ಬೆಂಗಳೂರು,ಡಿ.14- ಕೋವಿಡ್ ಕಾಲದ ಹಗರಣದಲ್ಲಿನ ತನಿಖೆಗೆ ಎಸ್ಐಟಿ ರಚಿಸುವ ಅಗತ್ಯವಿದೆ. ಈಗಾಗಲೇ ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ಗುಂಡೂರಾವ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಹಗರಣ ಕುರಿತಂತೆ ಪ್ರಕರಣಗಳು ಒಂದೊಂದಾಗಿ ದಾಖಲಾಗುತ್ತಿವೆ. ಎಲ್ಲವನ್ನೂ ಸೇರಿಸಿ ಎಸ್ಐಟಿ ರಚಿಸುವ ಅಗತ್ಯವಿದೆ ಎಂದು ಸರ್ಕಾರಕ್ಕೆ ಮನವರಿಕೆಯಾಗಿದೆ. ಸಂಪುಟದಲ್ಲಿ ತೀರ್ಮಾನವಾಗಿದ್ದರೂ ಇಲ್ಲಿ ಎಸ್ಐಟಿ ರಚನೆಯಾಗಿಲ್ಲ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಸ್ಟೀಸ್ ಮೈಕಲ್ ಕುನ್ಹ ಅವರ ವರದಿಯ ಆಧಾರದ ಮೇಲೆ ಬಹಳಷ್ಟು ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಅನಾವಶ್ಯಕವಾಗಿ ಹೆಚ್ಚಿನ ಬೆಲೆ ಕೊಟ್ಟು ಖರೀದಿಗಳಾಗಿವೆ. ಇನ್ನೂ ಕೆಲವು ಕಡೆ ಬೋಗಸ್ ಕಂಪನಿಗಳಿಗೆ ಖರೀದಿ ಆದೇಶಗಳನ್ನು ನೀಡಿರುವುದು ಸೇರಿದಂತೆ ಹಲವಾರು ರೀತಿಯ ಪ್ರಕ್ರಿಯೆಗಳ ಲೋಪವಾಗಿದೆ. ಭ್ರಷ್ಟಾಚಾರ ನಡೆದು ಕೋಟ್ಯಂತರ ರೂ. ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ವಿವರಿಸಿದರು.
ಒಂದೊಂದು ಪ್ರಕರಣವೂ ಪ್ರತ್ಯೇಕವಾಗಿದೆ. ಕೆಲವು ಪ್ರಕರಣಗಳಲ್ಲಿ ನೇರವಾಗಿ ಭ್ರಷ್ಟಾಚಾರ ಕಂಡುಬರುತ್ತಿದೆ. ಅಂತಹವುಗಳಿಗೆ ಎಫ್ಐಆರ್ ದಾಖಲಿಸುತ್ತಿದ್ದೇವೆ. ಇನ್ನೂ ಕೆಲವುಗಳಲ್ಲಿ ಮತ್ತಷ್ಟು ತನಿಖೆ ಅಗತ್ಯವಿದೆ ಎಂದು ಮನಗಂಡಿರುವುದರಿಂದ ವಿಚಾರಣೆ ಮುಂದುವರೆಯುತ್ತಿದೆ ಎಂದರು.
ಪಿಪಿಇ ಕಿಟ್ ಮತ್ತು ಮಾಸ್ಕ್ ಖರೀದಿಯಲ್ಲಿ ತಪ್ಪುಗಳಾಗಿವೆ ಎಂಬುದು ಕಂಡುಬಂದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಹಲವಾರು ಎಫ್ಐಆರ್ಗಳು ದಾಖಲಿಸಲು ಈಗಾಗಲೇ ಆರಂಭವಾಗಿವೆ. ತನಿಖೆಗೆ ಎಸ್ಐಟಿ ರಚನೆಯಾಗಲಿದೆ ಎಂದು ಹೇಳಿದರು. ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಗಳನ್ನು ವಿಲೀನಗೊಳಿಸಲಾಗಿದೆ. ಆಡಳಿತಾತಕ ಜವಾಬ್ದಾರಿಯನ್ನು ಈ ಮೊದಲೇ ಆಯುಕ್ತರಿಗೆ ನೀಡಲಾಗಿತ್ತು. ಈಗ ಈ ಎರಡೂ ಇಲಾಖೆಗಳನ್ನು ಅಧಿಕೃತವಾಗಿ ವಿಲೀನಗೊಳಿಸಲಾಗಿದೆ ಎಂದರು.
ಔಷಧಿ ನಿಯಂತ್ರಣ ಇಲಾಖೆಯಲ್ಲಿ ಮತ್ತಷ್ಟು ಪಾರದರ್ಶಕತೆ ತಂದು ಉತ್ತಮ ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು. ತಪಾಸಣೆ, ಪರಿವೀಕ್ಷಣೆಗಳನ್ನು ಪ್ರಯೋಜನವಾಗುವ ರೀತಿಯಲ್ಲಿ ಸುಧಾರಣೆ ಮಾಡಿ ಗುಣಮಟ್ಟ ಕಾಯ್ದುಕೊಳ್ಳಬೇಕು.
ಕಳಪೆ ಗುಣಮಟ್ಟದ ಔಷಧಿಗಳನ್ನು ಪೂರೈಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ಹೀಗಾಗಿ ಔಷಧ ನಿಯಂತ್ರಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಇವೆರಡನ್ನೂ ವಿಲೀನಗೊಳಿಸಿ ಪ್ರತ್ಯೇಕ ಆಯುಕ್ತರನ್ನು ನಿಯೋಜನೆಗೊಳಿಸಲಾಗುವುದು ಎಂದರು. ಹವಾಮಾನ ಬದಲಾವಣೆಯಿಂದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಕುಡಿಯುವ ನೀರು ಮತ್ತು ಆಹಾರದ ಬಗ್ಗೆ ಕಾಳಜಿ ವಹಿಸಬೇಕು. ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ಓಡಾಡುವುದನ್ನು ಕಡಿಮೆ ಮಾಡಬೇಕು ಎಂದು ಹೇಳಿದರು.
ತೆಲಂಗಾಣದಲ್ಲಿ ತೆಲುಗು ನಟ ಅಲ್ಲು ಅರ್ಜುನ್ ಬಂಧನದ ಹಿಂದೆ ರಾಜಕೀಯ ಉದ್ದೇಶಗಳಿಲ್ಲ. ಅನಗತ್ಯವಾಗಿ ಕಾಂಗ್ರೆಸ್ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅಲ್ಲಿನ ವಾತಾವರಣ ನಮಗೆ ಗೊತ್ತಿಲ್ಲ. ಆದರೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ತಪ್ಪು ಮಾಡಿದಾಗ ಸರ್ಕಾರ ತನ್ನ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಎಂದರು.