ಬೆಂಗಳೂರು, ಆ.4- ಕಳೆದ ಕೆಲವು ತಿಂಗಳುಗಳಲ್ಲಿ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಧರ್ಮಸ್ಥಳ ಭಾಗದ ಶಂಕಿತ ಪ್ರಕರಣಗಳ ಕುರಿತ ತನಿಖೆ ಅಂತಿಮ ಹಂತಕ್ಕೆ ತಲುಪಿದ್ದು, ಇಂದು ಮೂರು ಸ್ಥಳಗಳಲ್ಲಿ ಉತ್ಖನನ ಕಾರ್ಯ ನಡೆದಿದೆ. ಈ ನಡುವೆ ಮತ್ತಷ್ಟು ಜಾಗಗಳಲ್ಲಿ ಉತ್ಖನನ ನಡೆಸುವಂತೆ ಅನಾಮಧೇಯ ದೂರುದಾರ ಮನವಿ ಮಾಡಿದ್ದಾರೆ.
ಈವರೆಗಿನ ಕಾರ್ಯಾಚರಣೆಯಲ್ಲಿ ಮಹತ್ವದ ಯಾವ ಸುಳಿವುಗಳು ದೊರೆಯದ ಕಾರಣಕ್ಕೆ ಎಸ್‌ಐಟಿ ಅಧಿಕಾರಿಗಳು ಹೊಸ-ಹೊಸ ವಿಧಾನಗಳನ್ನು ಪರಿಶೀಲಿಸಲಾರಂಭಿಸಿದ್ದಾರೆ. ಜೊತೆಗೆ ಮತ್ತೊಬ್ಬ ವ್ಯಕ್ತಿಯ ದೂರಿನ ಕುರಿತು ವಿಚಾರಣೆ ನಡೆಯಲಿದೆ.
ಅನಾಮಿಕ ದೂರುದಾರ ಎಸ್‌ಐಟಿ ಅಧಿಕಾರಿಗಳಿಗೆ 13 ಸ್ಥಳಗಳನ್ನು ತೋರಿಸಿದ್ದ. ಅದರಲ್ಲಿ ಈವರೆಗೂ 10 ಸ್ಥಳಗಳನ್ನು ಉತ್ಖನನ ಮಾಡಿ ಪರಿಶೀಲಿಸಲಾಗಿದೆ. ಬಾಕಿಯಿರುವ ಮೂರು ಸ್ಥಳಗಳಲ್ಲೂ ಉತ್ಖನನ ನಡೆಸಲಾಗುತ್ತಿದೆ. ಅನಾಮಿಕ ದೂರುದಾರನ ಪರ ವಕಿಲರು ಇಂದು ಪುತ್ತೂರಿನ ಉಪ ವಿಭಾಗಾಧಿಕಾರಿ ಸ್ಟೆಲ್ಲಾವರ್ಗೀಸ್‌ರನ್ನು ಭೇಟಿ ಮಾಡಿ ಇನ್ನಷ್ಟು ಸ್ಥಳಗಳಲ್ಲಿ ಉತ್ಖನ ನಡೆಸುವಂತೆ ಮನವಿ ಮಾಡಿದ್ದಾರೆ.
ಈವರೆಗೂ ಗುರುತಿಸಿರುವ 13 ಸ್ಥಳಗಳ ಜೊತೆಗೆ ಇನ್ನೂ 17 ಸ್ಥಳಗಳನ್ನು ತಾವು ತೋರಿಸಲಿದ್ದು, ಸರಿಸುಮಾರು 30ಕ್ಕೂ ಹೆಚ್ಚು ಸ್ಥಳಗಳನ್ನು ಅಗೆಯುವಂತೆ ದೂರುದಾರನ ಪರವಾಗಿ ವಕೀಲರು ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆದರೆ ಇದನ್ನು ತಿರಸ್ಕರಿಸಿರುವ ಉಪ ವಿಭಾಗಾಧಿಕಾರಿಗಳು ಎಸ್‌ಐಟಿ ಅಧಿಕಾರಿಗಳು ಸಹಮತಿಸಿದರೆ ತಾವು ಉತ್ಖನಕ್ಕೆ ಅನುಮತಿಸುವುದಾಗಿ ತಿಳಿಸಿದ್ದಾರೆ.
ವಿಚಾರಣೆ ನಡೆಸುವುದು ಹಾಗೂ ಅಗತ್ಯ ಕ್ರಮಕೈಗೊಳ್ಳುವುದು ಎಸ್‌ಐಟಿ ಅಧಿಕಾರಿಗಳ ಜವಾಬ್ದಾರಿ. ಸಲಹೆ ಆಧರಿಸಿ ಉತ್ಖನನದ ಬಗ್ಗೆ ನಿರ್ಧರಿಸಲಾಗುತ್ತದೆ. ಏಕಾಏಕಿ ತಾವು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಉಪವಿಭಾಗಾಧಿಕಾರಿ ಸ್ಪಷ್ಟ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಜನರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಆ ಶವಗಳನ್ನು ತಾನೇ ಅಂತ್ಯಸಂಸ್ಕಾರ ಮಾಡಿದ್ದಾಗಿ ಅನಾಮಿಕ ಹೇಳಿಕೊಂಡಿದ್ದ. ಆತನ ಹೇಳಿಕೆಯನ್ನು ಪರಿಶೀಲಿಸಲು ರಾಜ್ಯ ಸರ್ಕಾರ ಡಿಜಿಪಿ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.
