ಬೆಂಗಳೂರು, ಸೆ.12- ಬಹು ಚರ್ಚಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಇದೇ ತಿಂಗಳ 22ರಿಂದ ಅ.7ರವರೆಗೆ ಕೈಗೊಳ್ಳಲಾಗುತ್ತಿದ್ದು, ಪ್ರತಿಯೊಬ್ಬರೂ ತಪ್ಪದೇ ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನವಿ ಮಾಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ಎಂದೇ ಪರಿಗಣಿಸಲಾಗುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಸಮಗ್ರ ಮಾಹಿತಿ ನೀಡಿದರು.
ರಾಜ್ಯದಲ್ಲಿ 2 ಕೋಟಿ ಮನೆಗಳಿದ್ದು, 7 ಕೋಟಿ ಜನಸಂಖ್ಯೆ ಇದೆ. ಎಲ್ಲಾ ಮನೆಗಳ ಸಮೀಕ್ಷೆ ನಡೆಸಲು, ದಸರಾ ರಜೆಯ ಸಂದರ್ಭದಲ್ಲಿ 1.75 ಲಕ್ಷ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರತಿ ಶಿಕ್ಷಕರಿಗೆ 120 ರಿಂದ 150 ಮನೆಗಳ ಸಮೀಕ್ಷೆಯ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದರು.
ಶಿಕ್ಷಕರು, ಆಶಾ ಕಾರ್ಯಕರ್ತರ ಗೌರವ ಧನಕ್ಕಾಗಿಯೇ 375 ಕೋಟಿ ರೂ. ವೆಚ್ಚವಾಗಲಿದ್ದು, ಮೊದಲ ಹಂತದಲ್ಲಿ ರಾಜ್ಯ ಸರ್ಕಾರ 420 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಅಗತ್ಯವಾದರೆ ಮತ್ತಷ್ಟು ಅನುದಾನ ಒದಗಿಸಲಾಗುವುದು ಎಂದರು.
ಈ ಹಿಂದೆ ಕಾಂತರಾಜು ಆಯೋಗ ನಡೆಸಿದ್ದ 15 ದಿನಗಳ ಸಮೀಕ್ಷೆಗೆ 165 ಕೋಟಿ ರೂ. ಖರ್ಚಾಗಿತ್ತು. ಆ ವರದಿಗೆ 10 ವರ್ಷ ವಾಗಿದ್ದರಿಂದಾಗಿ ಅವಧಿ ಮೀರಿದೆ ಎಂದು ತಿರಸ್ಕರಿಸಲಾಗಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಪ್ರಸ್ತುತವಾಗಿ ನಡೆಸಲಾಗುತ್ತಿರುವ ಮರು ಸಮೀಕ್ಷೆಗೆ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗಿದೆ. ಡಿಸೆಂಬರ್ ವೇಳೆಗೆ ಸಮೀಕ್ಷಾ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.
ಪ್ರತಿ ಮನೆಗೂ ವಿದ್ಯುತ್ ಸಂಪರ್ಕದ ಜೊತೆ ಆರ್‌ಆರ್ ಸಂಖ್ಯೆಯನ್ನು ನೀಡಲಾಗಿರುತ್ತದೆ. ಜಿಯೋ ಟ್ಯಾಗ್ ಮಾಡಿ ಸಿದ್ದಪಡಿಸಲಾದ ಯೂನಿಕ್ ಹೌಸ್‌ವೊಲ್‌್ಡ ಐಡೆಂಟಿಟಿ (ಯುಎಚ್‌ಐಡಿ) ಪಟ್ಟಿಗಳನ್ನು (ಸ್ಟಿಕ್ಕರ್) ಮೀಟರ್ ರೀಡರ್‌ಗಳು ಆರ್‌ಆರ್ ಸಂಖ್ಯೆ ಆಧಾರಿತವಾಗಿ ಪ್ರತಿ ಮನೆಗೆ ಅಂಟಿಸಿರುತ್ತಾರೆ. ಆ ನಂತರ ಸಮೀಕ್ಷಾದಾರರು ಹೋಗುವ ಮೂರು ದಿನಗಳ ಮುಂಚಿತವಾಗಿ ಆಶಾ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ, ಸಮೀಕ್ಷೆಯ ವೇಳೆ ಭರ್ತಿ ಮಾಡಿಕೊಳ್ಳುವ ಪ್ರಶ್ನಾವಳಿಗಳ ನಮೂನೆಯನ್ನು ನೀಡಿರುತ್ತಾರೆ.
ವಿದ್ಯಾವಂತರೂ ಆ ನಮೂನೆಗಳನ್ನು ಓದಿಕೊಂಡು ಸಮೀಕ್ಷದಾರರಿಗೆ ಉತ್ತರ ನೀಡಲು ಸಿದ್ಧವಾಗಲು ಇದರಿಂದ ಅನುಕೂಲವಾಗುತ್ತದೆ. ಸಮೀಕ್ಷೆಯಿಂದ ಯಾರೂ ತಪ್ಪಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಈ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದರು.ಹಿಂದೆ ಕಾಂತರಾಜ್ ಆಯೋಗ 54 ಪ್ರಶ್ನೆಗಳನ್ನು ಕೇಳಿತ್ತು. ಪ್ರಸ್ತುತ ಸಮೀಕ್ಷೆಯಲ್ಲಿ 60 ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಎಂದು ವಿವರಿಸಿದರು.
