Wednesday, September 17, 2025
Homeರಾಜ್ಯನೇತ್ರಾವತಿ ತಟದಲ್ಲಿ ಮೂಳೆಗಳಿಗಾಗಿ ಎಸ್‌‍ಐಟಿ ಅಧಿಕಾರಿಗಳ ಶೋಧ.!

ನೇತ್ರಾವತಿ ತಟದಲ್ಲಿ ಮೂಳೆಗಳಿಗಾಗಿ ಎಸ್‌‍ಐಟಿ ಅಧಿಕಾರಿಗಳ ಶೋಧ.!

SIT officials search for bones on the banks of Netravati.!

ಬೆಂಗಳೂರು, ಸೆ.17- ಬಹಳ ದಿನಗಳ ಬಳಿಕ ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ವಿಶೇಷ ತನಿಖಾ ದಳ ಪರಿಶೀಲನೆಗೆ ನಡೆಸಿದ್ದು, ಭೂಮಿಯ ಮೇಲ್ಭಾಗದಲ್ಲಿರುವ ಅಸ್ಥಿಗಳನ್ನು ಸಂಗ್ರಹಿಸುವ ಪ್ರಯತ್ನ ಮಾಡುತ್ತಿದೆ. ಸೌಜನ್ಯ ಅವರ ಮಾವ ವಿಠಲ್‌ಗೌಡ ಅವರ ಹೇಳಿಕೆ ಎಸ್‌‍ಐಟಿ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

ನೇತ್ರಾವತಿ ದಂಡೆಯಲ್ಲಿರುವ ಬಂಗ್ಲೆಗುಡ್ಡದಲ್ಲಿ ತಾವು ರಾಶಿರಾಶಿ ಅಸ್ಥಿಪಂಜರಗಳನ್ನು ಕಂಡಿದ್ದಾಗಿ ಅವರು ಹೇಳಿದರು.ಈ ಹಿಂದೆ ಚಿನ್ನಯ್ಯ ನೀಡಿದ್ದ ಹೇಳಿಕೆ ಆಧಾರದ ಮೇಲೆ ಉತ್ಖನನ ನಡೆಸಿದಾಗ ಯಾವುದೇ ಮಹತ್ವದ ಪುರಾವೆಗಳು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಠಲ್‌ಗೌಡ ಹೇಳಿಕೆಯನ್ನು ನಂಬಿ ಮತ್ತೆ ಉತ್ಖನನ ನಡೆಸಲು ಎಸ್‌‍ಐಟಿ ಹಿಂದೇಟು ಹಾಕಿದೆ.

ಬದಲಾಗಿ ಪಂಚರ ಸಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿ, ಭೂಮಿಯ ಮೇಲ್ಭಾಗದಲ್ಲಿ ಕಂಡು ಬರುವ ಮೂಳೆಗಳನ್ನು ಸಂಗ್ರಹಿಸಲು ಎಸ್‌‍ಐಟಿ ನಿರ್ಧರಿಸಿದೆ ಎನ್ನಲಾಗಿದೆ.ಈ ಹಿಂದೆ 6ನೇ ಪಾಯಿಂಟ್‌ನ್ನು ಅಗೆದಾಗ ದೊರೆತ್ತಿದ್ದ ಕೆಲವು ಮೂಳೆಗಳನ್ನು ಪಿವಿಸಿ ಪೈಪ್‌ನಲ್ಲಿ ಸಂಗ್ರಹಿಸಲಾಗಿತ್ತು. ಇಂದು ಅದೇ ಮಾದರಿಯ ಐದಾರು ಪಿವಿಸಿ ಪೈಪ್‌ಗಳನ್ನು ತೆಗೆದುಕೊಂಡು ಹೋಗಲಾಗಿದೆ.

ಸುಮಾರು 50 ರಿಂದ 60 ಮಂದಿಯ ತಂಡ ಬಂಗ್ಲೆಗುಡ್ಡ ದಟ್ಟ ಅರಣ್ಯ ಪ್ರದೇಶವನ್ನು ಪ್ರವೇಶಿಸಿ ಶೋಧ ನಡೆಸುತ್ತಿದೆ.ಎಸ್‌‍ಐಟಿಯ ತನಿಖಾಧಿಕಾರಿ ಜಿತೇಂದ್ರಕುಮಾರ ದಯಾಮ ಹಾಗೂ ಎಸ್‌‍ಪಿ ಸೈಮನ್‌ ಅವರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಹಾಗೂ ಪಂಚನಾಮೆ ಮಾಡಲಾಗಿದೆ. ತಂಡದಲ್ಲಿ ಅರಣ್ಯ ಇಲಾಖೆಯ 13ಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಬಂದಿಗಳಿದ್ದರು. ಕ್ರೈಂ ಸೀನ್‌ನ 9ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಬಾಂಬ್‌ ಪತ್ತೆಗಾಗಿ ಬಳಸುವ ಮೆಟಲ್‌ ಡಿಟೆಕ್ಟರ್‌ ಯಂತ್ರಗಳನ್ನು ಉಪಯೋಗಿಸಲಾಗಿದೆ.

