ಬೆಂಗಳೂರು, ಸೆ.26– ಧರ್ಮಸ್ಥಳದಲ್ಲಿನ ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಸಿಬಿಐಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ಅಂಚೆ ಮೂಲಕ ದೂರು ರವಾನಿಸಿರುವ ಅವರು, 7 ದಿನಗಳ ಒಳಗಾಗಿ ತಮ ಪತ್ರಕ್ಕೆ ಪ್ರತಿಕ್ರಿಯಿಸಬೇಕು. ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಈವರೆಗೂ ನಾನು ಅನೇಕ ಪ್ರಕರಣಗಳಲ್ಲಿ ತನಿಖೆಯ ಲೋಪಗಳ ಬಗ್ಗೆ ನ್ಯಾಯಾಲಯಗಳ ಅನುಮತಿ ಪಡೆದು, ಹಿರಿಯ ಅಧಿಕಾರಿಗಳ ಅವಗಾಹನೆಗೆ ತಂದಿದ್ದೇನೆ. ಅದರದ ಆಧಾರದ ಮೇಲೆ ಕೆಲವು ಪ್ರಕರಣಗಳು ತನಿಖೆಯಾಗಿದ್ದು ಸಂತ್ರಸ್ಥರಿಗೆ ನ್ಯಾಯ ಸಿಕ್ಕಿದೆ. ನೈಜ ಅಪರಾಧಿಗಳ ಬಂಧನವಾಗಿದೆ ಎಂದು ಸ್ನೇಹಮಯಿ ಕೃಷ್ಣ ವಿವರಿಸಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ಆಕೆಯ ಮಾವ ವಿಠಲಗೌಡನೇ ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಸಾಧ್ಯತೆಗಳಿವೆ. ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋಗಳು ಹಾಗೂ ಲಭ್ಯ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಬಳಿಕ ತಮಗೆ ಈ ಅಭಿಪ್ರಾಯ ಬಂದಿದೆ ಎಂದಿದ್ದಾರೆ.
ಸೌಜನ್ಯ ಪ್ರಕರಣದ ತನಿಖೆ ನಡೆಸಿದ ಆಗಿನ ತನಿಖಾಧಿಕಾರಿ ಭಾಸ್ಕರ್ ರೈ ಬಂಧಿತ ಆರೋಪಿ ಸಂತೋಷ್‌ರಾವ್‌ನಿಂದ ಹೇಳಿಕೆ ಪಡೆದಿರುವುದನ್ನು ಗಮನಿಸುವುದಾದರೆ, ಸೌಜನ್ಯ ಶವ ಸಿಗುವ ಮುನ್ನವೇ ಸಂತೋಷ್‌ರಾವ್ ನನ್ನು ಬಂಧಿಸಲಾಗಿತ್ತು ಎಂದು ಕಂಡು ಬಂದಿದೆ.
ಒಂದು ಕೊಲೆ ಪ್ರಕರಣವನ್ನು ಸಮರ್ಥವಾಗಿ ತನಿಖೆ ನಡೆಸಲು ಬೇಕಾದ ಪರಿಣಿತಿ, ತರಬೇತಿ ಸ್ಥಳೀಯ ಪೊಲೀಸರಿಗೆ, ಸಿಐಡಿ ಹಾಗೂ ಸಿಬಿಐ ಅಧಿಕಾರಿಗಳಿಲ್ಲವೇ ಎಂದು ಸ್ನೇಹಮಹಿ ಕೃಷ್ಣ ಪ್ರಶ್ನಿಸಿದ್ದಾರೆ.
ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಧರ್ಮಸ್ಥಳದ ಗೌರವವನ್ನು ಹಾಗೂ ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡಲಾಗುತ್ತಿದೆ. ನನಗೆ ಲಭ್ಯವಾದ ಸಾಕ್ಷ್ಯಾಧಾರಗಳನ್ನು ಆಧರಿಸಿ ದಕ್ಷಣ ಕನ್ನಡ ಜಿಲ್ಲೆಯ ಎಸ್‌ಪಿ ಅವರಿಗೆ ಸೆ.8 ರಂದು ದೂರು ಅರ್ಜಿ ನೀಡಿದ್ದೆ. ಅದಕ್ಕೆ ಹಿಂಬರಹ ನೀಡಿರುವ ಎಸ್‌ಪಿ ಅವರು ಈ ಪ್ರಕರಣದ ತನಿಖೆಯನ್ನು ಈಗಾಗಲೇ ಸಿಬಿಐಗೆ ವರ್ಗಾಹಿಸಲಾಗಿದ್ದು, ಕಡತವು ಸಿಬಿಐ ಕಚೇರಿಯಲ್ಲಿಯೇ ಇದೆ. ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಆರೋಪಿಯು ಖುಲಾಸೆಯಾಗಿದೆ. ಮರು ತನಿಖೆಯ ಬಗ್ಗೆ ನ್ಯಾಯಾಲಯದಲ್ಲೇ ವ್ಯವಹರಿಸಬೇಕೆಂದು ತಿಳಿಸಿದ್ದಾರೆ.
ತಮ ದೂರು ಅರ್ಜಿಯನ್ನು ಪರಿಗಣಿಸಿ ಪ್ರಕರಣವನ್ನು ಮರು ತನಿಖೆಗೊಳಪಡಿಸಬೇಕು. ತಪ್ಪಿತಸ್ಥರಿಗೆ ನ್ಯಾಯ ಕೊಡಿಸಬೇಕು ಎಂದು ಸ್ನೇಹಮಹಿ ಕೃಷ್ಣ ಸಿಬಿಐಗೆ ಮನವಿ ಮಾಡಿದ್ದಾರೆ.