ತಾವು ಮುಖ್ಯಮಂತ್ರಿಯಾಗಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡಿಲ್ಲ, ಅಪೇಕ್ಷೆಯನ್ನೂ ಪಟ್ಟಿಲ್ಲ. ಎಲ್ಲಾ ಸಚಿವರೂ ಪರಸ್ಪರ ಸಂಪರ್ಕದಲ್ಲಿದ್ದೇವೆ, ಎಲ್ಲದರದೂ ಒಂದೇ ಅಭಿಪ್ರಾಯವಾಗಿದೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಉತ್ತಮ ಸರ್ಕಾರ ನಡೆಯುತ್ತಿದೆ. ಎಲ್ಲರೂ ಅವರ ಬೆನ್ನಿಗಿದ್ದೇವೆ ಎಂದು ಹೇಳಿದರು.
ಮಾಧ್ಯಮದವರ ಪ್ರಶ್ನೆ ಎದುರಾದಾಗ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆ ಉದ್ಭವಿಸಿಲ್ಲ ಎಂದರು. ಇದನ್ನೆಲ್ಲಾ ಸೃಷ್ಟಿ ಮಾಡುತ್ತಿರುವುದು ಬಿಜೆಪಿಯವರು. ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ರವರು ದಿನಕ್ಕೊಂದು ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. 135 ಮಂದಿ ಶಾಸಕರು ಒಟ್ಟಾಗಿದ್ದಾರೆ. ಹೈಕಮಾಂಡ್ ಕೂಡ ಮುಖ್ಯಮಂತ್ರಿಯವರಿಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.
ಸಚಿವರು ದೆಹಲಿಗೆ ಭೇಟಿ ನೀಡಿದ ಬಗ್ಗೆ ಅಪಾರ್ಥ ಕಲ್ಪಿಸಲಾಗುತ್ತಿದೆ. ಸತೀಶ್ ಜಾರಕಿಹೊಳಿಯವರು ದೆಹಲಿಗೆ ತೆರಳಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಟ್ಕರಿಯವರನ್ನು ಭೇಟಿ ಮಾಡಿ ಬಂದಿದ್ದಾರೆ. ಎಂ.ಬಿ.ಪಾಟೀಲ್ರವರು ಮುಂದೆ ದೆಹಲಿಗೆ ಭೇಟಿ ನೀಡುತ್ತಾರೆ. ಮುಂದಿನ ವಾರ ನಾನು ದೆಹಲಿಗೆ ಹೋಗಿ ಜಲಶಕ್ತಿ ಸಚಿವಾಲಯಕ್ಕೆ ಸಂಬಂಧಪಟ್ಟಂತೆ ಸಚಿವ ಸೋಮಣ್ಣ ಅವರನ್ನು ಭೇಟಿ ಮಾಡಲಿದ್ದೇನೆ. ಸಚಿವರು ದೆಹಲಿಗೆ ಹೋದಾಗ ಪಕ್ಷದ ಕಚೇರಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದು ಸಾಮಾನ್ಯ. ಅಂದಾಕ್ಷಣ ಕಾಂಗ್ರೆಸ್ನಲ್ಲಿ ಗೊಂದಲಗಳಿವೆ ಎಂದು ಕಲ್ಪಿಸಿಕೊಳ್ಳಬಾರದು ಎಂದರು.
ಹೈಕೋರ್ಟ್ ಸಿದ್ದರಾಮಯ್ಯ ಅವರ ಪ್ರಕರಣದಲ್ಲಿ ಯಾವುದೇ ತೀರ್ಪು ನೀಡಿದರೂ ನ್ಯಾಯಾಂಗದಲ್ಲಿ ಸಾಕಷ್ಟು ಅವಕಾಶಗಳಿವೆ. ಹೀಗಾಗಿ ಸಿದ್ದರಾಮಯ್ಯ ಅವರ ಕುರ್ಚಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದರು.ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು. ನಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳೂ ಕಾಣುತ್ತಿಲ್ಲ. ಹಿರಿಯ ಸಚಿವ ಸಂಪುಟ ಸಭೆ ಸಿದ್ದರಾಮಯ್ಯನವರ ಬೆನ್ನಿಗಿದೆ. ನಾನೂ ಸೇರಿದಂತೆ ಕಾಂಗ್ರೆಸ್ನಲ್ಲಿ ಯಾರೂ ಮುಖ್ಯಮಂತ್ರಿ ಹುದ್ದೆಗೆ ಸದ್ಯಕ್ಕೆ ಆಕಾಂಕ್ಷಿಗಳಿಲ್ಲ. ಏಕೆಂದರೆ ಕುರ್ಚಿ ಖಾಲಿ ಇಲ್ಲ ಎಂದರು.
ಎತ್ತಿನಹೊಳೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕು ಸ್ಥಾಪನೆ ನೆರವೇರಿಸಿ ಉದ್ಘಾಟನೆ ಮಾಡಿದ್ದಾರೆ. 75 ಲಕ್ಷ ಜನರಿಗೆ ಈ ಯೋಜನೆಯಿಂದ ನೀರು ದೊರೆಯಲಿದೆ. 15 ಟಿಎಂಸಿಯನ್ನ ಕುಡಿಯುವ ನೀರಿಗೆ, 9 ಟಿಎಂಸಿಯನ್ನು ಕೆರೆಗಳನ್ನು ತುಂಬಿಸಲು ಬಳಕೆ ಮಾಡಲಾಗುತ್ತಿದೆ. ಪ್ರತಿ ಟಿಎಂಸಿಗೆ 1 ಸಾವಿರ ಕೋಟಿಯಂತೆ 24 ಟಿಎಂಸಿಗೆ 24 ಸಾವಿರ ಕೋಟಿ ರೂ. ಬಳಸಲಾಗುತ್ತಿದೆ. ಬಿಜೆಪಿಯವರು ಹೇಳುವಂತೆ ಹಣ ವೃಥಾ ವ್ಯಯವಾಗಿಲ್ಲ ಎಂದರು.
ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ನ ಸಂಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಎಲ್ಲರಿಗೂ ಆತಂಕವಾಗಿದೆ. ಅದಕ್ಕಾಗಿ ಸಿಬಿಐ, ಇಡಿ ಸೇರಿ ಎಲ್ಲಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.