ಎಸ್‌ಐಟಿ ಅಧಿಕಾರಿಗಳು ಕಳೆದ 10 ದಿನಗಳಿಂದಲೂ ನಿರಂತರ ಕಾರ್ಯಾಚರಣೆ ನಡೆಸಿ, ಅನಾಮಿಕ ಹೇಳಿದ್ದ ಸ್ಥಳಗಳನ್ನು ಅಗೆದಿದ್ದಾರೆ. ಆದರೆ ಅನಾಮಧೇಯ ಹೇಳಿಕೆಯಂತೆ ಈವರೆಗಿನ 10 ಜಾಗಗಳಲ್ಲಿ ನೂರಾರು ಶವಗಳ ಕುರುಹುಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಬಾಕಿಯಿರುವ ಮೂರು ಸ್ಥಳಗಳನ್ನು ಅಗೆದು, ಉತ್ಖನನ ಕಾರ್ಯಾಚರಣೆಯನ್ನು ನಿಲ್ಲಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ. 11ನೇ ಸ್ಥಳದ ಉತ್ಖನವನ್ನು ಹೆದ್ದಾರಿಯ ಪಕ್ಕದಲ್ಲೇ ನಡೆಸಲಾಗಿದೆ. ಗುರುತಿಸಿದ ಸ್ಥಳಕ್ಕೆ ತೆರಳಲು ಅರ್ಥ್ ಮೂವರ್‌ನ್ನು ಬಳಸಿ ದಾರಿ ಮಾಡಲಾಗಿದೆ. ಈ ಸ್ಥಳದಲ್ಲಿ ಯಾವುದಾದರೂ ಕಳೇಬರಹಗಳು ದೊರೆಯಬಹುದೇ ಎಂಬ ಕುತೂಹಲ ಹೆಚ್ಚಾಗಿದೆ.
ಒಂದು ವೇಳೆ ಯಾವುದೇ ಕುರುಹುಗಳು ಪತ್ತೆಯಾಗದೇ ಇದ್ದರೆ ವೈಜ್ಞಾನಿಕವಾಗಿ ಪ್ರಕರಣದ ತನಿಖೆ ಮುಂದುವರೆಯಲಿದೆ. ಧರ್ಮಸ್ಥಳ ಭಾಗದಲ್ಲಿ ಎಷ್ಟು ಅಪರಿಚಿತ ಶವಗಳನ್ನು ಅಂತ್ಯಸಂಸ್ಕಾರ ಮಾಡಲಾಗಿದೆ ಎಂಬ ವಿವರಗಳನ್ನು ಎಸ್‌ಐಟಿ ಅಧಿಕಾರಿಗಳು ಗ್ರಾಮಪಂಚಾಯಿತಿ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ಪಡೆದುಕೊಂಡಿದ್ದಾರೆ.
ಅವುಗಳಲ್ಲಿ ವಿಳಾಸ ದೊರೆಯದೆ ಇರುವ ಹಾಗೂ ಗುರುತು ಪತ್ತೆಯಾಗದೆ ಉಳಿದ ಶವಗಳ ಅಧ್ಯಯನ ನಡೆಯಲಿದೆ. ಅಪರಿಚಿತ ಶವಗಳಲ್ಲಿ ವಿಶೇಷವಾಗಿ ವಯಸ್ಕ ಹೆಣ್ಣುಮಕ್ಕಳ ಪ್ರಕರಣಗಳನ್ನು ಸಮಗ್ರ ಪರಿಶೀಲನೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಪ್ರತಿ ಪ್ರಕರಣವನ್ನು ಮರು ತನಿಖೆ ನಡೆಸಿ ಮಾಹಿತಿ ಕಲೆ ಹಾಕುವ, ಸಾವಿನ ಸ್ವರೂಪವನ್ನು ಕಂಡು ಹಿಡಿಯುವ, ಹಿನ್ನೆಲೆಯನ್ನು ಪತ್ತೆ ಹಚ್ಚುವ ಪ್ರಯತ್ನಗಳನ್ನು ಎಸ್‌ಐಟಿ ಅಧಿಕಾರಿಗಳು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಅಗತ್ಯವಿರುವ ಪೂರ್ವಾನುಮತಿಯನ್ನು ಪಡೆದುಕೊಳ್ಳಲು ಕಾನೂನು ಸಾಧ್ಯ ಸಾಧ್ಯತೆಗಳ ಪರಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದು ದೂರಿನ ಪರಿಶೀಲನೆ:
ಈ ನಡುವೆ 15 ವರ್ಷಗಳ ಹಿಂದೆ ಅನುಮಾನಸ್ಪದವಾಗಿ ಹೆಣ್ಣು ಮಗಳ ಸಾವಾಗಿತ್ತು. ಕೊಳೆತ ಸ್ಥಿತಿಯಲಿದ್ದ ಶವವನ್ನು ಯಾವುದೇ ಮರಣೋತ್ತರ ಪರೀಕ್ಷೆ ಅಥವಾ ಕಾನೂನು ಪ್ರಕ್ರಿಯೆಗಳನ್ನು ನಡೆಸದೆ ಅಂತ್ಯಸಂಸ್ಕಾರ ಮಾಡಲಾಗಿದೆ. ಇದು ಕೊಲೆಯೋ ಅಥವಾ ಆತಹತ್ಯೆಯೋ ಎಂಬ ಬಗ್ಗೆ ತಮಗೆ ನಿಖರ ಮಾಹಿತಿ ಇಲ್ಲ.
