ಬೆಂಗಳೂರು, ಸೆ.8– ಧರ್ಮಸ್ಥಳದ ವಿರುದ್ಧದ ಅಪಪ್ರಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರೆಸಿರುವ ಎಸ್‌ಐಟಿ ಅಧಿಕಾರಿಗಳು, ಸುಮಾರು 50ಕ್ಕೂ ಹೆಚ್ಚು ಯೂಟ್ಯೂಬರ್‌ಗಳು ಸೇರಿದಂತೆ ಹಲವರಿಗೆ ನೋಟಿಸ್ ನೀಡಲು ಮುಂದಾಗಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಬಂಗ್ಲೆಗುಡ್ಡ ಪ್ರದೇಶದಲ್ಲಿ ಪಂಚನಾಮೆ ನಡೆಸಲು ಮುಂದಾಗಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಹೇಳಿ ಅದಕ್ಕೆ ತಕ್ಕ ಪುರಾವೆ ನೀಡಲಾಗದೆ ಈಗ ನ್ಯಾಯಾಂಗ ಬಂಧನದಲ್ಲಿರುವ ಚಿನ್ನಯ್ಯನ ಹೇಳಿಕೆ ಆಧರಿಸಿ ಎಸ್‌ಐಟಿ ತನಿಖೆ ಮುಂದುವರೆಸಿದೆ. ತಲೆ ಬುರಡೆ ತಂದುಕೊಟ್ಟಿದ್ದಾರೆ ಎಂದು ಹೇಳಲಾದ ಸೌಜನ್ಯ ಅವರ ಮಾವ ವಿಠಲ್ ಗೌಡ, ಅವರಿಗೆ ಸಹಕರಿಸಿದ್ದ ಪ್ರದೀಪ್ ಗೌಡ, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ ಸೇರಿ ಹಲವರನ್ನು ನಾಲ್ಕು ದಿನಗಳ ಕಾಲ ವಿಚಾರಣೆ ನಡೆಸಿದ್ದು ನಿನ್ನೆ ಭಾನುವಾರದ ರಜಾ ದಿನವಾದ ಕಾರಣಕ್ಕೆ ಅಲ್ಪ ವಿರಾಮ ನೀಡಲಾಗಿತ್ತು. ಇಂದು ಐದನೇ ದಿನದ ವಿಚಾರಣೆ ಮುಂದುವರೆಸಿದ್ದಾರೆ.
ಮೊನ್ನೆ ವಿಠಲ್ ಗೌಡ ಹಾಗೂ ಪ್ರದೀಪ್ ಅವರನ್ನು ಕರೆದುಕೊಂಡು ಹೋಗಿ ಎಸ್‌ಐಟಿ ಅಧಿಕಾರಿಗಳು ಬಂಗ್ಲೆಗುಡ್ಡ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದರು. ತಲೆ ಬುರುಡೆಯನ್ನು ಭೂಮಿಯ ಮೇಲ್ಭಾಗದಿಂದಲೇ ತರಲಾಗಿತ್ತು ಎಂದು ಹೇಳಲಾಗಿತ್ತು. ಆ ತಲೆ ಬುರುಡೆಗೆ ಸಂಬಂಧಿಸಿದ ಅಸ್ಥಿ ಪಂಜರದ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.
ಭೂಮಿ ಅಗೆದರೆ ಅಲ್ಲಿ ಅಸ್ಥಿ ಪಂಜರ ಸಿಗಬಹುದು ಎಂದು ವಿಚಾರಣೆ ವೇಳೆ ವಿಠಲ್ ಗೌಡ ತಿಳಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಇಂದು ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಅವರ ಸಮುಖದಲ್ಲಿ ತಲೆ ಬುರಡೆ ಸಿಕ್ಕಿದ್ದ ಬಂಗ್ಲೆಗುಡ್ಡ ಪ್ರದೇಶದಲ್ಲಿ ಪಂಚನಾಮೆ ನಡೆಸುವ ಸಾಧ್ಯತೆ ಇದೆ. ಅಗತ್ಯ ಎನಿಸಿದರೆ ಆ ಪ್ರದೇಶದಲ್ಲಿ ಉತ್ಖನನ ನಡೆಸುವ ಬಗ್ಗೆಯೂ ಎಸ್‌ಐ ಟಿ ಅಧಿಕಾರಿಗಳು ನಿರ್ಧರಿಸಲಿದ್ದಾರೆ.
