ಬೆಂಗಳೂರು,ಆ.23- ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಇಂದಿನಿಂದ ಪ್ರಾರಂಭಿಸಿದೆ. ಎಲ್ಲಾ ಮನೆಗಳನ್ನು ಜಿಯೋ ಟ್ಯಾಗಿಂಗ್ ಮಾಡುವ ಕಾರ್ಯವನ್ನು ವಿದ್ಯತ್ ಮೀಟರ್ ರೀಡರ್‌ಗಳು ಇಂದಿನಿಂದ ಪ್ರಾರಂಭಿಸಿದ್ದಾರೆ. ಯಾವುದೇ ಮನೆಗಳು ಜಿಯೋ ಟ್ಯಾಗಿಂಗ್ ಕಾರ್ಯದಿಂದ ತಪ್ಪಿ ಹೋಗದಂತೆ ಯಶಸ್ವಿಯಾಗಿ ಸಮೀಕ್ಷೆ ಕೈಗೊಳ್ಳಲು ರಾಜ್ಯದ ಜನತೆ ಸಹಕರಿಸಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್.ಆರ್.ನಾಯ್ಕ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕಿದೆ. ಮೊದಲ ಹಂತದಲ್ಲಿ ಸಮೀಕ್ಷೆಗೆ ಸಂಬಂಧಿಸಿದ ಪೂರ್ವಭಾವಿ ಕೆಲಸಗಳಾಗಿರುವ ಮನೆ ಪಟ್ಟಿ ಮತ್ತು ಅವುಗಳ ನಕ್ಷೆ ಸಿದ್ಧಪಡಿಸಲಾಗುತ್ತದೆ. ಎಲ್ಲಾ ಮನೆಗಳ ಸಂಪೂರ್ಣ ಎಣಿಕೆ, ಅನುಕ್ರಮ ಸಂಖ್ಯೆಗಳನ್ನು ನೀಡುವುದು ಮತ್ತು ಮ್ಯಾಪಿಂಗ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿರುವ ಎಲ್ಲಾ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕವಿರುವುದರಿಂದ ವಾಸದ ಮನೆಗಳ ಆರ್.ಆರ್.ಮೀಟರ್ ಆಧಾರದ ಮೇಲೆ ಮನೆಗಳನ್ನು ಗುರುತಿಸಿ ಅಲ್ಲಿರುವ ಜನರ ಸಮೀಕ್ಷೆ ಮಾಡುವುದರಿಂದ ಯಾವುದೇ ಮನೆಗಳು ಸಮೀಕ್ಷಾ ವ್ಯಾಪ್ತಿಯಿಂದ ತಪ್ಪಿ ಹೋಗುವುದಿಲ್ಲ ಎಂದಿದ್ದಾರೆ.
ಎರಡನೇ ಹಂತದ ಸಮೀಕ್ಷೆಯ ಕಾರ್ಯವನ್ನು ಸೆ.22 ರಿಂದ ಅ.7 ರವರೆಗೆ ನಡೆಸುವ ಗುರಿ ಹೊಂದಲಾಗಿದೆ. ಈ ಸಮಯದಲ್ಲಿ ಶಾಲಾ ರಜಾದಿನಗಳು ಇರುವುದರಿಂದ ಸಮೀಕ್ಷೆ ಕಾರ್ಯಕ್ಕೆ ಪೂರಕವಾಗುತ್ತದೆ.
ಇ-ಆಡಳಿತ ಮತ್ತು ಇಂಧನ ಇಲಾಖೆಗಳು ವಿದ್ಯುಚ್ಛಕ್ತಿ ಮೀಟರ್ ಸಂಪರ್ಕದ ಆಧಾರದ ಮೇಲೆ ವಿನ್ಯಾಸಗೊಳಿಸಿದ ಈ ನವೀನ, ಕ್ರಿಯಾತಕ ಮತ್ತು ವಿಶಿಷ್ಟ ವ್ಯವಸ್ಥೆಯು ಉತ್ತಮವಾಗಿದೆ. ಅದಕ್ಕನುಗುಣವಾಗಿ ಒಂದು ಅಗತ್ಯವಾದ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಆಯೋಗದ ಸದಸ್ಯರು ಸೇರಿದಂತೆ, ಆಯೋಗದ ಇಂಧನ ಇಲಾಖೆಯ, ಇ.ಡಿ.ಸಿ.ಎಸ್ ಸಂಸ್ಥೆಯ ಉತ್ಸಾಹಿ ಹಾಗೂ ಸೃಜನಶೀಲ ಸಲಹಾ ತಂಡದ ಸಹಕಾರದೊಂದಿಗೆ ಈ ಪ್ರಕ್ರಿಯೆಯನ್ನು ವಿನ್ಯಾಸಗೊಳಿಸಲಾಗಿದೆ. ಸಮೀಕ್ಷೆಯ ಕಾರ್ಯವನ್ನು ತ್ವರಿತವಾಗಿ ಪ್ರಾರಂಭಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಮೀಟರ್ ರೀಡರ್‌ಗಳು ಸೆರೆಹಿಡಿದ ಮನೆ ಪಟ್ಟಿ ಡೇಟಾವನ್ನು ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ವಿತರಣೆಯ ಸರ್ವರ್‌ಗಳಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ನಂತರ ದ್ವಿತೀಯ ದತ್ತಾಂಶಗಳನ್ನು ಆಧರಿಸಿ, ಮೌಲೀಕರಿಸಿದ ನಂತರ ಮನೆ ಪಟ್ಟಿ ಸಮೀಕ್ಷೆಯ ಉದ್ದೇಶಕ್ಕಾಗಿ ಮ್ಯಾಪಿಂಗ್ ಮಾಡಲಾಗುತ್ತದೆ. ಅಭಿವೃದ್ಧಿಪಡಿಸಲಾದ ಅಪ್ಲಿಕೇಶನ್ ನಲ್ಲಿ ಮನೆಯ ಸ್ಥಳವನ್ನು ಸೆರೆಹಿಡಿಯಲಾಗುತ್ತದೆ ಮತ್ತು ಪ್ರತಿ ಮನೆಗಳಿಗೆ ವಿಶಿಷ್ಟ ಸಂಖ್ಯೆಯನ್ನು ನೀಡಲಾಗುತ್ತದೆ. ಅಪಾರ್ಟ್ ಮೆಂಟ್‌ಗಳು / ವಾಸಸ್ಥಳಗಳ ಕ್ಲಸ್ಟರ್ ಸೇರಿದಂತೆ ತಮ ಬಿಲ್ಲಿಂಗ್ ಸೈಕಲ್‌ನಲ್ಲಿ ಮೀಟರ್ ರೀಡರ್‌ಗಳು ಇಂದಿನಿಂದ ಈ ಕೆಲಸವನ್ನು ಪ್ರಾರಂಭಿಸಿದ್ದಾರೆ.
ಪ್ರಸ್ತಾವಿತ ಸಮೀಕ್ಷೆಯು ಹಿಂದುಳಿದ ವರ್ಗಗಳು ಮತ್ತು ಇತರ ಎಲ್ಲಾ ಜನರ ೞದತ್ತಾಂಶಗಳನ್ನು ಸೆರೆಹಿಡಿಯುವುದುೞ ಮಾತ್ರವಲ್ಲದೆ, ಅಂದಾಜು 7 ಕೋಟಿ ಜನರಿಗೆ ಸರ್ಕಾರಿ ಇಲಾಖೆಗಳಿಂದ ಪ್ರಾರಂಭಿಸಲಾಗಿರುವ ಹಾಗೂ ಮುಂದೆ ಪ್ರಾರಂಭಿಸಲಿರುವ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಬಳಸಬಹುದಾದ ಉಪಯುಕ್ತ ದತ್ತಾಂಶವಾಗಲಿದೆ ಎಂದು ಅವರು ವಿವರಿಸಿದ್ದಾರೆ.