Wednesday, July 23, 2025
Homeರಾಜ್ಯರಾಜ್ಯ ಸರ್ಕಾರದ ವಿರುದ್ಧ ಸಣ್ಣ ವರ್ತಕರ ಆಕ್ರೋಶ

ರಾಜ್ಯ ಸರ್ಕಾರದ ವಿರುದ್ಧ ಸಣ್ಣ ವರ್ತಕರ ಆಕ್ರೋಶ

Small traders' anger against the state government

ಬೆಂಗಳೂರು,ಜು.22- ಸಣ್ಣಪುಟ್ಟ ವ್ಯಾಪಾರಿಗಳಿಗೆ ನೀಡಲಾಗಿರುವ ನೋಟೀಸ್‌‍ಗಳ ಪರಿಣಾಮ ಈಗ ಪ್ರತಿಭಟನೆಗೆ ತಿರುಗಿದೆ. ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ವರ್ತಕರು ಹಾಲು ಹಾಗೂ ಅದರ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸುವ ಮೂಲಕ ರಾಜ್ಯಸರ್ಕಾರದ ವಿರುದ್ಧ ತಿರುಗಿಬೀಳಲು ಸಜ್ಜಾಗಿದ್ದಾರೆ.

ಸಣ್ಣಪುಟ್ಟದಾಗಿ ಟೀ ಅಂಗಡಿಗಳು, ಹಾಲು, ಮೊಸರು ಮಾರಾಟದ ಬೂತ್‌ಗಳು, ಹೂ-ಹಣ್ಣು, ತರಕಾರಿಯಂತಹ ವ್ಯಾಪಾರ ಮಾಡುವ ವರ್ತಕರಿಗೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸುವಂತೆ ರಾಜ್ಯಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ ನೋಟೀಸ್‌‍ ಜಾರಿ ಮಾಡಿದೆ. ಇದರ ವಿರುದ್ಧ ಆಕ್ರೋಶಗೊಂಡಿರುವ ವರ್ತಕರು ಹಾಲಿನ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ಎರಡು ದಿನಗಳ ಸಾಂಕೇತಿಕ ಹೋರಾಟ ನಡೆಸಲಾಗುವುದು. ಜು.25 ರಂದು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ತಯಾರಿಗಳಾಗಿವೆ.ಈ ಮೂಲಕ ನೋಟೀಸ್‌‍ಗಳನ್ನು ಹಿಂಪಡೆಯಬೇಕು ಹಾಗೂ ತೆರಿಗೆ ವಸೂಲಿಯ ಪ್ರಯತ್ನವನ್ನು ಕೈಬಿಡಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.

ಜಿಎಸ್‌‍ಟಿ ಗೊಂದಲ :
ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್‌‍ ನೀಡಿರುವುದು ಭಾರೀ ಪ್ರಮಾಣದ ಚರ್ಚೆಗೆ ಗ್ರಾಸವಾಗಿದೆ.ಜೀವನೋಪಾಯಕ್ಕಾಗಿ ಬೀದಿಬದಿ ವ್ಯಾಪಾರ ಮಾಡುವ ಜನರಿಂದಲೂ ತೆರಿಗೆ ವಸೂಲಿ ಮಾಡಲು ಕ್ರಮ ಕೈಗೊಂಡಿರುವುದು ಅಸಮಂಜಸ. ರಾಜ್ಯಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು, ಸಂಪನೂಲ ಕ್ರೋಢೀಕರಣಕ್ಕಾಗಿ ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ಮುಗಿಬಿದ್ದಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ಬಿಜೆಪಿ ಈ ವಿಚಾರವಾಗಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದು, ರಾಜ್ಯಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದೆ. ಇದಕ್ಕೆ ಪ್ರತಿಯಾಗಿ ಆರ್ಥಿಕ ಇಲಾಖೆ ತಾನು ನೋಟೀಸ್‌‍ ನೀಡಿರುವುದನ್ನು ಸಮರ್ಥಿಸಿಕೊಳ್ಳುತ್ತಿದೆ.

