ಬೆಂಗಳೂರು,ಜ.4- ಬಿಬಿಎಂಪಿ ಗುತ್ತಿಗೆ ಕಸದ ಲಾರಿಗೆ ಸ್ಕೂಟಿ ತಾಗಿ ಕೆಳಗೆ ಬಿದ್ದ ಸಹೋದರಿಯರ ಮೇಲೆ ಲಾರಿ ಚಕ್ರ ಹರಿದ ಪರಿಣಾಮ ಇಬ್ಬರೂ ಮೃತಪಟ್ಟಿರುವ ಘಟನೆ ಹೆಣ್ಣೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಗೋವಿಂದಪುರ ನಿವಾಸಿಗಳಾದ ನಜಿಯಾ ಸುಲ್ತಾನ (31) ಮತ್ತು ನಜಿಯಾ ಇರ್ಫಾನ್ (36) ಮೃತಪಟ್ಟ ಸಹೋದರಿಯರು.ಇಂದು ಬೆಳಗ್ಗೆ 11.30ರ ಸುಮಾರಿನಲ್ಲಿ ಈ ಇಬ್ಬರೂ ಸಹೋದರಿಯರು ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಥಣಿಸಂದ್ರ ಮುಖ್ಯರಸ್ತೆಯ ಸರಾಯಿಪಾಳ್ಯದ ಎಲಿಮೆಂಟ್ಸ್ ಮಾಲ್ ಎದುರು ಬೈಕ್ ಸವಾರನೊಬ್ಬ ಓವರ್ಟೇಕ್ ಮಾಡಲು ಇವರ ಪಕ್ಕದಲ್ಲೇ ಬಂದಿದ್ದಾನೆ. ಆ ವೇಳೆ ಸಹೋದರಿಯರು ತೆರಳುತ್ತಿದ್ದ ಸ್ಕೂಟಿ ಕಸದ ಲಾರಿಗೆ ತಾಗಿದ್ದರಿಂದ ನಿಯಂತ್ರಣ ತಪ್ಪಿ ಉರುಳಿಬಿದ್ದಿದ್ದಾರೆ.
ಆ ವೇಳೆ ಲಾರಿಯ ಚಕ್ರ ಅವರ ಮೇಲೆಯೇ ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಹೆಣ್ಣೂರು ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಸದ ಲಾರಿ ಚಾಲಕನನ್ನು ವಶಕ್ಕೆ ಪಡೆದು ಆತ ಮದ್ಯ ಸೇವಿಸಿದ್ದಾನೆಯೇ ಎಂಬುದರ ಬಗ್ಗೆ ವೈದ್ಯಕೀಯ ಪರೀಕ್ಷೆಗೊಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕ್ಯಾಂಟರ್ ಡಿಕ್ಕಿ : ಮ್ಯಾನೇಜರ್ ಮೃತ
ಅತಿವೇಗ ವಾಗಿ ಬಂದ ಕ್ಯಾಂಟರ್ ವಾಹನ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಕಂಪನಿ ಮ್ಯಾನೇಜರ್ ಮೃತಪಟ್ಟಿರುವ ಘಟನೆ ಹೆಬ್ಬಾಳ ಫ್ಲೈಓವರ್ ಮೇಲೆ ನಡೆದಿದೆ.ಮನೋಹರ್ ವಿನಾಯಕ್(42) ಮೃತಪಟ್ಟ ಮ್ಯಾನೇಜರ್. ಖಾಸಗಿ ಕಂಪನಿಯೊಂದರ ಟೆಕ್ನಿಕಲ್ ಡ್ಯೂಟಿ ಮ್ಯಾನೇಜರ್ ಮಹೋಹರ ಅವರು ಇಂದು ಬೆಳಗ್ಗೆ 9.15ರ ಸುಮಾರಿನಲ್ಲಿ ತಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿ ಹೆಬ್ಬಾಳ ಫ್ಲೈಓವರ್ ಮೇಲೆ ಹೋಗುತ್ತಿದ್ದರು. ಅದೇ ವೇಳೆಗೆ ಅತಿವೇಗವಾಗಿ ಬಂದ ಕ್ಯಾಂಟರ್ ವಾಹನ ಇವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮನೋಹರ ಅವರು ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಹೆಬ್ಬಾಳ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಅಗಮಿಸಿ ಪರಿಶೀಲಿಸಿ, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತದಿಂದಾಗಿ ಈ ಮಾರ್ಗದಲ್ಲಿ ಕೆಲಕಾಲ ಸಂಚಾರಿ ದಟ್ಟಣೆ ಉಂಟಾಯಿತು. ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಾಳ ಸಂಚಾರಿ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.