ಮೈಸೂರು,ಡಿ.27- ನನಗೆ ಹಾಗೂ ನಮ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ಸೂಕ್ತ ರಕ್ಷಣೆ ನೀಡಬೇಕೆಂದು ಸಿಎಂ ಹಾಗೂ ಅಧಿಕಾರಿಗಳ ವಿರುದ್ಧ ಮೂಡ ಅಕ್ರಮ ಕುರಿತು ದೂರು ನೀಡಿರುವ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.
ಮೂಡಾದಲ್ಲಿ ಅಕ್ರಮ ನಿವೇಶನ ಪಡೆದ ಬಗ್ಗೆ ಸಿಎಂ ಕುಟುಂಬ ಹಾಗೂ ಅಧಿಕಾರಿಗಳ ವಿರುದ್ಧ ದೂರು ನೀಡಿ ಅದು ಲೋಕಾಯುಕ್ತ ತನಿಖೆ ಹಾಗೂ ನ್ಯಾಯಾಲಯ ವಿಚಾರಣೆ ನಡೆಯುತ್ತಿರುವ ನಡುವೆಯೇ ನನ್ನ ಮೇಲೆ ಇಲ್ಲ ಸಲ್ಲದ ಸುಳ್ಳು ದೂರುಗಳನ್ನು ನೀಡಿ ಪ್ರಕರಣ ದಾಖಲಿಸಿ ನನಗೆ ಜೈಲಿಗೆ ಕಳಿಸುವ ಪ್ರಯತ್ನ ನಡೆದಿದೆ.
ಕೆಲವರು ನನ್ನ ಹಾಗೂ ಕುಟುಂಬಕ್ಕೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಈಗಾಗಲೇ ಮೈಸೂರು ನಗರ ಪೊಲೀಸ ಆಯುಕ್ತರಿಗೆ ಗಮನಕ್ಕೆ ತಂದು ಗನ್ ಮ್ಯಾನ್ ಒದಗಿಸುವಂತೆ ಮಾಡಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ.
ಇದರ ನಡುವೆ ರಾಜ್ಯದ ಪ್ರತಿ ಪಕ್ಷ ಬಿಜೆಪಿ ಸೇರಿದಂತೆ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಪೊಲೀಸ್ ಮಹಾ ನಿದೇರ್ಶಕರಿಗೆ ನನಗೆ ಭದ್ರತೆ ನೀಡುವಂತೆ ಕೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.