ಕುಣಿಗಲ್, ಅ.8– ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳದಿಂದ ನೀರು ಪಾಲಾದ ಆರು ಮಂದಿಯಲ್ಲಿ ಮೂವರ ಶವಗಳು ಪತ್ತೆಯಾಗಿದ್ದು, ಉಳಿದ ಮೂವರಿಗಾಗಿ ಶೋಧಕಾರ್ಯ ಮುಂದುವರೆದಿದೆ.
ಜಲಾಶಯಕ್ಕೆ ದಿಢೀರನೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದು ಜಲಾಶಯದ ಎಡ ಹಾಗೂ ಬಲ ಕೋಡಿ ಹಳ್ಳದಲ್ಲಿ ಆಟವಾಡುತ್ತಿದ್ದ 9 ಜನರ ಪೈಕಿ ಆರು ಮಂದಿ ನೀರಿನಲ್ಲಿ ಕೊಚ್ಚಿಹೋಗಿದ್ದು, ಮೂವರ ಶವ ಪತ್ತೆಯಾಗಿ ಉಳಿದ ನಾಲ್ವರಿಗಾಗಿ ಕಾರ್ಯಾಚರಣೆ ನಡೆಯುತ್ತಿದೆ.
ತಾಲೂಕಿನ ಯಡಿಯೂರು ಹೋಬಳಿ ಮಾಗಡಿಪಾಳ್ಯ ಗ್ರಾಮದ ಸಾಧಿಯಾ (25), ತುಮಕೂರು ಬಿಜಿ ಪಾಳ್ಯದ ಅರ್ಬಿನ್ (20), ತುಮಕೂರಿನ ಬಿಜಿ ಪಾಳ್ಯದ ತಬಸ್ಸಮ್ (46), ಶಬಾನ (44), ಒಂದು ವರ್ಷದ ಮೋಬ್ ನಾಲ್ಕು ವರ್ಷದ ನಿಪ್ರಾ ನೀರಿನಲ್ಲಿ ಕೊಚ್ಚಿಹೊಗಿದ್ದರು. ಈ ಪೈಕಿ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಇಬ್ಬರ ಶವ ಹೊರತೆಗೆದಿದ್ದರು. ಇಂದು ಮತ್ತೊಬ್ಬರ ಶವ ಪತ್ತೆಯಾಗಿದ್ದು, ಉಳಿದ ಮೂವರ ಶವಗಳ ಪತ್ತೆಗಾಗಿ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದೆ.
ಪ್ರವಾಸಿಗರ ಹೆಚ್ಚಳ : ಕಳೆದ ಹಲವು ದಿನಗಳಿಂದ ತುರುವೇಕೆರೆಯ ಮಲ್ಲಾಘಟ್ಟ ಕೆರೆ, ವೀರವೈಷ್ಣವಿ ನದಿ ಸೇರಿದಂತೆ ಹಲವು ಕೆರೆಗಳು ತುಂಬಿ ಮಾರ್ಕೋನಹಳ್ಳಿ ಜಲಾಶಯಕ್ಕೆ 1200 ಕ್ಯೂಸೆಕ್್ಸ ನೀರು ಹರಿದು ಬರುತ್ತಿದ್ದು, ಇದರಿಂದ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿ ಇಷ್ಟೇ ಪ್ರಮಾಣದ ನೀರು ಸೈಪೋನ್ ಹಾಗೂ ಕೋಡಿ ಸೈಪೋನ್ ಮೂಲಕ ಹೊರ ಹರಿಯುತ್ತಿದೆ.ಮನಮೋಹಕ ರಮ್ಯವಾದ ನೋಟವನ್ನು ನೋಡಲು ತಾಲೂಕು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ, ಇಂದು ವಾಲಿಕಿ ಜಯಂತಿ ಸರ್ಕಾರಿ ರಜೆ ದಿನವಾದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದರು,
ಘಟನೆ ವಿವರ :
ರಜೆ ಇದ್ದ ಕಾರಣ ತುಮಕೂರಿನ ಬಿಜಿ ಪಾಳ್ಯದ ತಬಸ್ಸಮ್, ಶಬಾನ ಹಾಗೂ ಆಕೆಯ ಮಕ್ಕಳು ತಮ ಸಂಬಂಧಿಕರಾದ ಕುಣಿಗಲ್ ತಾಲೂಕಿನ ಮಾಗಡಿಪಾಳ್ಯ ಗ್ರಾಮದ ಮೋಸಿನ್ ಹಾಗೂ ಸಾಧಿಯಾ ಅವರ ಮನೆಗೆ ಬಂದು ಅವರ ಮನೆಯಲ್ಲಿ ಉಳಿದುಕೊಂಡು ನಂತರ ಮಾರ್ಕೋನಹಳ್ಳಿ ಜಲಾಶಯ ನೋಡಲೆಂದು ಸುಮಾರು 12 ಮಂದಿ ಒಟ್ಟಾಗಿ ಬಂದಿದ್ದಾರೆ.