ಸರಕು ಮತ್ತು ಸೇವಾ ತೆರಿಗೆ ಕಾಯಿದೆ 2017 ರ ಜುಲೈನಿಂದ ಜಾರಿಗೆ ಬಂದಿದೆ. ಅದರ ಪ್ರಕಾರ ಸೇವಾ ವಲಯದಲ್ಲಿ 20 ಲಕ್ಷ ರೂ. ಮೇಲ್ಪಟ್ಟ ವಹಿವಾಟು, ಸರಕು ವಲಯದಲ್ಲಿ 40 ಲಕ್ಷ ರೂ. ಮೇಲ್ಪಟ್ಟ ವಹಿವಾಟುಗಳಿಗೆ ಜಿಎಸ್‌‍ಟಿ ನೋಂದಣಿ ಕಡ್ಡಾಯ ಮತ್ತು ತೆರಿಗೆ ಪಾವತಿಯೂ ಅನಿವಾರ್ಯ.

ಕೇಂದ್ರ ಸರ್ಕಾರದ ಕಾಯಿದೆಯಲ್ಲಿ ಮೊಸರು ಸೇರಿದಂತೆ ಜೀವನಾವಶ್ಯಕ ವಸ್ತುಗಳ ಮೇಲೆ ತೆರಿಗೆಯನ್ನು ವಿಧಿಸಲಾಗಿದೆ. ಯುಪಿಐ ಆಧಾರಿತ ಡಿಜಿಟಲ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಕೇಂದ್ರಸರ್ಕಾರವೇ ಪ್ರೋತ್ಸಾಹಿಸಿದೆ. ಅದನ್ನು ಅಳವಡಿಸಿಕೊಂಡಿರುವ ವರ್ತಕರ ಎಲ್ಲಾ ಹಣಕಾಸಿನ ವಹಿವಾಟು ಸುಲಭವಾಗಿ ಬ್ಯಾಂಕ್‌ಗಳಲ್ಲಿ ಲಭ್ಯವಿದೆ.

ಇತ್ತೀಚೆಗೆ ಜಿಎಸ್‌‍ಟಿ ಕೌನ್ಸಿಲ್‌ ಪತ್ರ ಬರೆದಿದ್ದು, ತೆರಿಗೆ ವಂಚಿತ ವಹಿವಾಟುಗಳ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಕರ್ನಾಟಕದಲ್ಲಿ ಆರ್ಥಿಕ ವಹಿವಾಟು ಮುಂಚೂಣಿಯಲ್ಲಿದೆ. ಆದರೆ ಅದಕ್ಕೆ ಸಮಾನಾಂತರವಾಗಿ ತೆರಿಗೆ ವಸೂಲಿಯಾಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಜಿಎಸ್‌‍ಟಿ ಕಾಯಿದೆಯನ್ನು ಅನುಷ್ಠಾನ ಮಾಡುವ ನೋಡಲ್‌ ಏಜೆನ್ಸಿ ವಾಣಿಜ್ಯ ತೆರಿಗೆ ಇಲಾಖೆಯಾಗಿದ್ದು, ಕೇಂದ್ರ ಸರ್ಕಾರದ ವಿವಿಧ ಸಂಸ್ಥೆಗಳ ನಿರ್ದೇಶನಗಳನ್ನು ಪಾಲನೆ ಮಾಡಬೇಕಾಗಿದೆ. ಹೀಗಾಗಿ ನೋಟೀಸ್‌‍ ನೀಡುವುದು ಅನಿವಾರ್ಯವಾಗಿತ್ತು ಎಂದು ಸಮರ್ಥಿಸಿಕೊಳ್ಳಲಾಗುತ್ತಿದೆ.

ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟೀಸ್‌‍ ನೀಡಿರುವುದನ್ನು ಅಪರಾಧ ಎಂಬಂತೆ ಬಿಂಬಿಸಲಾಗುತ್ತಿದೆ. ಕೇಂದ್ರ ಸರ್ಕಾರ ಕಾಯಿದೆಗೆ ತಿದ್ದುಪಡಿ ತಂದು ಹಣ್ಣು, ಹೂ, ತರಕಾರಿ, ಹಾಲು, ಮೊಸರು, ಟೀ, ಕಾಫಿ, ಬೀದಿ ಬದಿ ವ್ಯಾಪಾರದ ಆಹಾರ ಪದಾರ್ಥಗಳು ಸೇರಿದಂತೆ ಜೀವನಾವಶ್ಯಕ ವಸ್ತುಗಳ ಮೇಲಿನ ಜಿಎಸ್‌‍ಟಿಯನ್ನು ಕೈಬಿಟ್ಟರೆ ನೋಟಿಸ್‌‍ ನೀಡುವ ಸಂದರ್ಭವೇ ಉದ್ಭವಿಸುವುದಿಲ್ಲ ಎಂದು ರಾಜ್ಯಸರ್ಕಾರದ ಸಚಿವರುಗಳು ವಾದಿಸುತ್ತಿದ್ದಾರೆ.

