ಈ ವಾರ ಪ್ರೇಕ್ಷಕರ ಮುಂದೆ ಬಂದ ಸಿದ್ಲಿಂಗು 2 ಮನರಂಜನೆಯ ಜೊತೆಗೆ ಒಂದಿಷ್ಟು ಜೀವನ ಪಾಠಗಳನ್ನು ಹೊತ್ತು ತಂದಿದೆ. ನಿರ್ದೇಶಕ ವಿಜಯ ಪ್ರಸಾದ್ ತನ್ನ ಹಿಂದಿನ ಸಿನಿಮಾಗಳಿಗಿಂತ ಬೇರೆಯದ್ದೇ ಶೈಲಿಯ ನಿರೂಪಣೆ ಪ್ರಯೋಗವನ್ನು ಮಾಡಿ ಸಿನಿಮಾ ರಸಿಕರಿಗೆ ಆಶ್ಚರ್ಯವನ್ನು ಮೂಡಿಸಿ ರಂಜನೆಯ ಫುಲ್ ಮಿಲ್ಸ್ ಕೊಟ್ಟು ಕಳುಹಿಸಿದ್ದಾರೆ. ಯಾಕೆಂದರೆ ವಿಜಯಪ್ರಸಾದ್ ಸಿನಿಮಾ ಎಂದರೆ ಡಬಲ್ ಮೀನಿಂಗ್ ಹೆಚ್ಚಿರುತ್ತದೆ, ಪೋಲಿ ಮಾತುಗಳೇ ಸಿನಿಮಾದುದ್ದಕ್ಕೂ ಸದ್ದು ಮಾಡುತ್ತಿರುತ್ತವೆ ಎನ್ನುವುದು ಒಂದಿಷ್ಟು ಜನರ ಅಭಿಪ್ರಾಯ. ಆದರೆ ಈ ಚಿತ್ರದಲ್ಲಿ ಆ ರೀತಿಯ ಸಂಭಾಷಣೆ ಕಾಣುವುದೇ ಇಲ್ಲ, ನವಿರಾದ ಮಾತುಗಳಲ್ಲಿ ನಗಿಸಿ, ಕಣ್ಣೀರಿಗೂ ಕಾರಣರಾಗಿದ್ದಾರೆ
ಮೊದಲ ಭಾಗದಲ್ಲಿ ಕಾರಿನ ಕಾರಣದಿಂದಾಗಿ ತನ್ನ ಪ್ರೀತಿಯ ಮಂಗಳ ಟೀಚರ್ ಸೇರಿದಂತೆ ಎಲ್ಲವನ್ನು ಕಳೆದುಕೊಳ್ಳುವ ನಾಯಕ ಭಾಗ ಎರಡರಲ್ಲಿ ಅದೇ ಕಾರಿಗೆ ಆಸೆಪಟ್ಟು ಹಿಂದೆ ಬೀಳುತ್ತಾನೆ ಮತ್ತೆ ಅದನ್ನು ದಕ್ಕಿಸಿಕೊಳ್ಳುವ ಪ್ರಯತ್ನದಲ್ಲಿ ಯಾವೆಲ್ಲ ಅವಾಂತರಗಳು ನಡೆಯುತ್ತವೆ, ಆ ಕನಸು ನನಸಾಗುತ್ತಾ, ಇಲ್ಲಾ ಕನಸಾಗಿಯೇ ಉಳಿಯುತ್ತಾ ಎಂಬ ಪ್ರಶ್ನೆಗಳನ್ನ ಮುಂದಿಟ್ಟುಕೊಂಡು ನರ್ದೇಶಕರು ಜಾಣ್ಮೆಯಿಂದ ಸ್ಕ್ರೀನ್ ಪ್ಲೇ ಕಟ್ಟಿದ್ದಾರೆ ಯಶಸ್ವಿಯು ಆಗಿದ್ದಾರೆ.