ವೈದ್ಯರು, ಕಂದಾಯ ಇಲಾಖೆಯ ಕೆಲ ಹಂತದ ಅಧಿಕಾರಿಗಳು, ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರು, ಗ್ರಾಮ ಪಂಚಾಯಿತಿ ಜನ ಪ್ರತಿನಿಧಿಗಳು ಈ ತಂಡದಲ್ಲಿದ್ದರು.ಸಾಮಾನ್ಯವಾಗಿ ಕಳೇಬರ ಸಂಗ್ರಹದ ವೇಳೆ ಮ್ಯಾಜಿಸ್ಟ್ರೇಟ್‌ ಹಂತದ ಅಧಿಕಾರಿಗಳಾದ ತಹಶೀಲ್ದಾರ್‌ ಅಥವಾ ಉಪವಿಭಾಗಾಧಿಕಾರಿ ಹಾಜರಿರಬೇಕಾಗುತ್ತದೆ, ಆದರೆ ಇಂದಿನ ಮಹಜರಿನಲ್ಲಿ ತಹಶೀಲ್ದಾರ್‌ ಮತ್ತು ಉಪವಿಭಾಗಾಧಿಕಾರಿ ಕಂಡು ಬಂದಿರಲಿಲ್ಲ.

ಪ್ರಮುಖವಾಗಿ ಬಂಗ್ಲೆಗುಡ್ಡದಲ್ಲಿ ರಾಶಿರಾಶಿ ಅಸ್ಥಿಪಂಜರಗಳಿವೆ ಎಂದು ಹೇಳಿಕೆ ನೀಡಿದ್ದ ವಿಠಲ್‌ಗೌಡರನ್ನು ಎಸ್‌‍ಐಟಿ ಅಧಿಕಾರಿಗಳು ಸ್ಥಳಕ್ಕೆ ಕರೆ ತಂದಿರಲಿಲ್ಲ. ತಂಡ ಪರಿಶೀಲನೆ ನಡೆಸುತ್ತಿದ್ದ ಸಮಯದಲ್ಲೇ ವಿಠಲ್‌ಗೌಡ ಅದೇ ಮಾರ್ಗದಲ್ಲಿ ತಮ ಕಾರಿನಲ್ಲಿ ಪ್ರಯಾಣಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ವಿಠಲ್‌ಗೌಡ, ತಮಗೆ ಎಸ್‌‍ಐಟಿ ಯಾವುದೇ ಮಾಹಿತಿ ನೀಡಿಲ್ಲ ಹಾಗೂ ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮೊದಲು ಪುರಂದರಗೌಡ ಹಾಗೂ ತುಕಾರಾಂ ಅವರು ಎಸ್‌‍ಐಟಿಯ ಮುಂದೆ ಹಾಜರಾಗಿ ಚಿನ್ನಯ್ಯ ಶವಗಳನ್ನು ಹೂತಿಟ್ಟಿರುವುದನ್ನು ನಾವು ನೋಡಿದ್ದೇವೆ. ನಮನ್ನು ಸಾಕ್ಷಿದಾರರನ್ನಾಗಿ ಪರಿಗಣಿಸಬೇಕೆಂದು ಪ್ರತಿಪಾದಿಸಿದರು. ಆದರೆ ಎಸ್‌‍ಐಟಿ ಇದನ್ನು ತಿರಸ್ಕರಿಸಿತ್ತು.

ಈ ಇಬ್ಬರೂ ಹೈಕೋರ್ಟ್‌ ಮೆಟ್ಟಿಲೇರಿದರು. ಅದರ ವಿಚಾರಣೆ ನಾಳೆ ನಡೆಯಲಿದೆ. ಈ ಇಬ್ಬರೂ ಇಂದು ಸ್ಥಳ ಪರಿಶೀಲನೆ ವೇಳೆ ಅಗಮಿಸಿದ್ದರು. ಆದರೆ ಸಾರ್ವಜನಿಕರಂತೆ ದೂರದಲ್ಲೇ ನಿಂತು ಸ್ವಲ್ಪಹೊತ್ತು ಗಮನಿಸಿ ನಂತರ ನಿರ್ಗಮಸಿದರು ಎಂದು ತಿಳಿದು ಬಂದಿದೆ. ಎಸ್‌‍ಐಟಿ ಅಧಿಕಾರಿಗಳ ನಡೆ ನಿಗೂಢವಾಗಿದ್ದು ತಹಶೀಲ್ದಾರ್‌, ಉಪವಿಭಾಗಾಧಿಕಾರಿಗಳು, ದೂರುದಾರರು ಮತ್ತು ಮಾಹಿತಿದಾರರ ಗೈರು ಹಾಜರಿಯಲ್ಲಿ ಸ್ಥಳ ಮಹಜರು ನಡೆಸುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಎಸ್‌‍ಐಟಿ ತನಿಖೆಗೆ ಸಹಕರಿಸುತ್ತಿಲ್ಲವೇ ಎಂಬ ಅನುಮಾನವೂ ಮೂಡಿದೆ. ಕ್ರೈಂ ಸೀನ್‌ ಅಧಿಕಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿರುವುದು ಪಿವಿಸಿ ಪೈಪ್‌ಗಳನ್ನು ತಂದಿರುವುದು ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೆಲವು ಸಮಯದ ಬಳಿಕ ಸಿಬ್ಬಂದಿಗಳು ಪ್ಲಾಸ್ಟಿಕ್‌ ಚೇರುಗಳನ್ನು ಸ್ಥಳ ಮಹಜರು ನಡೆಯುತ್ತಿರುವ ಪ್ರದೇಶಕ್ಕೆ ತೆಗೆದುಕೊಂಡು ಹೋಗಿರುವುದು ಕಂಡು ಬಂದಿದೆ.

RELATED ARTICLES

Latest News