ಬೆಂಗಳೂರು, ಜೂ.8– ಮಕ್ಕಳಲ್ಲಿ ಜಾಗೃತಿ ಮೂಡಿಸಲು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ನೈತಿಕ ಶಿಕ್ಷಣದ ಹೆಸರಿನಲ್ಲಿ ಲೈಂಗಿಕ ಶಿಕ್ಷಣ ನೀಡಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದ್ದು, ಕೆಲ ಸಂಘಟನೆಗಳು ಆಕ್ರೋಶಕ್ಕೆ ಕಾರಣವಾಗಿದೆ.
ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನೀಡಲು ಈ ಹಿಂದೆ 2015 ರಲ್ಲಿಯೂ ಪ್ರಯತ್ನಗಳಾಗಿತ್ತು. ಆಗ ಹೆಚ್.ಎಸ್.ದೊರೆಸ್ವಾಮಿ ಸೇರಿದಂತೆ ಅನೇಕರು ಭಾರಿ ವಿರೋಧ ವ್ಯಕ್ತ ಪಡಿಸಿದ್ದರು. ಮಕ್ಕಳಲ್ಲಿ ಲೈಂಗಿಕ ಶಿಕ್ಷಣ ನೀಡಿ ಸಮಾಜದ ಅಧಃಪತನಕ್ಕೆ ಸರ್ಕಾರವೇ ಕಾರಣವಾಗಲಿದೆ ಎಂದು ಆಕ್ರೋಶಗಳು ವ್ಯಕ್ತವಾಗಿದ್ದವು. ಪ್ರಗತಿ ಪರ ಸಂಘಟನೆಗಳು ಸೇರಿದಂತೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಆಲೋಚನೆಗಳಿಂದ ಹಿಂದೆ ಸರಿದಿತ್ತು.
ಈಗ ಮತ್ತೆ ಲೈಂಗಿಕ ಶಿಕ್ಷಣದ ವಿವಾದ ಸದ್ದು ಮಾಡಲಾರಂಭಿಸಿದೆ. ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ರೂಪಿಸಿದ್ದು, ಅದನ್ನು ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ಪ್ರಕಟಿಸಿತ್ತು. ಸರ್ಕಾರ ರಚನೆಯಾದ ಮೇಲೆ ರಾಜ್ಯ ಸರ್ಕಾರ ಪ್ರತ್ಯೇಕ ಶಿಕ್ಷಣ ನೀತಿ ರೂಪಿಸಲು ಉನ್ನತಾಧಿಕಾರ ಸಮಿತಿ ರಚನೆ ಮಾಡಿದೆ.
ರಾಜ್ಯ ಶಿಕ್ಷಣ ನೀತಿ ಇನ್ನೂ ಅಖೈರುಗೊಂಡಿಲ್ಲ, ಈ ನಡುವೆ ನೈತಿಕ ಶಿಕ್ಷಣ ನೀಡುವ ಚರ್ಚೆಗಳು ಆರಂಭವಾಗಿವೆ. 8 ರಿಂದ 12ನೇ ತರಗತಿಯ ಮಕ್ಕಳವರೆಗೆ ಆಯಾ ವಯಸ್ಸಿಗೆ ಅನುಗುಣವಾಗಿ ಲೈಂಗಿಕ ಶಿಕ್ಷಣ ನೀಡಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ.
ಮಕ್ಕಳಲ್ಲಿ ಅವಧಿ ಮೀರಿದ ಬೆಳವಣಿಗೆ, ಅಸಹಜವಾದ ಪ್ರೌಢಾವಸ್ಥೆ, ಹಾರ್ಮೋನ್ ಬೆಳವಣಿಗೆ ಸೇರಿದಂತೆ ನಾನಾ ರೀತಿಯ ವೈಪರೀತ್ಯಗಳು ಕಂಡು ಬರುತ್ತಿವೆ. ಇದರಿಂದ ಮಕ್ಕಳಲ್ಲಿ ಮಾನಸಿಕ ಚಂಚಲತೆ, ಗೊಂದಲಗಳು ತೀವ್ರಗೊಳ್ಳುತ್ತಿವೆ.