ಸಮೀಕ್ಷೆಯಲ್ಲಿ ಜಾತಿಯನ್ನು ನಮೂದಿಸಲು ಮುಜುಗರ ಪಟ್ಟುಕೊಳ್ಳುವವರಿಗೆ ಪರ್ಯಾಯ ಮಾರ್ಗಗಳಿವೆ. ಆಯೋಗದ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಬಹುದು ಅಥವಾ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಸ್ಥಾಪಿಸಲಾಗಿರುವ ಸಹಾಯವಾಣಿ ಸಂಖ್ಯೆ 8050770004ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದರು.
ಮತಾಂತರಗೊಂಡಿರುವವರು ತಾವು ಅನುಸರಿಸುತ್ತಿರುವ ಧರ್ಮವನ್ನು ನಮೂದಿಸಬೇಕು. ಸಮೀಕ್ಷೆಯಲ್ಲಿ ಪ್ರಸ್ತುತ ಪಾಲಿಸುತ್ತಿರುವ ಧರ್ಮವನ್ನು ಮಾತ್ರ ಪರಿಗಣಿಸಲಾಗುತ್ತದೆ. ಜಾತಿ ಹೇಳಲು ಹಿಂಜರಿಯುವವರಿಗೆ ಸಮಾಧಾನದಿಂದ ತಿಳುವಳಿಕೆ ಹೇಳಿ ಮಾಹಿತಿ ಪಡೆದುಕೊಳ್ಳಲು ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಲಾಗುತ್ತದೆ.
ಪ್ರತಿಯೊಂದು ಮನೆಯ ಆಧಾರ್ ಕಾರ್ಡ್, ಪಡಿತರ ಚೀಟಿಯನ್ನು ಮೊಬೈಲ್ ನಂಬರ್ ಜೊತೆ ಜೋಡಣೆ ಮಾಡಲಾಗುತ್ತದೆ. ಮೊಬೈಲ್ ನಂಬರ್ ಇಲ್ಲದೇ ಹೋದರೆ ಬೇರೆ ರೀತಿಯ ಕ್ರಮಗಳನ್ನು ಅನುಸರಿಸಲಾಗುವುದು. ಒಂದು ವೇಳೆ ಯುಎಚ್‌ಐಡಿ ನಂಬರ್ ಇಲ್ಲದೇ ಇದ್ದರೂ ಅಂತಹ ಮನೆಯನ್ನು ಗುರುತಿಸಿ ಸಮೀಕ್ಷೆ ನಡೆಸಲು ಶಿಕ್ಷಕರಿಗೆ ಅವಕಾಶವಿದೆ. ಅದಕ್ಕಾಗಿ ಹೆಚ್ಚುವರಿ 100 ರೂ. ಗೌರವ ಧನ ನೀಡಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರವೂ ಜನಗಣತಿಯ ಜೊತೆ ಜಾತಿಗಣತಿ ನಡೆಸಲು ನಿರ್ಧರಿಸಿದೆ. ಒಂದು ವೇಳೆ ಜಾತಿ ಹೇಳಲು ಈಗ ಹಿಂದೇಟು ಹಾಕಿದರೆ ಕೇಂದ್ರ ಸರ್ಕಾರ ಸಮೀಕ್ಷೆ ನಡೆಸಿದಾಗಲಾದರೂ ಹೇಳಬೇಕಾಗುತ್ತದೆ. ಕೇಂದ್ರ ಸರ್ಕಾರ ಜನಗಣತಿ ನಡೆಸುತ್ತದೆಯೇ ಹೊರತು ಸಾಮಾಜಿಕ ಶೈಕ್ಷಣಿಕ ಮಾಹಿತಿಗಳನ್ನು ಕಲೆ ಹಾಕುವುದಿಲ್ಲ. ಅಸಮಾನತೆಯನ್ನು ನಿವಾರಣೆ ಮಾಡಲು ಹಾಗೂ ಸಾಮಾಜಿ ನ್ಯಾಯ ಕಾಪಾಡಲು ಈ ಸಮೀಕ್ಷೆ ಅಗತ್ಯ ಇದೆ ಎಂದು ಮುಖ್ಯಮಂತ್ರಿ ಸಮರ್ಥಿಸಿಕೊಂಡರು.
ಲಿಂಗಾಯಿತರು, ವೀರಶೈವರು ಯಾವ ಧರ್ಮ ಎಂದು ಬರೆಸಬಹುದು. ನಾವು ಸಾಮಾಜಿಕ, ಶೈಕ್ಷಣಿಕ ಮಾಹಿತಿಯನ್ನು ಸಂಗ್ರಹಿಸಲು ಸಮೀಕ್ಷೆ ನಡೆಸುತ್ತಿದ್ದೇವೆ. ಧರ್ಮವನ್ನು ನಿರ್ಧರಿಸಲು ಅಲ್ಲ, 78 ವರ್ಷವಾದರೂ ಅಸಮಾನತೆಯಿದೆ. ಅಂಬೇಡ್ಕರ್ ಅವರ ಆಶಯದಂತೆ ಸ್ವಾತಂತ್ರ್ಯ, ಸಮಾನತೆ, ಭಾತೃತ್ವವನ್ನು ಅನುಷ್ಠಾನಕ್ಕೆ ತರಲು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು. ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಶಿವರಾಜ್ ತಂಗಡಗಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಮಧುಸೂದನ್, ಆಯೋಗದ ಅಧಿಕಾರಿಗಳು ಪತ್ರಿಕಾಗೊಷ್ಠಿಯಲ್ಲಿದ್ದರು.
ಇದೇ ವೇಳೆ ಶಿಕ್ಷಕರ ತರಬೇತಿಯ ಚಾಟ್‌ಬೂತ್‌ನ್ನು ಮುಖ್ಯಮಂತ್ರಿ ಅನಾವರಣಗೊಳಿಸಿದರು.