Friday, November 22, 2024
Homeರಾಜ್ಯಪೆನ್‌ಡ್ರೈವ್‌ ಪಾತ್ರಧಾರಿ ಪ್ರಜ್ವಲ್‌ ಪತ್ತೆ ಹಚ್ಚುವಲ್ಲಿ ಎಸ್‌‍ಐಟಿ ವಿಫಲ

ಪೆನ್‌ಡ್ರೈವ್‌ ಪಾತ್ರಧಾರಿ ಪ್ರಜ್ವಲ್‌ ಪತ್ತೆ ಹಚ್ಚುವಲ್ಲಿ ಎಸ್‌‍ಐಟಿ ವಿಫಲ

ಬೆಂಗಳೂರು, ಮೇ 11- ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಹಾಸನ ಪೆನ್‌ಡ್ರೈವ್‌ ಪ್ರಕರಣದ ಪ್ರಮುಖ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣ ತಲೆಮರೆಸಿಕೊಂಡು ಬರೋಬ್ಬರಿ 15 ದಿನಗಳಾಗಿವೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್‌ ಅವರನ್ನು ಪತ್ತೆ ಹಚ್ಚಿ ಕರೆತರುವಲ್ಲಿ ವಿಶೇಷ ತನಿಖಾ ತಂಡ ಸಂಪೂರ್ಣ ವಿಫಲವಾಗಿದೆ.

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಜ್ವಲ್‌ ರೇವಣ್ಣ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಏ.27ರಂದು ಪ್ರಜ್ವಲ್‌ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಪೆನ್‌ಡ್ರೈವ್‌, ಲೈಂಗಿಕ ದೌರ್ಜನ್ಯ ಪ್ರಕರಣದ ಪತ್ತೆಗೆ ಸರ್ಕಾರ ಬಿ.ಕೆ. ಸಿಂಗ್‌ ನೇತೃತ್ವ ದ ಎಸ್‌‍ಐಟಿ ತಂಡ ರಚನೆ ಮಾಡಿತ್ತು. ತನಿಖೆಗೆ ಇಳಿದ ಎಸ್‌‍ಐಟಿ ತಂಡ ಪ್ರಜ್ವಲ್‌ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌‍ ನೀಡಿತ್ತಲ್ಲದೇ ಪ್ರಜ್ವಲ್‌ ಅವರಿಗೆ ಲುಕ್‌ಔಟ್‌ ನೋಟಿಸ್‌‍ ಜಾರಿ ಮಾಡಿತ್ತು.

ಎಲ್ಲಾ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಕಂಡು ಬಂದರೆ ಬಂಧಿಸುವಂತೆ ಸೂಚನೆ ಕೂಡ ಹೊರಡಿಸಲಾಗಿತ್ತು. ವಿದೇಶದಲ್ಲಿ ಇರುವುದರಿಂದ ತಕ್ಷಣದಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಏಳು ದಿನಗಳ ಕಾಲ ಕಾಲಾವಕಾಶ ನೀಡಬೇಕು ಎಂದು ತಮ ವಕೀಲರ ಮೂಲಕ ಎಸ್‌‍ಐಟಿ ಮುಂದೆ ಪ್ರಜ್ವಲ್‌ ಮನವಿ ಮಾಡಿದ್ದರು.

ಈ ಮನವಿ ಪುರಸ್ಕರಿಸದ ಎಸ್‌‍ಐಟಿ ತಂಡ ಮತ್ತೆ ನೋಟಿಸ್‌‍ ನೀಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌‍ ನೀಡಿ ಸೂಚನೆ ನೀಡಿತ್ತು. ಕೇಂದ್ರ ಸರ್ಕಾರದ ನೆರವಿನೊಂದಿಗೆ ಬ್ಲೂಕಾರ್ನರ್‌ ನೋಟಿಸ್‌‍ ಜಾರಿ ಗೊಳಿಸಿ ಪ್ರಜ್ವಲ್‌ ಪತ್ತೆಗೆ ಪ್ರಯತ್ನ ನಡೆಸುತ್ತಿದೆ. ಆದರೂ ಪ್ರಜ್ವಲ್‌ ನಾಪತ್ತೆಯಾಗಿ 15 ದಿನಗಳಾದರೂ ಇನ್ನು ಸುಳಿವು ಸಿಕ್ಕಿಲ್ಲ.

ಪ್ರಜ್ವಲ್‌ ಅವರು ಈಗ ಬರುತ್ತಾರೆ, ಮಧ್ಯಾಹ್ನ ಬರುತ್ತಾರೆ, ನಾಳೆ ಬರುತ್ತಾರೆ, ಮೂರು ದಿನಗಳಲ್ಲಿ ಬರುತ್ತಾರೆ ಎಂದು ಪೊಲೀಸರು ಬೆಂಗಳೂರು, ಮಂಗಳೂರು, ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಯುತ್ತಲೇ ಇದ್ದಾರೆ.ಪ್ರಜ್ವಲ್‌ ಎಲ್ಲಿದ್ದಾರೆ ? ಯಾವ ದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ ?ಯಾರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಯಾವ ಮಾಹಿತಿಯೂ ಈ ವರೆಗೆ ಲಭ್ಯವಾಗಿಲ್ಲ.

ಜರ್ಮನಿಗೆ ತೆರಳಿದ್ದಾರೆ, ದುಬೈಗೆ ಆಗಮಿಸಿದ್ದಾರೆ, ದುಬೈನಿಂದ ನೇರವಾಗಿ ಬೆಂಗಳೂರಿಗೆ ಬರುತ್ತಾರೆ ಎಂಬಿತ್ಯಾದಿ ವದಂತಿಗಳು ಮಾತ್ರ ಕೇಳಿ ಬರುತ್ತಿವೆ, ಈ ವರೆಗೆ ಪ್ರಜ್ವಲ್‌ ಪತ್ತೆಯಾಗಿಲ್ಲ. ಪ್ರಜ್ವಲ್‌ ಇರುವಿಕೆಯನ್ನು ಪತ್ತೆ ಮಾಡುವಲ್ಲಿ ಎಸ್‌‍ಐಟಿ ತಂಡ ಸಂಪೂರ್ಣ ವಿಫಲವಾಗಿದೆ. ಇತ್ತ ಪೆನ್‌ಡ್ರೈವ್‌ ಪ್ರಕರಣ ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿದೆ.

ಮಹಿಳೆ ಅಪಹರಣ ಪ್ರಕರಣದಲ್ಲಿ ಪ್ರಜ್ವಲ್‌ ತಂದೆ ರೇವಣ್ಣ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ದೇವರಾಜೇಗೌಡ ಅವರನ್ನು ಹೊಳೆನರಸೀಪುರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೆನ್‌ಡ್ರೈವ್‌ ಪ್ರಕರಣದಲ್ಲಿ ಹಲವು ಸಂತ್ರಸ್ತ ಮಹಿಳೆಯರು ದೂರು ದಾಖಲಿಸಿದ್ದಾರೆ.
ಒಟ್ಟಾರೆ ಈ ಪ್ರಕರಣ ದಿನಕ್ಕೊಂದು, ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು ಪ್ರಮುಖ ಆರೋಪಿ ಪ್ರಜ್ವಲ್‌ ರೇವಣ್ಣ ಅವರನ್ನ ಪತ್ತೆ ಹಚ್ಚಿ ಯಾವಾಗ ಕರೆ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

Latest News