Saturday, August 30, 2025
Homeರಾಜ್ಯತಾರ್ಕಿಕ ಅಂತ್ಯ ಕಾಣುವವರೆಗೂ ಎಸ್‌‍ಐಟಿ ತನಿಖೆ ಮುಂದುವರಿಕೆ : ಗೃಹ ಸಚಿವ ಪರಮೇಶ್ವರ್‌

ತಾರ್ಕಿಕ ಅಂತ್ಯ ಕಾಣುವವರೆಗೂ ಎಸ್‌‍ಐಟಿ ತನಿಖೆ ಮುಂದುವರಿಕೆ : ಗೃಹ ಸಚಿವ ಪರಮೇಶ್ವರ್‌

SIT investigation to continue till logical conclusion: Home Minister Parameshwar

ಬೆಂಗಳೂರು, ಆ.30– ಧರ್ಮಸ್ಥಳದಲ್ಲಿನ ಎಸ್‌‍ಐಟಿ ತನಿಖೆ ಎಲ್ಲಿಗೆ ಹೋಗುತ್ತದೆ ಎಂದು ಹೇಳಲಾಗುವುದಿಲ್ಲ. ತಾರ್ಕಿಕ ಅಂತ್ಯ ಕಾಣುವ ವರೆಗೂ ವಿಚಾರಣೆ ಮುಂದುವರೆಯಲಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎಸ್‌‍ಐಟಿ ಸಂಸ್ಥೆಯ ಮುಖ್ಯಸ್ಥ ಪ್ರಣಬ್‌ ಮೊಹಾಂತಿ ಇಂದು ತಮನ್ನು ಭೇಟಿ ಮಾಡಿ, ಚರ್ಚೆ ನಡೆಸಿದ್ದಾರೆ.

ಸಮಾಲೋಚನೆಯ ವಿಚಾರಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದರು.ಎಸ್‌‍ಐಟಿಯವರಿಗೆ ಈಗಾಗಲೇ ತನಿಖೆಯ ಮಾರ್ಗ ಸೂಚಿಗಳನ್ನು ನೀಡಲಾಗಿದೆ. ಅದರಂತೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ತನಿಖೆ ಬೇಗ ಮುಗಿಸಿ ಎಂದು ಹೇಳಬಹುದಷ್ಟೇ. ಅದರೆ ಬೇಗ ವರದಿ ಕೊಡಿ, ಈ ವಾರದಲ್ಲೇ ತನಿಖೆ ಮುಗಿಸಿ, ಮುಂದಿನವಾರ ವರದಿ ಕೊಡಿ ಎಂದು ಸೂಚನೆ ನೀಡಲು ಅವಕಾಶವಿಲ್ಲ ಎಂದು ಹೇಳಿದರು.

ಧರ್ಮಸ್ಥಳದಲ್ಲಿ ಉತ್ಖನನ ಮಾಡಿದಾಗ ದೊರೆತ್ತಿರುವ ಹಲವಾರು ಅಂಶಗಳನ್ನು ಎಫ್‌ಎಸ್‌‍ಎಲ್‌ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸಾಕಷ್ಟು ರೀತಿಯ ವಿಶ್ಲೇಷಣೆಗಳು ನಡೆಯಬೇಕಿದೆ. ವರದಿ ಯಾವ ರೀತಿ ಇರುತ್ತದೆ ಎಂದು ನನಗೆ ಗೊತ್ತಿಲ್ಲ. ಅನಗತ್ಯವಾಗಿ ಊಹ-ಪೋಹಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿದರು.

ತನಿಖೆಗೆ ಕಾಲಮಿತಿ ವಿಧಿಸಿಲ್ಲ. ತ್ವರಿತವಾಗಿ ಪ್ರಕ್ರಿಯೆಗಳನ್ನು ನಡೆಸಿ ಎಂದು ಸಲಹೆ ನೀಡಬಹುದು. ಆದರೆ ಎಲ್ಲವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳ ಬೇಕಿರುವುದರಿಂದ ಒತ್ತಡ ಹೇರುವುದು ಸರಿಯಲ್ಲ. ವಿಚಾರಣಾ ಹಂತದಲ್ಲಿ ಬೇರೆ ಬೇರೆ ರೀತಿಯ ಮಾಹಿತಿಗಳು ಸಿಕ್ಕರೆ ಅವುಗಳನ್ನು ಎಸ್‌‍ಐಟಿ ಅಧಿಕಾರಿಗಳು ತನಿಖೆಗೊಳಪಡಿಸುತ್ತಾರೆ ಎಂದರು. ರಾಜ್ಯಸರ್ಕಾರ ಯಾವುದೇ ರೀತಿಯ ನಿರ್ದೇಶನ ನೀಡುವುದಿಲ್ಲ. ಸೌಜನ್ಯ ಅವರ ತಾಯಿ ದೂರು ನೀಡಿರುವ ಬಗ್ಗೆಯೂ ಎಸ್‌‍ಐಟಿ ಅವರೇ ಪರಿಶೀಲನೆ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಂಧಿತ ಆರೋಪಿ ಚಿನ್ನಯ್ಯನನ್ನು ಬೆಂಗಳೂರಿಗೆ ಕರೆತರುವುದು ಸೇರಿದಂತೆ ಎಲ್ಲಾ ರೀತಿಯ ಪ್ರಕ್ರಿಯೆಗಳನ್ನು ಎಸ್‌‍ಐಟಿಯವರು ನಿರ್ಧರಿಸುತ್ತಾರೆ. ಆತನಿಗೆ ಆಶ್ರಯ ಕೊಟ್ಟವರನ್ನು ಬಂಧಿಸಬೇಕೆ? ಬೇಡವೇ? ಎಂಬುದು ಕೂಡ ಎಸ್‌‍ಐಟಿ ಆಧಿಕಾರಿಗಳ ವಿವೇಚನೆಗೆ ಸೇರಿದೆ ಎಂದರು. ವಿರೋಧ ಪಕ್ಷಗಳು ಹೇಳಿದಂತೆ ತನಿಖೆ ನಡೆಸುವುದಾಗಲೀ, ಕಾಲಮಿತಿ ವಿಧಿಸುವುದಾಗಲೀ ಸಾಧ್ಯವಿಲ್ಲ. ರಾಜಕೀಯಕ್ಕಾಗಿ ಅವರು ಮಾತನಾಡುತ್ತಾರೆ. ಅದಕ್ಕೆ ನಾನು ಪ್ರತಿಕ್ರಿಯಿಸುವ ಅಗತ್ಯ ಇಲ್ಲ ಎಂದರು.

ತನಿಖೆ ಉತ್ತಮವಾಗಿ ನಡೆಯುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸೇರಿದಂತೆ ಎಲ್ಲರೂ ಎಸ್‌‍ಐಟಿಯನ್ನು ಸ್ವಾಗತ ಮಾಡಿದ್ದಾರೆ. ಈ ಸಂದರ್ಭದಲ್ಲಿ ಎನ್‌ಐಎ ಸಂಸ್ಥೆಗೆ ವಹಿಸಬೇಕು ಎಂದರೆ ಅದು ಅಸಾಧ್ಯ. ನಾವು, ನೀವು ಅಥವಾ ಬೇರೆಯವರು ಹೇಳಿದಂತೆ ಆಗುವುದಿಲ್ಲ. ಎಸ್‌‍ಐಟಿಗೆ ನಿಯಮ ಬದ್ಧವಾದ ಕ್ರಮಗಳಿವೆ. ಅದರ ಪ್ರಕಾರವೇ ನಡೆಯುತ್ತದೆ ಎಂದರು.

RELATED ARTICLES

Latest News