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ನೋಟೀಸ್‌‍ ನೀಡಲು ಕೇಂದ್ರ ಕಾಯ್ದೆಯೇ ಮೂಲ ಕಾರಣ ಎಂದು ಹೇಳಿಕೆ ನೀಡಿದ್ದರಾದರೂ ಉಳಿದ ಸಚಿವರುಗಳು ಪರಿಸ್ಥಿತಿಯ ಸೂಕ್ಷ್ಮತೆ ಅರಿತು ಸರಿಯಾದ ವಿವರಣೆಗಳನ್ನು ನೀಡುತ್ತಿಲ್ಲ. ಶ್ರೀಸಾಮಾನ್ಯರಿಗೆ ಮಾಹಿತಿ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಸಹಜವಾಗಿಯೇ ಜನಸಾಮಾನ್ಯರಲ್ಲಿ ದಿನೇದಿನೇ ಆಕ್ರೋಶಗಳು ಹೆಚ್ಚುತ್ತಿದ್ದು, ರಾಜ್ಯಸರ್ಕಾರ ತೆರಿಗೆಯ ಹೆಸರಿನಲ್ಲಿ ಕೆಳ ಹಾಗೂ ಮಧ್ಯಮ ವರ್ಗಗಳನ್ನು ಸುಲಿಗೆ ಮಾಡುತ್ತಿದೆ ಎಂಬ ಅಭಿಪ್ರಾಯ ಬಲಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ವಿರೋಧಪಕ್ಷದ ಪ್ರತಿಯೊಬ್ಬ ನಾಯಕರೂ ಸಾಮಾಜಿಕ ಜಾಲತಾಣದಲ್ಲಿ ನೋಟೀಸ್‌‍ ನೀಡಿರುವುದನ್ನೇ ಅಸ್ತ್ರವಾಗಿ ಬಳಸಿಕೊಂಡು ರಾಜ್ಯಸರ್ಕಾರದವರ ವಿರುದ್ಧ ಮುಗಿಬಿದ್ದಿದ್ದಾರೆ.

ಚುನಾವಣೆ ಇಲ್ಲದೇ ಇರುವುದರಿಂದ ಕಾಂಗ್ರೆಸ್‌‍ ಸರ್ಕಾರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನ ಪಾಡಿಗೆ ತಾನಿದೆ. ಆದರೆ ಜನಸಾಮಾನ್ಯರಲ್ಲಿ ರಾಜ್ಯಸರ್ಕಾರದ ವಿರುದ್ಧ ದಿನೇದಿನೇ ಅವ್ಯಕ್ತವಾದ ಆಕ್ರೋಶಗಳು ಮಡುಗಟ್ಟುತ್ತಿವೆ.ಪಂಚಖಾತ್ರಿಗಳ ಲಾಭಕ್ಕಿಂತಲೂ ತೆರಿಗೆ ಹೊರೆಯ ಬಗೆಗಿನ ಆಕ್ರೋಶಗಳೇ ತೀವ್ರವಾಗಿವೆ. ಅದರ ಪರಿಣಾಮ ಜಿಎಸ್‌‍ಟಿ ನೋಟೀಸ್‌‍ ವಿರುದ್ಧ ವರ್ತಕ ಸಮುದಾಯ ಕೆರಳಿದಂತಿದೆ. ಶ್ರೀಸಾಮಾನ್ಯರೂ ಕೂಡ ಅದಕ್ಕೆ ದನಿಗೂಡಿಸುತ್ತಿದ್ದಾರೆ.

RELATED ARTICLES

Latest News