ಬೆಂಗಳೂರು, ನ.6-ಕೇಂದ್ರ ಸರ್ಕಾರದ ಜೆಎಸ್‌ಟಿ ದರ ಇಳಿಕೆಯ ನಂತರವೂ ರಾಜ್ಯದ ವಾಣಿಜ್ಯ ತೆರಿಗೆಗಳ ಸಂಗ್ರಹದಲ್ಲಿ ಅಕ್ಟೋಬರ್‌ನಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ಏಳು ತಿಂಗಳಲ್ಲೇ ಅಧಿಕ ಪ್ರಮಾಣದ ತೆರಿಗೆ ಸಂಗ್ರಹವಾಗಿದೆ.
ವಾಣಿಜ್ಯ ತೆರಿಗೆಗಳ ಇಲಾಖೆ ಮಾಹಿತಿ ಪ್ರಕಾರ, ಕಳೆದ ಅಕ್ಟೋಬರ್‌ನಲ್ಲಿ ಒಟ್ಟು 9498.67 ಕೋಟಿ ರೂ.ನಷ್ಟು ವಾಣಿಜ್ಯ ತೆರಿಗೆಗಳ ಸಂಗ್ರಹವಾಗಿದೆ. ಇದು ಏಪ್ರಿಲ್‌ನಿಂದೀಚೆಗೆ ಮಾಸಿಕವಾರು ತೆರಿಗೆೆ ಸಂಗ್ರಹದಲ್ಲಿ ಅಧಿಕವಾಗಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೂ 387.25 ಕೋಟಿ ರೂ.ನಷ್ಟು ಹೆಚ್ಚಾಗಿದೆ.
ಕಳೆದ ಅಕ್ಟೋಬರ್‌ನಲ್ಲಿ 7291.54 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ, 2104.53 ಕೋಟಿ ರೂ. ಕರ್ನಾಟಕ ಮಾರಾಟ ತೆರಿಗೆ ಹಾಗೂ 102.60 ಕೋಟಿ ರೂ ವೃತ್ತಿ ತೆರಿಗೆ ಸಂಗ್ರಹವಾಗಿದೆ. ವೃತ್ತಿ ತೆರಿಗೆ ಹೊರತು ಪಡಿಸಿ ಉಳಿದೆರಡು ತೆರಿಗೆಗಳಲ್ಲಿ ಸೆಪ್ಟೆಂಬರ್ ತಿಂಗಳಿಗಿಂತ ಹೆಚ್ಚಾಗಿದೆ. ಒಟ್ಟಾರೆ ಮೂರು ತೆರಿಗೆಗಳ ಸಂಗ್ರಹವನ್ನು ಗಣನೆಗೆ ತೆಗೆದುಕೊಂಡರೆ ಸೆಪ್ಟೆಂಬರ್‌ಗಿಂತ 607.04 ಕೋಟಿ ರೂ.ನಷ್ಟು ಅಕ್ಟೋಬರ್ ತಿಂಗಳಲ್ಲಿ ಅಧಿಕವಾಗಿದೆ.
ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಕಳೆದ ಏಪ್ರಿಲ್‌ನಿಂದ ಅಕ್ಟೋಬರ್ ಅಂತ್ಯದ ವರೆಗೆ ಒಟ್ಟು 62694.87 ಕೋಟಿ ರೂ. ನಷ್ಟು ತೆರಿಗೆಗಳ ಸಂಗ್ರಹವಾಗಿದೆ. ಇದರಲ್ಲಿ 46423.66 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ, 15379.71 ಕೋಟಿ ರೂ. ಕರ್ನಾಟಕ ಮಾರಾಟ ತೆರಿಗೆ ಹಾಗೂ 891.50 ಕೋಟಿ ರೂ. ವೃತ್ತಿ ತೆರಿಗೆ ಸಂಗ್ರಹವಾಗಿದೆ.
2024-25ನೇ ಆರ್ಥಿಕ ಸಾಲಿನಲ್ಲಿ ಒಟ್ಟು 102585.52 ಕೋಟಿ ರೂ. ತೆರಿಗೆಗಳ ಸಂಗ್ರಹವಾಗಿತ್ತು. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಇನ್ನೂ 5 ತಿಂಗಳು ಬಾಕಿ ಇದ್ದು, ವರ್ಷಾಂತ್ಯಕ್ಕೆ ಕಳೆದ ವರ್ಷದ ದಾಖಲೆ ಮುರಿಯುವ ಸಾಧ್ಯತೆಗಳಿವೆ.