ವೈಜ್ಞಾನಿಕ ಹಾಗೂ ಆಧುನಿಕ ಯುಗದಲ್ಲಿ ವಿದ್ಯುನ್ಯಾನ ಮಾಧ್ಯಮಗಳು ಮಕ್ಕಳನ್ನು ಮತ್ತಷ್ಟು ಮುಂದಾಲೋಚನೆಗೆ ಗುರಿ ಮಾಡಿವೆ. ಈ ಹಿನ್ನೆಲೆಯಲ್ಲಿ ವಿಕ್ಷಿಪ್ತ ಬೆಳವಣಿಗೆಗಳಾಗುತ್ತಿವೆ. ಅವುಗಳನ್ನು ಬಾಲ್ಯಾವಸ್ಥೆಯಲ್ಲೇ ನಿಯಂತ್ರಿಸಲು ಸೂಕ್ತ ಶಿಕ್ಷಣ ಅಗತ್ಯ ಎಂಬ ಸಲಹೆಗಳಿವೆ. ಮನೆಯಲ್ಲಿ ಪೋಷಕರು ಹಾರ್ಮೋನ್ ಬೆಳವಣಿಗೆಗಳು ಮತ್ತು ಅದರಿಂದಾಗುವ ಪರಿಣಾಮಗಳ ಬಗ್ಗೆ ವೈಜ್ಞಾನಿಕ ತಿಳುವಳಿಕೆ ನೀಡುವುದು ಕಷ್ಟ ಸಾಧ್ಯವಾಗಿದ್ದು, ಶಾಲಾ-ಕಾಲೇಜು ಹಂತದಲ್ಲಿ ಈ ಅರಿವು ಮೂಡಿಸುವುದಾದರೆ ಮಕ್ಕಳು ಹೆಚ್ಚು ಪ್ರಜ್ಞಾವಂತಿಕೆ ಹಾಗೂ ಜಾಗೃತರಾಗಲು ಸಾಧ್ಯವಾಗುತ್ತದೆ ಎಂಬ ವಾದಗಳಿವೆ.
ನೈತಿಕ ಶಿಕ್ಷಣದೊಂದಿಗೆ ಹಿಂದೆ ಮಹಾಭಾರತ ಹಾಗೂ ರಾಮಾಯಣದ ಸಾರಾಂಶಗವನ್ನು ಮಕ್ಕಳಿಗೆ ಬೋಧಿಸಲು ಹಿಂದಿನ ಬಿಜೆಪಿ ಸರ್ಕಾರ ಮುಂದಾಗಿತ್ತು. ಆಗ ಕಾಂಗ್ರೆಸ್ ಜೊತೆಗೆ ಹಲವು ಪ್ರಗತಿ ಪರ ಸಂಘಟನೆಗಳು ಆಕ್ಷೇಪ ವ್ಯಕ್ತ ಪಡಿಸಿದ್ದವು. ಒಂದು ಧರ್ಮದ ಸಾರಾಂಶ ಬದಲು ಸರ್ವ ಧರ್ಮ ಸಾರಾಂಶ ಬೋಧಿಸಬೇಕು ಎಂದು ಪಟ್ಟು ಹಿಡಿದಿದ್ದವು.
ಈಗ ನೈತಿಕ ಶಿಕ್ಷಣದ ಮಾದರಿ ಹೇಗಿರಬೇಕು ಎಂಬ ಬಗ್ಗೆ ಡಿಎಸ್ಇಆರ್ಟಿ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಿದೆ. ಮಕ್ಕಳಿಗೆ ಮನವರಿಕೆಯಾಗುವಂತಹ ಅಂಶಗಳನ್ನು ಆಯಾ ತರಗತಿಗೆ ಅನುಗುಣವಾಗಿ ರೂಪಿಸಿದೆ. ವಾರದಲ್ಲಿ ಕನಿಷ್ಠ ಎರಡು ತರಗತಿಗಳಲ್ಲಿ ನೈತಿಕ ಶಿಕ್ಷಣ ನೀಡಲು ವೇಳಾ ಪಟ್ಟಿ ಸಿದ್ಧವಾಗಿದೆ.
ಮಕ್ಕಳಲ್ಲಿ ಭೌತಿಕ ಬೆಳವಣಿಗೆಗೆ ಅನುಗುಣವಾಗಿ ಭೌದ್ಧಿಕ ಶಿಕ್ಷಣ ನೀಡಲು ಶಾಲಾ ಶಿಕ್ಷಣ ಇಲಾಖೆ ಸಿದ್ದಗೊಂಡಿದೆ. ಕೆಲ ಸಂಘಟನೆಗಳು ಮಡಿವಂತಿಕೆಯ ಹೆಸರಿನಲ್ಲಿ ಲೈಂಗಿಕ ಶಿಕ್ಷಣ ನೀಡುವುದು ಅಸಮಂಜಸ ಎಂದು ಆಕ್ಷೇಪ ವ್ಯಕ್ತ ಪಡಿಸಿವೆ.