Wednesday, January 15, 2025
Homeರಾಷ್ಟ್ರೀಯ | National'ಮಹಾ' ಚುನಾವಣೆಯಲ್ಲಿ ಏನೋ ಗೋಲ್ ಮಾಲ್ ನಡೆದಿದೆ : ರಾಹುಲ್ ಗಂಭೀರ ಆರೋಪ

‘ಮಹಾ’ ಚುನಾವಣೆಯಲ್ಲಿ ಏನೋ ಗೋಲ್ ಮಾಲ್ ನಡೆದಿದೆ : ರಾಹುಲ್ ಗಂಭೀರ ಆರೋಪ

'Something wrong happened in Maharashtra elections': Rahul Gandhi asks EC to 'come clean'

ಬೆಂಗಳೂರು,ಜ.15– ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಖಚಿತವಾಗಿ ಲೋಪವಾಗಿದೆ. ಲೋಕಸಭೆ ಚುನಾವಣೆಯಿಂದ ವಿಧಾನಸಭಾ ಚುನಾವಣೆ ನಡುವೆ ಏಕಾಏಕಿ 1 ಕೋಟಿ ಮತದಾರರ ಸಂಖ್ಯೆ ಏರಿಕೆಯಾಗಿರುವುದರ ಬಗ್ಗೆ ಪಾರದರ್ಶಕ ಪರಿಶೀಲನೆಗೆ ಕೇಂದ್ರ ಚುನಾವಣಾ ಆಯೋಗ ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ದೆಹಲಿಯಲ್ಲಿಂದು ಎಐಸಿಸಿಯ ನೂತನ ಕೇಂದ್ರ ಕಚೇರಿ ಉದ್ಘಾಟನೆ ವೇಳೆ ಮಾತನಾಡಿದ ಅವರು, ಚುನಾವಣಾ ಆಯೋಗ ಮತದಾನ ಪ್ರಕ್ರಿಯೆ ನಡೆಸಿರುವುದರಲ್ಲಿ ಅನುಮಾನವಿದೆ. ಇದ್ದಕ್ಕಿದ್ದಂತೆ ಒಂದು ಕೋಟಿಯಷ್ಟು ಬೃಹತ್ ಪ್ರಮಾಣದ ಮತದಾರರು ಪ್ರತ್ಯಕ್ಷವಾದರು.

ನಾನು ಆಯೋಗದ ಮುಂದೆ ನೇರವಾದ ಸವಾಲನ್ನು ಇಟ್ಟಿದ್ದೆ. ಮತದಾರರ ಪಟ್ಟಿಯಲ್ಲಿ ಪಾರದರ್ಶಕತೆ ಇಲ್ಲ. ಆ ದತ್ತಾಂಶಗಳನ್ನು ವಾಸ್ತವಾಂಶದ ಮೇಲೆ ನೀಡಿದರೆ ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ ಆಯೋಗ ಮಾಹಿತಿ ನೀಡಲು ನಿರಾಕರಿಸಿದೆ. ಮತದಾರರ ಪಟ್ಟಿಯನ್ನು ನೀಡಲು ಆಯೋಗ ಏಕೆ ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆಯಿಂದ ವಿಧಾನಸಭೆ ಚುನಾವಣೆಯವರೆಗೂ 1 ಕೋಟಿ ಮತದಾರರ ಸಂಖ್ಯೆ ಏರಿಕೆಯಾಗಲು ಕಾರಣ ಏನು ಎಂಬುದನ್ನು ತಿಳಿಯಲು ಮತದಾರರ ಪಟ್ಟಿ ಪರಿಶೀಲನೆ ಅಗತ್ಯವಿತ್ತು. ಆದರೆ ಚುನಾವಣಾ ಆಯೋಗ ಇದಕ್ಕೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ಚುನಾವಣಾ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆ ಇದೆ. ಆಯೋಗ ಸ್ವಚ್ಛಗೊಳ್ಳುವ ಅಗತ್ಯವಿದೆ. ಇಂತಹ ವ್ಯವಸ್ಥೆ ವಿರುದ್ಧ ನಾವು ಹೋರಾಟ ನಡೆಸಬೇಕು.

