ಕೊರೊನಾ ಆತಂಕದ ನಡುವೆ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿದ ಸೈನಿಕರು

ಯಲಹಂಕ, ನ.7- ಕೊರೊನಾ ದಿಂದಾಗಿ ಇಡೀ ಜಗತ್ತು ತತ್ತರಿಸಿದೆ. ವೈದ್ಯರು, ಪೆÇಲೀಸರು, ಡಿಸಿ, ಎಸಿಗಳನ್ನೂ ಬಿಟ್ಟಿಲ್ಲ, ಹಾಗೇ ದೇಶ ಕಾಯೋ ಸೈನಿಕರನ್ನೂ ಬಿಟ್ಟಿಲ್ಲ. ಆದರೂ ಆತ್ಮಸ್ಥೈರ್ಯ ಹೆಚ್ಚಿಸಲು ಆಯೋಜಿಸಿದ್ದ ಕ್ರೀಡೆಯಲ್ಲಿ ಸೈನಿಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಯಲಹಂಕದ ಬಿಎಸ್‍ಎಫ್‍ನ ಸಿಗ್ನಲ್ ಟ್ರೈನಿಂಗ್ ಸ್ಕೂಲ್‍ನಲ್ಲಿ ಸೈನಿಕರಿಗೆ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚಿಸಲು ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಚಂಗನೆ ನೆಗೆದು ಚಿರತೆಯಂತೆ ಗುರಿಯತ್ತ ಮುನ್ನುಗ್ಗಿದ ಕ್ರೀಡಾಪಟು ಗಳಿಗೆ ಗ್ಯಾಲರಿಯಲ್ಲಿ ಕುಳಿತು ಪ್ರೇಕ್ಷಕರು ಹುರಿದುಂಬಿಸಿದರು. ಹಗ್ಗ ಹಿಡಿದು ಬಲ ಭೀಮರಂತೆ ಜಗ್ಗುತ್ತ ಹುರಿಯಾಳುಗಳು ಸೆಣೆಸಾಡಿದರು. ಸೈನಿಕರ ನಡುವೆ ನಡೆದ ವಾರ್ಷಿಕ ಕ್ರೀಡಾಕೂಟ ನೆರೆದಿದ್ದವರ ಮೈ ನವಿರೇಳಿಸಿತು. ಕೊರೊನಾ ಮಹಾಮಾರಿ ಇಡೀ ಜಗತ್ತನ್ನು ಕಿತ್ತು ತಿನ್ನುತ್ತಿರುವ ಸಮಯದಲ್ಲಿ ಜಗತ್ತಿನಾದ್ಯಂತ ವೈದ್ಯರು ಲಸಿಕೆ ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ.

ನಮ್ಮ ಪ್ರಧಾನಿಗಳು ನೀಡಿದ ಸೂಚನೆಯಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಡಿದ್ದೇವೆ. ಸೈನಿಕರ ದೈಹಿಕ ಚಟುವಟಿಕೆಯಿಂದ ಫಿಟ್ನೆಸ್ ತೊಂದರೆ ಆಗದ ಹಾಗೆ ತರಬೇತಿ ಮುಂದುವರೆಸಿ ದೇಶದ ಭದ್ರತೆಗೆ ನಮ್ಮ ಕರ್ತವ್ಯ ಮುಂದುವರೆಸುತ್ತಿದ್ದೇವೆ. ಎದೆಗುಂದದ ಸೈನಿಕರ ಸ್ಥೈರ್ಯಕ್ಕಾಗಿ ಇಂತಹ ಕ್ರೀಡಾ ಕೂಟಗಳು ಸಹಕಾರಿಯಾಗಲಿವೆ ಎಂದು ಬಿಎಸ್‍ಎಫ್ ಐಜಿಪಿ ಡಾ.ಸಾಬು ಎ. ಜೋಸೆಫ್ ಸಂತಸ ವ್ಯಕ್ತಪಡಿಸಿದರು.

ಯಲಹಂಕದ ಬಿಎಸ್‍ಎಫ್ ನೆಲೆಗೂ ಕಾಲಿಟ್ಟಿದ್ದ ಕೊರೊನಾ 30 ಜನರಿಗೆ ಭಾದಿಸಿತ್ತು. ದೈಹಿಕ ಸದೃಢತೆಯಿಂದ ಯಾರಿಗೂ ಏನು ತೊಂದರೆ ಆಗಿಲ್ಲ. ಕ್ರೀಡಾಪಟು, ಬಿಎಸ್‍ಎಫ್ ಪೇದೆ ನೀಲೇಶ್ ಮಾತನಾಡಿ, ನಮ್ಮ ದೈಹಿಕ-ಮಾನಸಿಕ ಸದೃಢತೆಗಾಗಿ ಕ್ರೀಡೆ ಅತ್ಯವಶ್ಯಕ. ಇದರಲ್ಲಿ ನಾನು ಭಾಗವಹಿಸಿ ಪದಕ ಗಳಿಸಿರುವುದು ಖುಷಿ ಕೊಟ್ಟಿದೆ ಎಂದು ಸಂತಸ ಹಂಚಿಕೊಂಡರು.