Tuesday, September 17, 2024
Homeರಾಜ್ಯಪಕ್ಷಬೇಧ ಮರೆತು ಸಮಾಜ ಕಲ್ಯಾಣ ಇಲಾಖೆಯ ವಿರುದ್ಧ ಆಕ್ರೋಶ

ಪಕ್ಷಬೇಧ ಮರೆತು ಸಮಾಜ ಕಲ್ಯಾಣ ಇಲಾಖೆಯ ವಿರುದ್ಧ ಆಕ್ರೋಶ

ಬೆಂಗಳೂರು, ಜು.24- ಸಮಾಜ‌ ಕಲ್ಯಾಣ ಇಲಾಖೆಯ ರೈಸ್ ಸಂಸ್ಥೆಯಿಂದ ನಡೆಯುತ್ತಿರುವ ವಸತಿ ಶಾಲೆಗಳಲ್ಲಿನ ಶಿಕ್ಷಣ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ಸಾಕಷ್ಟು ಲೋಪಗಳಾಗಿವೆ ಎಂದು ಆಡಳಿತ ಪಕ್ಷವು ಸೇರಿದಂತೆ ಎಲ್ಲಾ ಶಾಸಕರು ಪಕ್ಷಬೇಧ ಮರೆತು ಸಮಾಜ ಕಲ್ಯಾಣ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಶಾಸಕಿ ರೂಪಕಲಾ, ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ವಸತಿ ಶಾಲೆಗಳ ಲೋಪಗಳನ್ನು ವಿವರಿಸಿದರು. ಸಿಬ್ಬಂದಿಗಳ ಕೊರತೆ, ಶೈಕ್ಷಣಿಕ ವಾತಾವರಣ, ಸುರಕ್ಷತೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ ಎಂದು ಸದನದ ಗಮನಕ್ಕೆ ತಂದರು. ಬೇಡಿಕೆಗೆ ಅನುಸಾರವಾಗಿ ವಸತಿ ಶಾಲೆಗಳಲ್ಲಿ ಪ್ರವೇಶಕ್ಕೆ ಅವಕಾಶ ಇಲ್ಲ ಎಂಬ ವಿಚಾರವನ್ನು ವಿವರಿಸಿದರು. ಕ್ರೈಸ್ ಸಂಸ್ಥೆಯ ಶಾಲೆಗಳಿಗೆ ಮುರಾರ್ಜಿ ವಸತಿ ಶಾಲೆಯ ನಿರ್ವಹಣೆಗೆ ನೀಡುವಷ್ಟೇ ಅನುದಾನ ನೀಡಲಾಗುತ್ತಿದೆ. ಆದರೂ ಗುಣಮಟ್ಟದಲ್ಲಿ ಸಮಾಜ ಕಲ್ಯಾಣ ಶಾಲೆಗಳು ಕಳಪೆಯಾಗಿವೆ ಎಂದು ಆರೋಪಿಸಿದರು. ಇಲಾಖೆಯ ಉಪನಿರ್ದೇಶಕರೆ ಗುತ್ತಿಗೆದಾರರಾಗಿದ್ದಾರೆ. ಸಮುದಾಯ ಭವನಗಳ ನಿರ್ಮಾಣಕ್ಕೆ ವರ್ಷಕ್ಕೆ 1,300 ಕೋಟಿ ಖರ್ಚು ಮಾಡಲಾಗುತ್ತಿದೆ. ಶೋಷಿತರ ಶಿಕ್ಷಣ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುವುದನ್ನು ಸರ್ಕಾರ ರೂಢಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರ ಪರವಾಗಿ ಉತ್ತರ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಇತ್ತೀಚಿಗೆ ನಡೆದ ಎಸ್‌ಸಿಪಿ ಮತ್ತು ಟಿಎಸ್ ಪಿ ಪರಿಷತ್ ಸಭೆಯಲ್ಲಿ ಕ್ರೈಸ್ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಅನುದಾನ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳನ್ನು ಹಾಸ್ಟೆಲ್ ಗಳಿಗೆ ಭೇಟಿ ನೀಡಲು ಸೂಚಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಆರೋಗ್ಯ ವಿಚಾರದಲ್ಲಿ ರಾಜಿ ಇಲ್ಲ ಎಂದು ಹೇಳಿದರು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ 68 ಭಾರತ ರತ್ನ ಡಾ. ಬಿಆರ್ ಅಂಬೇಡ್ಕರ್ ಸರ್ಕಾರಿ ವಸತಿ ಶಾಲೆಗಳನ್ನು ನಿರ್ವಹಿಸಲಾಗುತ್ತಿದೆ, ಇಲ್ಲಿ ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದ್ದು, ಒಟ್ಟು 8500 ವಿದ್ಯಾರ್ಥಿಗಳ ಪ್ರವೇಶಕ್ಕೆ ಮಂಜೂರಾತಿ‌ ಇದೆ.