ತನಿಖಾ ಸಂಸ್ಥೆಗಳಾದ ಸಿಬಿಐ, ಇ.ಡಿ.ಯನ್ನು ನಮ ವಿರುದ್ಧ ಬಳಕೆ ಮಾಡಲಾಗುತ್ತಿದೆ. ಮಾಧ್ಯಮಗಳು ಕೂಡ ವಿರುದ್ಧವಾಗಿವೆ. ದಿನ ಬೆಳಿಗ್ಗೆ ಎದ್ದ ತಕ್ಷಣವೇ ನಾವು ನಂಬುವ ಸಿದ್ಧಾಂತದ ಪರವಾಗಿ ಹೋರಾಟ ನಡೆಸುವ ಪರಿಸ್ಥಿತಿ ಬಂದೊದಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಹೊಸ ಕೇಂದ್ರ ಕಚೇರಿಯನ್ನು ಇಂದು ಪಡೆದುಕೊಂಡಿದೆ. ಇದು ಗೆಲುವಿನ ಸಂಕೇತ. ದೇಶಕ್ಕೆ 1947 ರಲ್ಲೇ ಸ್ವಾತಂತ್ರ್ಯ ಸಿಕ್ಕರೂ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು ಅಯೋಧ್ಯೆಯಲ್ಲಿ. ರಾಮಮಂದಿರದ ನಿರ್ಮಾಣದ ಸಂದರ್ಭದಲ್ಲಿ ಎಂದು ಹೇಳಲಾಯಿತು ಎಂದು ಸರಿಸಿಕೊಂಡ ರಾಹುಲ್ಗಾಂಧಿ, ಇಂದು ಉದ್ಘಾಟನೆಗೊಂಡ ಕಟ್ಟಡ ಕೇವಲ ಇಟ್ಟಿಗೆಗಳಿಂದ ಕಟ್ಟಿದ ಕಟ್ಟಡ ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟದಿಂದ ಈವರೆಗಿನ ತ್ಯಾಗಗಳ ಸಂಕೇತ ಎಂದರು.

ಸ್ವಾತಂತ್ರ್ಯದ ಫಲ ನಮ ಸಂವಿಧಾನವಾಗಿದೆ. ಪಕ್ಷ ನಾನಾ ಕಾರಣಗಳಿಗಾಗಿ ಸಂಘರ್ಷ, ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದವರನ್ನು ಸರಿಸುತ್ತದೆ. ಭಗವದ್ಗೀತೆ, ಶಿವ, ಗುರುನಾನಕ್, ಕಬೀರ್ ಸೇರಿದಂತೆ ಎಲ್ಲರೂ ನೀನು ಯಾರು ಎಂದು ಅರ್ಥ ಮಾಡಿಕೊಳ್ಳುವ ಆಧ್ಯಾತಿಕತೆಯನ್ನು ನಮ ಮುಂದಿಟ್ಟಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಕಾಂಗ್ರೆಸ್ ಮತ್ತು ಸಂಘ ಪರಿವಾರದ ಸೈದ್ಧಾಂತಿಕ ಸಂಘರ್ಷಗಳಿವೆ. ದೇಶದಲ್ಲಿ ಭಾಷೆ, ಸಂಸ್ಕೃತಿ, ಜಾತಿ, ಧರ್ಮಗಳ ಮೇಲರಿಮೆ, ಕೀಳರಿಮೆ ಇರಬಾರದು ಎಂಬುದು ಕಾಂಗ್ರೆಸ್ನ ನಿಲುವು.

ಆದರೆ ಆರ್ಎಸ್ಎಸ್ ಜ್ಞಾನವನ್ನು ಒಂದೇ ಕೇಂದ್ರದಲ್ಲಿರಿಸಲು ಬಯಸುತ್ತದೆ. ನಿನ್ನೆ ಹೇಳಿಕೆಯೊಂದರಲ್ಲಿ ಸಂವಿಧಾನ ಅಪಮೌಲ್ಯ ಹಾಗೂ ಸ್ವಾತಂತ್ರ್ಯ ಹೋರಾಟವನ್ನು ಅಪಮಾನಿಸುವ ಮೂರ್ಖತನದ ಹೇಳಿಕೆಯನ್ನು ಕೇಳಿದ್ದೇವೆ. ಇದನ್ನು ಪ್ರತಿಯೊಬ್ಬರೂ ವಿರೋಧಿಸಿದ್ದಾರೆ. ಇಂತಹ ಹೇಳಿಕೆಗಳನ್ನು ನೋಡಿಕೊಂಡು ಜನ ಸುಮನಿರಬೇಕೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ದೇಶದ ಸುಭದ್ರತೆಗೆ ತಳಪಾಯ ಹಾಕಿ ಇಂದು ಸದೃಢವಾಗಿ ಕಟ್ಟಿನಿಲ್ಲಿಸಿದೆ. ಇದಕ್ಕೆ ಉದಾಹರಣೆ ಎಂದರೆ ದೇಶದ ಹೊರಭಾಗದಲ್ಲಿ ಭಾರತದ ಪ್ರತಿಭೆಗಳು ಕಾಣಿಸುತ್ತಿರುವುದು. ಇದೇ ದೇಶದ ಆತ. ಅದಕ್ಕೆ ಕಾರಣವಾಗಿದ್ದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.