ಸ್ಮಶಾನದಲ್ಲಿ ಗುಂಡಿ ತೆಗೆದು ಜೀವನ ಸಾಗಿಸುವ ಸೀತಮ್ಮ, ಸದಾ ಕುಡಿದು ತಾನು ವಕೀಲನೆಂಬುದನ್ನೇ ಮರೆತು,ಹೆಂಡತಿ ಮಕ್ಕಳೆನ್ನದೆ ನಿಕೃಷ್ಟವಾಗಿ ಬದುಕುವ ಸೀತಮ್ಮನ ಕುಡುಕಗಂಡ,ಇವರಿಬ್ಬರ ಮಕ್ಕಳು ಮಿಣಿಮಿಣಿ ಮತ್ತು ಬೇವರ್ಸಿ ಆನಂದ, ಸದಾ ಸಿಡುಕೋ ಮುಕುಂದರಾಯ,ಇವನಿಂದ ದೂರ ಹೋಗಿ ಬದುಕು ಕಟ್ಟಿಕೊಂಡಿರುವ ನಿವೇದಿತ ಹೀಗೆ ಒಂದಿಷ್ಟು ಪಾತ್ರಗಳನ್ನು ಸೃಷ್ಟಿ ಮಾಡಿ ಆ ಎಲ್ಲಪಾತ್ರಗಳ ಮೂಲಕ ಬದುಕಿನ ಅರ್ಥವನ್ನು ಅರ್ಥೈಸಲು ಹೊರಟಿರು ನಿದೇಶಕರ ಜಾಣ್ಮೆಯ ನಡೆ ಎದ್ದು ಕಾಣುತ್ತದೆ.ಮಾನವ ತಾಳ್ಮೆಯಿಂದ,ಅತಿಯಾಸೆಪಡದೆ ಎಲ್ಲವನ್ನೂ ದೇವರಮೇಲೆ ಹಾಕದೆ ತನ್ನ ಕರ್ತವ್ಯವನ್ನು ಮಾಡುತ್ತ ಸಾಗಿದರೆ ಎಲ್ಲವೂ ಸಿಗುತ್ತದೆ ಎಂದು ಸ್ವತಃ ನಿರ್ದೇಶಕರೆ ಅಯಪ್ಪನ ಮಾರುವೇಷದಲ್ಲಿ ಬಂದು ಕಥೆಯದ್ದಕ್ಕೂ ಕೊಂಡಿಯಂತೆ ಕೆಲಸಮಾಡಿದ್ದಾರೆ.

ನಿರ್ದೇಶಕ ವಿಜಯಪ್ರಸಾದ್ ಆಸೆ ಮತ್ತು ಆಲೋಚನೆಗಳಿಗೆ ನಟ ಯೋಗಿ ಅದ್ಭುತವಾಗಿಯೇ ಜೀವ ತುಂಬಿದ್ದಾರೆ.ಪ್ರೇಕ್ಷಕರ ಎದೆ ಭಾರವಾಗುವಂತೆ ಮಾಡಿರುವ ಪದ್ಮಜರಾವ್ ಪಾತ್ರ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಜುನಾಥ್ ಹೆಗಡೆ ಮತ್ತು ನಾಯಕಿ ಸೋನು ಗೌಡ ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಅನಾವಶ್ಯಕ ಹಾಡುಗಳ ಅಬ್ಬರವಿಲ್ಲದ ನವಿರಾದ ಸಂಗೀತ ಮನ ಸೆಳೆಯತ್ತದೆ.ಆಸೆ,ದುರಾಸೆ,ತಾಳ್ಮೆ, ಸಂಬಂಧಗಳಬೆಲೆ ಹೀಗೆ ಅನೇಕ ವಿಚಾರಗಳ ಬಗ್ಗೆ ಬಿಳುಕು ಚೆಲ್ಲುವ ಪ್ರಯತ್ನ ಚಿತ್ರದಲಾಗಿದೆ ಹಾಗಂತ ಮನರಂಜನೆಗೆ ಎಲ್ಲಿಯೂ ಕೊರತೆಯಾಗಿಲ್ಲ ಥಿಯೇಟರಿಗೆ ಹೋಗಿ ಸಿನಿಮಾ ನೋಡಿದಾಗ ಈ ವಿಷಯಗಳು ಅರಿವಾಗುತ್ತವೆ.