ಬೆಂಗಳೂರು, ಸೆ.7– ಧರ್ಮ ಸ್ಥಳದ ಪ್ರಕರಣದಲ್ಲಿ ವಿವಾದದ ಕೇಂದ್ರಬಿಂದು ತಲೆಬುರುಡೆಯ ಮೂಲ ಪತ್ತೆ ಹಚ್ಚುವಲ್ಲಿ ಎಸ್‌ಐಟಿ ಅಧಿಕಾರಿಗಳು ಯಶಸ್ವಿಯಾಗಿದ್ದು, ಸೌಜನ್ಯ ಅವರ ಮಾವ ವಿಠಲಗೌಡ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿಚಾರಣೆಗೊಳಪಡಿಸಿ, ಸ್ಥಳ ಮಹಜರು ನಡೆಸಿದ್ದಾರೆ.
ಮೂಲಗಳ ಪ್ರಕಾರ ಚಿನ್ನಯ್ಯನನ್ನು ವಾಪಸ್ ಕರೆತಂದಿದ್ದೆ ವಿಠಲ್‌ಗೌಡ ಎಂದು ಹೇಳಲಾಗಿದೆ. ಸೌಜನ್ಯ ಅವರಿಗೆ ನ್ಯಾಯ ಕೊಡಿಸಲು ತಾವು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದಾಗ ತಮಗೆ ಸಕಾರಾತಕ ಸ್ಪಂದನೆ ಸಿಗಲಿಲ್ಲ ಎಂದು ವಿಠಲ್‌ಗೌಡ ಹೇಳಿಕೆ ನೀಡಿ, ಹಲವು ಅನುಮಾನಗಳು ಮೂಡುವಂತೆ ಮಾಡಿದ್ದರು.
ಸೌಜನ್ಯ ಅವರ ಮಾವ ಪಾಂಗಳದ ವಿಠಲ್‌ಗೌಡ ಧರ್ಮಸ್ಥಳ ಸಮೀಪ ಬಂಗ್ಲೆಗುಡ್ಡದಿಂದ ತಲೆಬುರುಡೆ ತಂದು ಗಿರೀಶ್ ಮಟ್ಟಣ್ಣನವರಿಗೆ ನೀಡಿದ್ದರು. ಅಲ್ಲಿಂದ ಜಯಂತ್‌ಗೆ ವರ್ಗಾವಣೆಯಾಗಿತ್ತು. ಅಂತಿಮವಾಗಿ ಚಿನ್ನಯ್ಯ ಅದೇ ಬುರುಡೆಯನ್ನು ಪೊಲೀಸರ ಮುಂದೆ ಹಾಜರು ಪಡಿಸಿ, ಪ್ರಕರಣಕ್ಕೆ ಸ್ಫೋಟಕ ತಿರುವು ದೊರೆಯುವಂತೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡ ಪ್ರದೇಶದಿಂದ ಬುರುಡೆ ತಂದಿದ್ದಾಗಿ ವಿಠಲ್‌ಗೌಡ ಹೇಳಿಕೆ ನೀಡಿದ್ದಾರೆ. ಆತನಿಗೆ ಪಡಂಗಡಿ ನಿವಾಸಿ ಪ್ರದೀಪ್‌ಗೌಡ ಸಹಕಾರ ನೀಡಿದ್ದ ಎಂದು ಹೇಳಲಾಗಿದೆ. ಈ ಇಬ್ಬರೊಂದಿಗೆ ಎಸ್‌ಐಟಿ ಅಧಿಕಾರಿಗಳು ನಿನ್ನೆ ಸ್ಥಳ ಮಹಜರು ನಡೆಸಿದ್ದಾರೆ. ಬಂಗ್ಲೆಗುಡ್ಡದ ಬಯಲಿನಲ್ಲಿ ಬಿದ್ದಿದ್ದ ಬುರುಡೆಯನ್ನು ತಂದಿದ್ದಾಗಿ ವಿಠಲ್‌ಗೌಡ ತಿಳಿಸಿದ್ದು, ಆ ಸ್ಥಳವನ್ನು ಅಗೆದರೆ ಮತ್ತಷ್ಟು ಶವಗಳು ಸಿಗಬಹುದು ಎಂದು ನಂಬಿದ್ದಾಗಿ ಹೇಳಿದ್ದಾರೆ. ಅದರಂತೆ ಚಿನ್ನಯ್ಯಗೆ ಮಾಹಿತಿ ನೀಡಿದ್ದು, ಅದರಂತೆ ಆತ ತಲೆಬುರುಡೆ ಸಿಕ್ಕ ಜಾಗವನ್ನು 11ಎ ಎಂದು ಗುರುತಿಸಿದಾಗಿ ಹೇಳಲಾಗಿದೆ.