ಚಿನ್ನಯ್ಯ ಈವರೆಗೂ ತೋರಿಸಿದ ಒಟ್ಟು 17 ಸ್ಥಳಗಳಲ್ಲಿ ಉತ್ಖನನ ನಡೆಸಿದಾಗ ಯಾವುದೇ ಮಹತ್ವದ ಪುರಾವೆಗಳು ದೊರೆತಿರಲಿಲ್ಲ. ಬಂಗ್ಲೆಗುಡ್ಡ ಪ್ರದೇಶ ನೇತ್ರಾವತಿ ನದಿಯ ದಂಡೆಯಲ್ಲಿದ್ದು ಅದನ್ನು ಚಿನ್ನಯ್ಯ ಆರಂಭದಲ್ಲಿ ತೋರಿಸಿರಲಿಲ್ಲ. 11ನೇ ಸ್ಥಳದಲ್ಲಿ ಉತ್ಖನನ ನಡೆಸುವಾಗ ಇದ್ದಕ್ಕಿದ್ದಂತೆ ಬಂಗ್ಲೆಗುಡ್ಡಕ್ಕೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿದ್ದ. ಅಲ್ಲಿ ಕೆಲ ಅಸ್ಥಿಗಳು ದೊರೆತಿದ್ದವು. ಅದನ್ನು 11 ಎ ಎಂದು ಗುರುತಿಸಲಾಗಿತ್ತು.
ಸದರಿ ಜಾಗ ಅರಣ್ಯ ಪ್ರದೇಶವಾಗಿದ್ದರಿಂದ ಉತ್ಖನನ ನಡೆಸಲು ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಈಗ ವಿಠಲ್‌ಗೌಡ ವಿಚಾರಣೆಯ ವೇಳೆಯಲ್ಲಿ ಅಲ್ಲಿ ಮತ್ತೊಮೆ ಉತ್ಖನನ ನಡೆಸುವ ಪರಿಸ್ಥಿತಿ ಎದುರಾಗಿದೆ.
ಇದರ ನಡುವೆ ಇಂದು ಬೆಳಗ್ಗೆ ಮಟ್ಟಣ್ಣನವರ್, ಜಯಂತ್ ಟಿ, ಅಭಿಷೇಕ್ ಹಾಗೂ ಮತ್ತಿತರರು ಎಸ್‌ಐಟಿ ಕಚೇರಿಗೆ ವಿಚಾರಣೆೆಗಾಗಿ ಹಾಜರಾಗಿದ್ದು, ಅವರ ವಿಚಾರಣೆ ಮುಂದುವರೆದಿದೆ.
ಧರ್ಮಸ್ಥಳದ ಕುರಿತಂತೆ ಸುಮಾರು 60ಕ್ಕೂ ಹೆಚ್ಚು ಯೂಟೂಬರ್‌ಗಳು, 100ಕ್ಕೂ ಹೆಚ್ಚು ಕಂಟೆಂಟ್ ಕ್ರಿಯೆಟರ್‌ಗಳು, 500ಕ್ಕೂ ಹೆಚ್ಚು ಟ್ರೋಲ್ ಪೇಜ್ ಗಳ ಮಾಹಿತಿಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.
ಯೂಟ್ಯೂಬರ್‌ಗಳಲ್ಲಿ ಕರ್ನಾಟಕದವರಷ್ಟೆ ಅಲ್ಲ, ಕೇರಳದ ಕೆಲವರು ತೊಡಗಿಸಿಕೊಂಡಿದ್ದರು. ತಪ್ಪು ಮಾಹಿತಿ ಪ್ರಸಾರ ಮಾಡಿದ ಯುಟ್ಯೂಬರ್, ಟ್ರೋಲ್ ಪೇಜ್ ಅಡಿನ್‌ಗಳನ್ನು ವಿಚಾರಣೆಗೆ ಒಳಪಡಿಸಲು ನೋಟಿಸ್ ನೀಡುವ ಸಾಧ್ಯತೆ ಇದೆ. ಧರ್ಮಸ್ಥಳದ ಕುರಿತಂತೆ ಸಾವಿರಾರು ಯುಟ್ಯೂಬ್‌ಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಅದರಲ್ಲಿ ಬಹುತೇಕ ತಪ್ಪು ಮಾಹಿತಿ ಇರುವುದನ್ನು ಹಾಗೂ ಕೆಲವೊಮೆ ವೈಭವೀಕರಿಸಿರುವುದನ್ನು ಎಸ್‌ಐಟಿ ಅಧಿಕಾರಿಗಳು ಗುರುತಿಸಿದ್ದಾರೆ. ಕೇರಳದ ಮುನಾಫ್ ಎಂಬ ಯೂಟ್ಯೂಬರ್ ಗೂ ನೋಟಿಸ್ ನೀಡಲಾಗಿದೆ.