ಬೆಂಗಳೂರು,ಸೆ.30- ಸಾಯಿ ಮಿನರಲ್ಸ್ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿಯವರ ಜಾಮೀನು ರದ್ದು ಕೋರಿ ಎಸ್‌ಐಟಿ ಹೈಕೋರ್ಟ್ ಮೆಟ್ಟಿಲೇರಲು ಮುಂದಾಗಿದೆ.ಗಮನಿಸಬೇಕಾದ ಅಂಶವೆಂದರೆ ಮೂರು ದಿನಗಳ ಹಿಂದಷ್ಟೇ ಕುಮಾರಸ್ವಾಮಿಯವರು ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದರು.
ಇದರ ಬೆನ್ನಲೇ ಎಸ್‌ಐಟಿ ಲೋಕಾಯುಕ್ತ ನ್ಯಾಯಾಲಯ ನೀಡಿರುವ ನಿರೀಕ್ಷಣಾ ಜಾಮೀನು ರದ್ದುಪಡಿಸಲು ಮೇಲನವಿ ಅರ್ಜಿ ಸಲ್ಲಿಕೆಗೆ ತಯಾರಿ ನಡೆಸಿದೆ.ಶನಿವಾರ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಿದ್ದ ಕುಮಾರಸ್ವಾಮಿ, ಲೋಕಾಯುಕ್ತ ಡಿವೈಎಸ್ಪಿ ಕವಿತಾ ಮತ್ತು ತನಿಖಾಧಿಕಾರಿಗಳು ಮುಂದಿಟ್ಟ ಕೆಲವು ಪ್ರಶ್ನೆಗಳಿಗೆ ಅಸಮರ್ಪಕ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ವಿಚಾರಣೆಗೆ ಅಸಹಕಾರ ತೋರಿದ ಹಿನ್ನಲೆಯಲ್ಲಿ ನಿರೀಕ್ಷಣಾ ಜಾಮೀನು ರದ್ದು ಕೋರಿ ಮೇಲನವಿ ಸಲ್ಲಿಸಲು ಎಸ್‌ಐಟಿ ತೀರ್ಮಾನಿಸಿದೆ. ಈ ಸಂಬಂಧ ಸೋಮವಾರ ಕಾನೂನು ತಜ್ಞರ ಜೊತೆ ಸಾಧಕಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ದ ಕುಮಾರಸ್ವಾಮಿ ಮಾಡಿದ ಆರೋಪಕ್ಕೆ ಇದು ಕರ್ತವ್ಯಕ್ಕೆ ಅಡ್ಡಿಪಡಿಸುವ ತಂತ್ರವಾಗಿದೆ. ಅವರು ಎಷ್ಟೇ ಆರೋಪ ಮಾಡಿದರೂ ಆರೋಪಿ ಆರೋಪಿಯೇ ಎಂದು ತಿರುಗೇಟು ನೀಡಿದ್ದರು. ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ 2023ರ ಸೆಪ್ಟೆಂಬರ್‌ನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದರು.
2006ರಲ್ಲಿ ಬಿಜೆಪಿ-ಜೆಡಿಎಸ್ ಸಮಿಶ್ರ ಸರ್ಕಾರವಿದ್ದಾಗ ಮುಖ್ಯಮಂತ್ರಿಯಾಗಿದ್ದ ಎಚ್ ಕುಮಾರಸ್ವಾಮಿ ಅವರು ಎಂಸಿಆರ್ ನಿಯಮಾವಳಿಗಳನ್ನು ಉಲ್ಲಂಘಿಸಿ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ವಿನೋದ್ ಗೋಯಲ್ ಎಂಬ ವ್ಯಕ್ತಿಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಎನ್‌ಇಬಿ ರೇಂಜ್‌ನಲ್ಲಿನ 550 ಎಕರೆ ಭೂಮಿ ಮಂಜೂರು ಮಾಡಲು ಒಳಸಂಚು ರೂಪಿಸಿದ್ದಾರೆ ಎಂಬುದು ಆರೋಪವಾಗಿದೆ.