ಆರಂಭದಲ್ಲಿ ತಲೆಬುರುಡೆಯನ್ನು ಚಿನ್ನಯ್ಯ ತಂದಿಟ್ಟು, ತಾನು ಧರ್ಮಸ್ಥಳದಲ್ಲಿ ಅತ್ಯಾಚಾರ ಹಾಗೂ ಕೊಲೆಯಾದ ನೂರಾರು ಶವಗಳನ್ನು ಧರ್ಮಸ್ಥಳದ ಸುತ್ತಮುತ್ತ ಹೂತಿಟ್ಟಿದ್ದಾಗಿ ಹೇಳಿದ್ದ. ನ್ಯಾಯಧೀಶರ ಮುಂದೆಯೂ ಹೇಳಿಕೆ ದಾಖಲಿಸಿದ್ದ. ಇದು ಭಾರೀ ಪ್ರಮಾಣದ ಗ್ರಾಸವಾಗಿದ್ದು, ಸರ್ಕಾರ ಎಸ್‌ಐಟಿಯನ್ನು ರಚಿಸಿತ್ತು. ವಿಚಾರಣೆ ನಡೆದ ಬಳಿಕ ಅರೋಪಗಳಲ್ಲಿ ಉರುಳಿಲ್ಲ ಎಂದು ಖಚಿತವಾಗಿದ್ದು, ಈಗ ಷಡ್ಯಂತ್ರ ಮಾಡಿದವರ ಪತ್ತೆಗೆ ಎಸ್‌ಐಟಿ ತೀವ್ರ ಸ್ವರೂಪದ ತನಿಖೆ ನಡೆಸುತ್ತಿದೆ. ತನಿಖೆಯ ಭಾಗವಾಗಿ ತಲೆ ಬುರುಡೆ ಮೂಲದ ಬೆನ್ನು ಹತ್ತಿ, ಬೆಂಗಳೂರಿನ ಜಯಂತ್ ಟಿ. ಅವರ ಮನೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು.
ಸೌಜನ್ಯ ಪ್ರಕರಣದಲ್ಲಿ ಹೋರಾಟ ನಡೆಸುತ್ತಿರುವ ಮಹೇಶ್‌ಶೆಟ್ಟಿ ತಿಮರೋಡಿ ಅವರ ಮನೆಯನ್ನೂ ಸಹ ಶೋಧಿಸಿ ಅವರನ್ನೂ ವಿಚಾರಣೆ ಮಾಡಲಾಗಿದೆ. ಶ್ರೀ ಕ್ಷೇತ್ರದ ಬಗ್ಗೆ ವಿಡಿಯೋ ಮಾಡಿದ ಹಲವಾರು ಯೂಟ್ಯೂಬರ್‌ಗಳನ್ನು ತನಿಖೆಗೊಳಪಡಿಸಲಾಗಿದೆ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಕುರಿತಂತೆ ಎಸ್‌ಐಟಿ ಅಧಿಕಾರಿಗಳು ನಿನ್ನೆ ತಡರಾತ್ರಿವರೆಗೂ ಗಿರೀಶ್‌ಮಟ್ಟಣ್ಣನವರ್, ಜಯಂತ್ ಟಿ., ಅಭಿಷೇಕ್ ಸೇರಿದಂತೆ ಹಲವರನ್ನು ವಿಚಾರಣೆ ನಡೆಸಿದ್ದರು.