ವಾರ್ಷಿಕ ಸರಾಸರಿ ಆರು ಸಾವಿರದಿಂದ 6,500 ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಪ್ರಸಕ್ತ ವರ್ಷ 6059 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ 821 ವಸತಿ ಶಾಲೆಗಳು ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ವಾರ್ಷಿಕವಾಗಿ 2,11,920 ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆರರಿಂದ 12ನೇ ತರಗತಿಯವರೆಗೂ 1,91,448 ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿ ವರ್ಷ 40,555 ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ ಎಂದು ವಿವರಿಸಿದರು.

ಚರ್ಚೆಯಲ್ಲಿ ಭಾಗವಹಿಸಿದ್ದ ಶಾಸಕ ಸುರೇಶ್ ಕುಮಾರ್, ಹಿರಿಯೂರಿನ ವಸತಿ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿ ಹಾಗೂ ಹಾವೇರಿ ಜಿಲ್ಲೆಯ ಮುರಾರ್ಜಿ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳಿಗೆ ಮನೆಯ ವಾತಾವರಣ ಇಲ್ಲದೆ ಖಿನ್ನತೆ ಕಾಡುತ್ತಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಬಂಗಾರಪೇಟೆ ಕ್ಷೇತ್ರದ ನಾರಾಯಣಸ್ವಾಮಿ ಸರ್ಕಾರ ಶಿಕ್ಷಣದ ಉದ್ದೇಶಕ್ಕಾಗಿ ಕ್ರೈಸ್ ಶಾಲೆಗಳನ್ನು ಆರಂಭಿಸಿತ್ತು. ಆದರೆ ಈಗ ಅಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ಗುತ್ತಿಗೆದಾರರದೇ ಆಡಳಿತವಾಗುದೆ ಎಂದು ಆರೋಪಿಸಿದರು.

ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕಮಿಟಿ ಹೆಸರಿನಲ್ಲಿ ಗುತ್ತಿಗೆ ವ್ಯವಹಾರಗಳೇ ವ್ಯಾಪಕವಾಗಿವೆ. ಕ್ರೈಸ್ ಶಾಲೆಗಳಲ್ಲಿ 20% ರಷ್ಟು ಖಾಯಂ ಶಿಕ್ಷಕರಿದ್ದರೆ, ಶೇಕಡ 80 ರಷ್ಟು ಹೊರಗುತ್ತಿಗೆಯ ಬೋಧಕ ಸಿಬ್ಬಂದಿ ಇದ್ದಾರೆ. ಹೆಣ್ಣು ಮಕ್ಕಳ ಹಾಸ್ಟೆಲ್ ಗಳಿಗೆ ಮಹಿಳೆಯರನ್ನೇ ವಾರ್ಡನ್ ಗಳನ್ನಾಗಿ ನೇಮಿಸಬೇಕು. ಒಟ್ಟಾರೆ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುವಲ್ಲಿ ಸಮಾಜ ಕಲ್ಯಾಣ ಇಲಾಖೆ ವೈಪಲ್ಯ ಕಂಡಿದೆ ಎಂದು ಗಂಭೀರ ಆರೋಪ ಮಾಡಿದರು.