ಕಾಂಗ್ರೆಸ್ ನಾಯಕರ ಮತ್ತು ಕಾರ್ಯಕರ್ತರ ಕೊಡುಗೆಗಳನ್ನು ಅಳಿಸಿ ಹಾಕಲಾಗುವುದಿಲ್ಲ. ಎಲ್ಲರೂ ತ್ರಿವರ್ಣ ಧ್ವಜಕ್ಕೆ ನಮಸ್ಕರಿಸಬೇಕು. ಸಂವಿಧಾನವನ್ನು ಗೌರವಿಸಬೇಕು. ಸಂವಿಧಾನವನ್ನು, ರಾಷ್ಟ್ರಧ್ವಜವನ್ನು ಗೌರವಿಸದವರು ನಮಗೆ ಪಾಠ ಹೇಳುತ್ತಾರೆ ಎಂದು ಆಕ್ಷೇಪಿಸಿದರು.

ರಹಸ್ಯ ಸಮಾಜವೊಂದು ದೇಶ ನಡೆಸಲು ಬಯಸುತ್ತಿದೆ. ಒಬ್ಬ ವ್ಯಕ್ತಿಯನ್ನು ಮುಂದಿಟ್ಟುಕೊಂಡು ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ಬುಡಕಟ್ಟು ಜನಾಂಗದ ದನಿಯನ್ನು ಅಡಗಿಸಲು ಯತ್ನಿಸಲಾಗುತ್ತಿದೆ. ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾರೂ ಈ ದಬ್ಬಾಳಿಕೆಯ ವಿರುದ್ಧ ಎದುರು ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂದರು.

ಕಾಂಗ್ರೆಸ್ ಎಲ್ಲಾ ಧಾರ್ಮಿಕ, ಆಧ್ಯಾತಿಕ, ಸಾಮಾಜಿಕ, ದಾರ್ಶನಿಕರ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸರಿಯಾದ ದಾರಿಯಲ್ಲಿ ನಡೆಯುತ್ತಿದೆ. ಆರ್ಎಸ್ಎಸ್ನಿಂದ ಒಬ್ಬ ವ್ಯಕ್ತಿಯ ಹೆಸರನ್ನು ಈ ದೇಶದ ದಾರ್ಶನಿಕರ ಪಟ್ಟಿಯಲ್ಲಿ ಹೇಳಲು ಸಾಧ್ಯವೇ?, ಯಾರೂ ಕೂಡ ವಿಭಜನೆಯ ಸಿದ್ದಾಂತವನ್ನು ಒಪ್ಪಿಲ್ಲ, ಪಾಲಿಸಿಲ್ಲ. ದೇಶಕ್ಕೆ ಕೊಡುಗೆ ನೀಡಿದ ಎಲ್ಲರೂ ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವಕ್ಕಾಗಿ ಹೋರಾಟ ಮಾಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರೂ ಸಿದ್ಧಾಂತಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಪಕ್ಷದ ನಾಯಕರ ವಿರುದ್ಧ ಸುಳ್ಳಿನ ಆರೋಪದ ಮೇಲೆ ದಾಳಿಗಳು ನಡೆಯುತ್ತವೆ. ಆರ್ಎಸ್ಎಸ್ ಸಿದ್ಧಾಂತಕ್ಕೆ ಮಾರು ಹೋಗಬೇಕೆಂಬ ಒತ್ತಡ ಹೇರಲಾಗುತ್ತಿದೆ. ಆದರೆ ನಮ ಹೋರಾಟ ನಿಲ್ಲುವುದಿಲ್ಲ. ಈ ಕಟ್ಟಡ ಪ್ರತಿಯೊಬ್ಬ ಕಾಂಗ್ರೆಸ್ಸಿಗನ ರಕ್ತ. ನಮ ಆಲೋಚನೆಗಳು ದೇಶದ ಪ್ರತೀ ಮೂಲೆಗೂ ತಲುಪುತ್ತದೆ ಎಂದರು.

ದೇಶದ ರಕ್ಷಣೆಗೆ ನಾವು ನಾಗರಿಕ ಯುದ್ಧವನ್ನು ಎದುರಿಸುತ್ತಿದ್ದೇವೆ. ಧೈರ್ಯದಿಂದ ಪ್ರತಿ ಸಿದ್ಧಾಂತದ ವಿರುದ್ಧ ಹೋರಾಟ ನಡೆಸುತ್ತೇವೆ. ನಾವು ರಾಜಕೀಯ ಸಂಘಟನೆ ಬಿಜೆಪಿ ವಿರುದ್ಧವಷ್ಟೇ ಹೋರಾಟ ಮಾಡುತ್ತಿಲ್ಲ. ಆರ್ಎಸ್ಎಸ್ನ ಸೈದ್ಧಾಂತಿಕತೆಯ ವಿರುದ್ಧವೂ ಕೂಡ ಸಂಘರ್ಷ ಮುಂದುವರೆದಿದೆ ಎಂದರು.

RELATED ARTICLES

Latest News