ಸಣ್ಣ ಮಗು ಹಾಗೂ ಒಂದು ಅಜ್ಜಿ ನದಿ ದಡದಲ್ಲಿ ಕುಳಿತಿದ್ದರು. ಉಳಿದ ಒಂಭತ್ತು ಮಂದಿ ನೀರಿನಲ್ಲಿ ಆಟವಾಡಲು ಹೋಗಿದ್ದಾರೆ. ಈ ವೇಳೆ ನೀರುನ ಪ್ರಮಾಣ ಕಡಿಮೆ ಹರಿಯುತ್ತಿತ್ತು. ದಿಢೀರನೆ ನೀರಿನ ಪ್ರಮಾಣ ಹೆಚ್ಚಾಗಿ 1200 ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಹರಿದು ಬಂದು, ಇಷ್ಟೇ ಪ್ರಮಾಣದ ನೀರು ಕೋಡಿ ಸೈಪೋನ್ ಮೂಲಕ ಹೊರ ಹರಿದ ಕಾರಣ ಕೋಡಿಹಳ್ಳದಲ್ಲಿ ಆಟವಾಡುತ್ತಿದ್ದ ಒಂಬತ್ತು ಮಂದಿ ಪೈಕಿ ಆರು ಮಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಮೂವರ ಪಾರು: ನೀರಿನಿಂದ ಮೋಸಿನ್ ಈಜಿ ದಡ ಸೇರಿ ಬಳಿಕ ಬಶೀರಾ ಹಾಗೂ ನವಾಜ್ ಅವರನ್ನು ರಕ್ಷಿಸಿದ್ದು ,ಈ ಮೂರು ಮಂದಿ ಪ್ರಾಣಾಪಯದಿಂದ ಪಾರಾಗಿದ್ದಾರೆ.
ಕುಣಿಗಲ್ ಅಗ್ನಿಶಾಮಕ ಸಿಬ್ಬಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋದವರ ಪತ್ತೆಗಾಗಿ ಸುಮಾರು ನಾಲ್ಕು ಗಂಟೆ ಕಾಲ ಸತತವಾಗಿ ತೀವ್ರ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗಿಲ್ಲ. ನೀರಿನ ಹರಿವು ಹೆಚ್ಚಳ ಹಾಗೂ ಕತ್ತಲೆಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಇಂದೂ ಕಾರ್ಯಾಚರಣೆ ಮುಂದುವರೆಸಿ ಮೂವರ ಶವಗಳನ್ನು ಹೊರತೆಗೆದಿದ್ದು, ಉಳಿದವರಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.
ಎಸ್ಪಿ ಭೇಟಿ:
ಘಟನಾ ಸ್ಥಳಕ್ಕೆ ಎಸ್ಪಿ ಕೆ.ಅಶೋಕ್, ಎಎಸ್ಪಿ ಗೋಪಾಲ್, ಪುರುಷೋತ್ತಮ್, ಡಿವೈಎಸ್ಪಿ ಓಂಪ್ರಕಾಶ್, ಸಿಪಿಐಗಳಾದ ಮಾದ್ಯನಾಯಕ್, ನವೀನ್ಗೌಡ ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಮಾಹಿತಿ ಸಂಗ್ರಹಿಸಿದರು.