ಆದರೆ ಯುವತಿಯ ಶವಸಂಸ್ಕಾರ ಮಾಡಿದ ಸ್ಥಳದ ಬಗ್ಗೆ ತಿಳುವಳಿಕೆ ಇದ್ದು ಅದನ್ನು ತೋರಿಸುವುದಾಗಿ ಇಂಜಿಲಂಪಾಡಿ ನಿವಾಸಿ ಜಯಂತ್ ಎಂಬುವವರು ಹೇಳಿಕೆ ನೀಡಿದ್ದರು. ತಮ ಹೇಳಿಕೆಯನ್ನು ಲಿಖಿತ ರೂಪದಲ್ಲಿ ನೀಡುವಂತೆ ಎಸ್‌ಐಟಿ ಅಧಿಕಾರಿಗಳು ಸಲಹೆ ನೀಡಿದ್ದರು. ಅದರಂತೆ ವಕೀಲರೊಂದಿಗೆ ಆಗಮಿಸಿದ ಜಯಂತ್ ಲಿಖಿತ ದೂರು ನೀಡಲು ಮುಂದಾಗಿದ್ದಾರೆ. ಆದರೆ ಎಸ್‌ಐಟಿಯ ತನಿಕಾಧಿಕಾರಿಗಳು ಉತ್ಖನನ ಸ್ಥಳಕ್ಕೆ ಭೇಟಿ ನೀಡಿದ್ದರಿಂದ ಮಧ್ಯಾಹ್ನದ ಬಳಿಕ ದೂರು ಸ್ವೀಕರಿಸುವ ಸಾಧ್ಯೆತೆಯಿದೆ.
ಆತನ ಹೇಳಿಕೆಯ ಪರಿಶೀಲನೆ ನಡೆಯಲಿದೆ. ಜಯಂತ್ ಹೇಳಿರುವ ಜಾಗವನ್ನು ಉತ್ಖನನ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಎಸ್‌ಐಟಿ ಅಧಿಕಾರಿಗಳು ಮತ್ತೊಂದು ಸುತ್ತಿನ ವಿಚಾರಣೆ ನಡೆಸುತ್ತಿದ್ದಾರೆ.ಒಟ್ಟಿನಲ್ಲಿ ಧರ್ಮಸ್ಥಳ ಸುತ್ತಮುತ್ತಲಿನ ಭಾಗದಲ್ಲಿ ಅನುಮಾನ ಮೂಡಿಸಿದ್ದ ಪ್ರಕರಣಗಳನ್ನು ಸಮಗ್ರವಾಗಿ ತನಿಖೆಗೊಳಪಡಿಸಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ಎಸ್‌ಐಟಿ ನಿರ್ಧರಿಸಿದೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-08-2025)
- ಮುಂಬೈ ವಿಮಾನ ನಿಲ್ದಾಣದಲ್ಲಿ 14.738 ಕೋಟಿ ಮೌಲ್ಯದ ಗಾಂಜಾ ವಶ
- ಬೆಂಗಳೂರು : ಮಹಿಳೆ ಮುಂದೆ ಅಸಭ್ಯ ವರ್ತಿಸಿದ ಸೆಕ್ಯುರಿಟಿ ಗಾರ್ಡ್
- BREAKING : ನಾಳೆ ಒಂದು ದಿನ ಮುಷ್ಕರ ನಡೆಸದಂತೆ ಸಾರಿಗೆ ನೌಕರಿಗೆ ಹೈಕೋರ್ಟ್ ಸೂಚನೆ, ಇತ್ತ ಸಂಧಾನ ವಿಫಲ
- ಬೆಂಗಳೂರು : ಡೆತ್ನೋಟ್ ಬರೆದಿಟ್ಟು 7ನೇ ತರಗತಿ ವಿದ್ಯಾರ್ಥಿ ಆತಹತ್ಯೆ