ಸಾಯಿ ವೆಂಕಟೇಶ್ವರ ಮಿನರಲ್‌್ಸ ಮಾಲೀಕ ವಿನೋದ್ ಗೋಯಲ್ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಲು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ಕೆ.ಜಯಚಂದ್ರ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಬಿ ಟಿ ಜವರೇಗೌಡ ಸಹಕರಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ವಿನೋದ್ ಗೋಯಲ್ ಅವರನ್ನು ಪ್ರಥಮ ಆರೋಪಿಯೆಂದೂ, ಎಚ್.ಡಿ. ಕುಮಾರಸ್ವಾಮಿ ಅವರನ್ನು 2ನೇ ಆರೋಪಿಯೆಂದೂ, ಕೆ.ಜಯಚಂದ್ರ ಹಾಗೂ ಜವರೇಗೌಡ ಅವರನ್ನು ಕ್ರಮವಾಗಿ ಮೂರು ಮತ್ತು ನಾಲ್ಕನೇ ಆರೋಪಿಗಳನ್ನಾಗಿ ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ಗಳಾದ 420, 465, 468, 409 ಜೊತೆಗೆ 120ಬಿ ಮತ್ತು ಐಪಿಸಿ ಸೆಕ್ಷನ್ 511, ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್ 13(2) ಜೊತೆಗೆ 13(1)(ಡಿ) ಮತ್ತು ಎಂಎಂಆರ್‌ಡಿ ಕಾಯಿದೆಯ ಸೆಕ್ಷನ್‌ಗಳಾದ 21(2) ಮತ್ತು 23 ಅಡಿ ದಾಖಲಾಗಿರುವ ಪ್ರಕರಣದಲ್ಲಿ ಸಂಬಂಧಿತ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲು ಅಭಿಯೋಜನಾ ಮಂಜೂರಾತಿ ನೀಡುವಂತೆ ರಾಜ್ಯಪಾಲರಿಗೆ ಲೋಕಾಯುಕ್ತ ಪೊಲೀಸರು 2023ರ ಸೆಪ್ಟೆಂಬರ್‌ನಲ್ಲಿ ಮನವಿ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಎನ್‌ಇಬಿ ರೇಂಜ್ ಪ್ರದೇಶದಲ್ಲಿ ಮೆಸರ್ಸ್ ಚೌಗಲೆ ಮತ್ತು ಕಂಪನಿಯು ಗಣಿಗಾರಿಕೆಗೆ ಮಂಜೂರಾತಿ ಪಡೆದು ಆನಂತರ ಸರ್ಕಾರಕ್ಕೆ 550 ಎಕರೆ ಅಧ್ಯರ್ಪಣೆ ಮಾಡಿದ ಪ್ರದೇಶಕ್ಕೆ ಗಣಿ ಗುತ್ತಿಗೆ ಮಂಜೂರಾತಿಗಾಗಿ 2006ರ ಏಪ್ರಿಲ್ ತಿಂಗಳಲ್ಲಿ ಒಟ್ಟು 29 ಅರ್ಜಿದಾರರು ತಮ ಸಂಸ್ಥೆ, ಕಂಪನಿ ಹೆಸರಿನಲ್ಲಿ ಬೇರೆ ಬೇರೆ ವಿಸ್ತೀರ್ಣಗಳಿಗೆ ಅರ್ಜಿ ಸಲ್ಲಿಸಿದ್ದವು.
ಶ್ರೀ ಸಾಯಿ ವೆಂಕಟೇಶ್ವರ ಮಿನರಲ್‌್ಸ ಹೆಸರಿನಡಿ ಎಸ್ ವಿ ಸಾಕ್ರೆ ಸಲ್ಲಿಸಿದ್ದ ಅರ್ಜಿಯಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್‌್ಸ ಸಂಸ್ಥೆಯ ರೂಪುರೇಷೆಗಳು ಹಾಗೂ ಪಾಲುದಾರರ ಬಗ್ಗೆ ಇರುವ ಅಸ್ಪಷ್ಪತೆಯ ಲಾಭ ಪಡೆಯುವ ಉದ್ದೇಶದಿಂದ ವಿನೋದ್ ಗೋಯಲ್ ಎಂಬ ವ್ಯಕ್ತಿಯು ಸರ್ಕಾರಿ ಅಧಿಕಾರಿಗಳಾದ ಜಯಚಂದ್ರ ಮತ್ತು ಜವರೇಗೌಡ ಜೊತೆ ಶಾಮೀಲಾಗಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಆ ದಾಖಲೆಗಳನ್ನು ಆಧರಿಸಿ, ಹೈಕೋರ್ಟ್‌ನಲ್ಲಿ ದಾವೆ ಹೂಡಿ, ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಹೆಸರಿಗೆ ಗಣಿ ಗುತ್ತಿಗೆ ನೀಡುವಂತೆ ಮತ್ತು ಎಸ್.ವಿ.ಸಾಕ್ರೆ ಹೆಸರಿನ ಬದಲು ವಿನೋದ್ ಗೋಯೆಲ್ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್‌್ಸ ಮಾಲೀಕರು ಎಂದು ಮಾಡಿ, ಆ ಮೂಲಕ ಗಣಿ ಗುತ್ತಿಗೆ ಪಡೆಯಲು ಯತ್ನಿಸಿದ್ದಾರೆ ಎಂಬುದು ಆರೋಪವಾಗಿದೆ.