ಬೆಂಗಳೂರು, ಜು.6- ಕಳೆದ ಎರಡು ತಿಂಗಳಿನಿಂದ ಸ್ಥಿರತೆ ಕಾಯ್ದುಕೊಂಡಿದ್ದ ತರಕಾರಿ ಬೆಲೆ ಹಂತ ಹಂತವಾಗಿ ಇಳಿಮುಖವಾಗುತ್ತಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಬಿರು ಬೇಸಿಗೆ ಹಾಗೂ ನೀರಿನ ಅಭಾವದಿಂದ ಎಲ್ಲ ತರಕಾರಿಗಳ ಬೆಲೆ ಗಗನಕ್ಕೇರಿದ್ದು ಗ್ರಾಹಕರಿಗೆ ಭಾರೀ ಹೊರೆಯಾಗಿತ್ತು. ಅದರಲ್ಲೂ ಬೀನ್ಸ್ ಡಬ್ಬಲ್ ಸೆಂಚುರಿ ಬಾರಿಸಿತ್ತು. ಕಳೆದ ಐದು ದಿನಗಳಿಂದ ಬೆಲೆಗಳು ಇಳಿಮುಖವಾಗುತ್ತಿವೆ.
ರಾಜ್ಯದ ವಿವಿಧೆಡೆ ಉತ್ತಮವಾಗಿ ಮಳೆಯಾಗುತ್ತಿದ್ದು, ಹೊಸ ಬೆಳೆಗಳು ಮಾರುಕಟ್ಟೆಗೆ ಬರುತ್ತಿದ್ದು, ಬೆಲೆಯಲ್ಲಿ ಇಳಿಮುಖವಾಗುತ್ತಿದೆ. ಜತೆಗೆ ಆಷಾಢ ಕೂಡ ಪ್ರಾರಂಭವಾಗಿದ್ದು, ಈ ಸಮಯದಲ್ಲಿ ಹೆಚ್ಚು ಶುಭ ಸಮಾರಂಭಗಳು ನಡೆಯದ ಹಿನ್ನೆಲೆಯಲ್ಲಿ ತರಕಾರಿಗಳ ಬೇಡಿಕೆ ಕಡಿಮೆಯಾಗಿದ್ದು, ಬೆಲೆ ಇಳಿಕೆಗೆ ಕಾರಣವಾಗಿದೆ ಎನ್ನಬಹುದು.
ಕೆಜಿಗೆ 200ರೂ. ಗಡಿ ದಾಟಿದ್ದ ಬೀನ್ಸ್ ಇದೀಗ 60ರೂ.ಗೆ ಬಂದಿದೆ. ಕ್ಯಾರೆಟ್ 50ರೂ., ಬದನೆಕಾಯಿ 40ರೂ., ಮೂಲಂಗಿ 30ರೂ., ಸೌತೆಕಾಯಿ 20ರೂ., ಟೊಮ್ಯಾಟೋ 50ರೂ., ಆಲೂಗಡ್ಡೆ 40ರೂ., ಬೆಂಡೆಕಾಯಿ 40ರೂ., ತೊಂಡೆಕಾಯಿ 30ರೂ., ಬೀಟ್ರೂಟ್ 40ರೂ., ಹಸಿಮೆಣಸಿನಕಾಯಿ 80ರೂ., ಕೋಸು 40ರೂ.ಗೆ ಇಳಿದಿದೆ.
ಕಳೆದ ಎರಡು ತಿಂಗಳಿನಿಂದ ಎಲ್ಲ ತರಕಾರಿಗಳ ಬೆಲೆ ಗಗನಕ್ಕೇರಿತ್ತು. ಈ ಸಮಯದಲ್ಲಿ ಗ್ರಾಹಕರು ಹಾಗೂ ಚಿಲ್ಲರೆ ವ್ಯಾಪಾರಿಗಳು ಸಂಕಷ್ಟ ಎದುರಾಗಿತ್ತು. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ರಾಮನಗರ, ಬೆಂಗಳೂರು ಗ್ರಾಮಾಂತರ, ಹೊಸಕೋಟೆ, ನೆಲಮಂಗಲ ಸೇರಿದಂತೆ ವಿವಿಧ ಭಾಗಗಳಿಂದ ಬೆಂಗಳೂರಿನ ಮಾರುಕಟ್ಟೆಗಳಿಗೆ ಅಪಾರ ಪ್ರಮಾಣದಲ್ಲಿ ಮಾಲು ಬರುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಲಿದೆ.