ಬೆಂಗಳೂರು, ಸೆ.3– ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿದ ತಮಿಳುನಾಡಿನ ಕಾರು ಫ್ಲೈಓವರ್ನಿಂದ ಕೆಳಗೆ ಬಿದ್ದ ಪರಿಣಾಮ ಸೇಲಂ ಮೂಲದ ಸಾಫ್‌್ಟವೇರ್ ಎಂಜಿನಿಯರ್ ಮೃತಪಟ್ಟು ನಾಲ್ವರು ಗಾಯಗೊಂಡಿರುವ ಘಟನೆ ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.
ಶಬರೀಶ್(29) ಮೃತಪಟ್ಟ ಟೆಕ್ಕಿ. ಈತನ ಜೊತೆಯಲ್ಲಿದ್ದ ನಗರದ ನಿವಾಸಿಗಳಾದ ಶಂಕರ್. ಈತನ ಸಹೋದರಿ ಅನುಶ್ರೀ ಹಾಗೂ ಸ್ನೇಹಿತ ಮಿಥುನ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಸಾಫ್‌್ಟವೇರ್ ಎಂಜಿನಿಯರ್ಗಳು.
ತಮಿಳುನಾಡು ಮೂಲದ ಮಿಥುನ್ ಜೊತೆ ಆತನ ಕಾರಿನಲ್ಲಿ ವೀಸಾ ಪಡೆಯಲು ಶಬರೀಶ್ ನಗರಕ್ಕೆ ಬಂದಿದ್ದರು. ಮಲ್ಲೇಶ್ವರಂನಲ್ಲಿರುವ ಸ್ನೇಹಿತ ಶಂಕರ್ ಮನೆಗೆ ಈ ಇಬ್ಬರು ಗೆಳೆಯರು ರಾತ್ರಿ ಹೋಗಿದ್ದಾರೆ.
ಗೆಳೆಯನ ಮನೆಯಲ್ಲಿ ಕೆಲಹೊತ್ತು ಇದ್ದು ನಂತರ ಶಬರೀಶ್ ಹಾಗೂ ಮಿಥುನ್ ಜೊತೆ ಶಂಕರ ತನ್ನ ಸಹೋದರಿ ಅನುಶ್ರೀಯನ್ನು ಕರೆದುಕೊಂಡು ಕಾರಿನಲ್ಲಿ ಊಟಕ್ಕೆಂದು ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಮಲ್ಲೇಶ್ವರಂ ಮೂಲಕ ಸದಾಶಿವ ನಗರದ ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆ ಕಡೆಗೆ ಫ್ಲೈಓವರ್ನಲ್ಲಿ ಹೋಗುತ್ತಿದ್ದರು.
ಮಿಥುನ್ ಕಾರು ಚಾಲನೆ ಮಾಡುತ್ತ, ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಾ ಯಶವಂತಪುರ ಸರ್ಕಲ್ನ ಫ್ಲೈಓವರ್ ಮೇಲೆ ಸಾಗುತ್ತಿದ್ದಾಗ ತಿರುವಿನಲ್ಲಿ ಅತಿವೇಗದಿಂದಾಗಿ ಕಾರು ನಿಯಂತ್ರಣ ತಪ್ಪಿ ಫ್ಲೈಓವರ್ನ ಡಿವೈಡರ್ಗೆ ಅಪ್ಪಳಿಸಿ ಎದುರಿಗೆ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದು ಫ್ಲೈಓವರ್ನಿಂದ ಕೆಳಗೆ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರೂ ಗಾಯಗೊಂಡರು.
ತಕ್ಷಣ ಸ್ಥಳೀಯರ ನೆರವಿನಿಂದ ಎಲ್ಲರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಗಂಭೀರಗಾಯಗೊಂಡಿದ್ದ ಶಬರೀಶ್ ಚಿಕಿತ್ಸೆ ಫಲಿಸದೆ ಬೆಳಗ್ಗೆ ಮೃತಪಟ್ಟಿದ್ದಾರೆ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮೃತದೇಹವನ್ನಿಡಲಾಗಿದೆ.ಬೈಕ್ ಸವಾರ ಕಾಚೋಮಾಚನಹಳ್ಳಿ ನಿವಾಸಿ, ಎಲೆಕ್ಟ್ರೀಷಿಯನ್ ಮಂಜುನಾಥ್(38) ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿ ತಿಳಿದು ಯಶವಂತಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪಘಾತದ ತೀವ್ರತೆಯಿಂದಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿ ಎರಡು ಖಾಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಮಿಥುನ್ ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದನೇ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಆತನ ರಕ್ತದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಮದ್ಯ ಸೇವಿಸಿದ್ದನೇ ಎಂಬುವುದು ಗೊತ್ತಾಗಲಿದೆ.
ಅದೃಷ್ಟವಶಾತ್ ಕಾರು ಕೆಳಗೆ ಬಿದ್ದಾಗ ಆ ರಸ್ತೆಯಲ್ಲಿ ಸಾರ್ವಜನಿಕರಾಗಲಿ, ವಾಹನ ಸವಾರರ ಸಂಚಾರ ಇಲ್ಲದಿದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.