ಸಕಲೇಶಪುರದ ಸಿಮೆಂಟ್ ಮಂಜು, ಕಂಪ್ಲಿ ಕ್ಷೇತ್ರದ ಗಣೇಶ್ ಮತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು. ಸಚಿವ ಸಚಿವ ಪ್ರಿಯಾಂಕ ಖರ್ಗೆ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಆರೋಗ್ಯ ಹಾಗೂ ಶಿಕ್ಷಣ ಗುಣಮಟ್ಟದ ಅಭಿವೃದ್ಧಿಗೆ ರೋಟರಿ ಸಂಸ್ಥೆಯೊಂದಿಗೆ ಕೌನ್ಸಿಲಿಂಗ್ ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸಲು ಪ್ರಸ್ತಾವನೆ ಇದೆ. ಮುಂದಿನ ಎರಡು ತಿಂಗಳಲ್ಲಿ ಸಚಿವ ಸಂಪುಟದ ಅನುಮೋದನೆ ಪಡೆದು ಇದನ್ನು ಜಾರಿಗೆ ತರಲಾಗುವುದು. ಇಂಟರ್ನೆಟ್ ಹಾಗೂ ಇತರ ಅತ್ಯಾಧುನಿಕ ಸೌಲಭ್ಯಗಳಿಗಾಗಿ ಆತ್ಮಹತ್ಯೆಯ ಪ್ರಚೋದನೆಗಳಿಗೆ ಅವಕಾಶ ಹೆಚ್ಚಾಗುತ್ತಿವೆ. ಈ ಹಿಂದೆ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ರೇಣುಕಾ ಚಿದಂಬರಂ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಪ್ರವೇಶ, ವಸತಿ ಶಾಲೆಗಳ ನಿರ್ವಹಣೆ, ಸುರಕ್ಷತೆಯ ಬಗ್ಗೆ ಪ್ರಮಾಣಿಕೃತ ವ್ಯವಸ್ಥೆ ಜಾರಿಗೊಳಿಸಲು ವೈಜ್ಞಾನಿಕ ವರದಿ ಪಡೆಯಲಾಗಿತ್ತು.

ಹಿಂದಿನ ಸರ್ಕಾರ ಅದನ್ನು ಜಾರಿಗೊಳಿಸಲಿಲ್ಲ. ಹಾಸ್ಟೆಲ್ ಗಳಲ್ಲಿ 1:7 ಅಥವಾ 1:9 ಅನುಪಾತದಲ್ಲಿ ಶೌಚಾಲಯ ಇರಬೇಕು. ಕೆಲವು ಕಡೆ 1: 21 ಅನುಪಾತದಲ್ಲಿ ಶೌಚಾಲಯಗಳಿವೆ. ಸಮುದಾಯ ಭವನಗಳಿಗೆ ಸರ್ಕಾರ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಹಿಂದೆ ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ 14,000 ಸಮುದಾಯ ಭವನಗಳ ಮಂಜುರಾತಿಯನ್ನು ರದ್ದು ಮಾಡಿದ್ದೆ. ಈಗಲೂ ಭವನಗಳ ನಿರ್ಮಾಣಕ್ಕಾಗಿ 600 ಕೋಟಿ ಬಾಕಿ ಅಗತ್ಯ ಇದೆ.

ಈ ಸದನಕ್ಕೆ ಧೈರ್ಯವಿದ್ದರೆ ಎಲ್ಲಾ ಶಾಸಕರು ಒಟ್ಟಾಗಿ ಸಮುದಾಯ ಭವನಗಳ ನಿರ್ಮಾಣವನ್ನು ತಿರಸ್ಕರಿಸಿದರೆ ಅಷ್ಟು ಹಣವನ್ನು ವಸತಿ ಶಾಲೆಗಳ ಸುಧಾರಣೆಗೆ ಬಳಕೆ ಮಾಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು. ಅಷ್ಟರಲ್ಲಿ ಸದನಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ, ವಸತಿ ಶಾಲೆಗಳ ಸುಧಾರಣೆಗೆ ಕ್ರಮ ಕೈಗೊಳ್ಳುತ್ತದೆ. ಈ ಬಜೆಟ್ ನಲ್ಲಿ 20 ವಸತಿ ಶಾಲೆಗಳನ್ನು ಮಂಜೂರು ಮಾಡಲಾಗಿದೆ. 60 ಹೋಬಳಿಗಳಲ್ಲಿ ವಸತಿ ಶಾಲೆಗಳಿಲ್ಲ ಇವುಗಳಿಗೆ ಹಂತ ಹಂತವಾಗಿ ಮಂಜೂರು ಮಾಡುವುದಾಗಿ ಹೇಳಿದರು.

ಸದ್ಯಕ್ಕೆ ತಮ್ಮ ಕ್ಷೇತ್ರದಲ್ಲಿ ಒಂದು ಸಾವಿರ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದಾರೆ ಅವರ ಪಾಡೇನು ಎಂದು ಶಾಸಕ ಕಂಪ್ಲಿ ಗಣೇಶ್ ಪ್ರಸ್ತಾಪಿಸಿ, ಸರ್ಕಾರದ ನಿಖರ ಉತ್ತರಕ್ಕೆ ಪಟ್ಟು ಹಿಡಿದಾಗ ಗಲಿಬಿಲಿಯ ವಾತಾವರಣ ನಿರ್ಮಾಣವಾಯಿತು.

RELATED ARTICLES

Latest News