ಬೆಂಗಳೂರು, ನ.21- ಮಗಳನ್ನು ಪ್ರೀತಿಸಿ ಆಕೆಯೊಂದಿಗೆ ಓಡಿ ಹೋಗಿದ್ದ ಅಳಿಯನೇ ಅತ್ತೆ ಮನೆಗೆ ಕನ್ನ ಹಾಕಿ 2.35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಹಲಸೂರಿನ ಎಂವಿ ಗಾರ್ಡನ್ ನಿವಾಸಿ ಪ್ರದೀಪ್ ಕುಮಾರ್(23) ಬಂಧಿತ ಅಳಿಯ. ಈತ ಅತ್ತೆ ಮನೆಗೆ ಕನ್ನ ಹಾಕಿದ್ದ ದೃಶ್ಯ ನೆರೆಮನೆಯ ಮೊಬೈಲ್‍ನಲ್ಲಿ ಸೆರೆಯಾಗಿದೆ.
ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ರೆಜಿನಾ ಎಂಬುವರ ಚಿಕ್ಕ ಮಗಳನ್ನು ಒಂದೂವರೆ ವರ್ಷದ ಹಿಂದೆ ಪ್ರೀತಿಸಿ ಇಬ್ಬರೂ ಮನೆ ಬಿಟ್ಟು ಹೋಗಿದ್ದರು. ಈ ನಡುವೆ ರೆಜಿನಾ ಅವರು ಕನ್ಯಾಕುಮಾರಿಗೆ ಹೋಗಿದ್ದಾಗ ಅಳಿಯ ಪ್ರದೀಪ್ ಕುಮಾರ್ ಇವರ ಮನೆ ಬಳಿ ಬಂದು ಬಾಗಿಲು ಒಡೆದು ಒಳನುಗ್ಗಿ ಚಿನ್ನಾಭರಣವನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾಗ ನೆರೆಮನೆ ನಿವಾಸಿಗಳು ಗಮನಿಸಿ ಆತನನ್ನು ಪ್ರಶ್ನಿಸಿದಾಗ ನಾನು ಅವರ ಸಂಬಂಧಿಕ ಎಂದು ಹೇಳಿದ್ದಾನೆ.
ಅನುಮಾನಗೊಂಡ ನೆರೆಮನೆ ನಿವಾಸಿಯೊಬ್ಬರು ಆತನ ಫೋಟೋ ವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು. ನಂತರ ರೆಜಿನಾ ಅವರ ಮೊಬೈಲ್‍ಗೆ ಕರೆ ಮಾಡಿ ವಿಷಯ ತಿಳಿಸಲು ಯತ್ನಿಸಿದರಾದರೂ ಅವರ ಮೊಬೈಲ್ ನಾಟ್‍ರೀಚಬಲ್ ಆದ ಹಿನ್ನೆಲೆಯಲ್ಲಿ ಸಂಪರ್ಕ ಸಾಧ್ಯವಾಗಿರಲಿಲ್ಲ. ರೆಜಿನಾ ಅವರು ಕನ್ಯಾಕುಮಾರಿಯಿಂದ ಮನೆಗೆ ವಾಪಸ್ ಆದಾಗ ಬಾಗಿಲು ಒಡೆದಿರುವುದು ಗಮನಿಸಿ ಒಳಗೆ ಹೋಗಿ ನೋಡಿದಾಗ ಆಭರಣ ಕಳ್ಳತನವಾಗಿರುವುದು ಕಂಡು ಬಂದಿದೆ.
ಬೆಂಗಳೂರು ಕಂಬಳ ಉತ್ಸವದಿಂದ ಬ್ರಿಜ್ ಭೂಷಣ್‍ಗೆ ಕೋಕ್
ಈ ಬಗ್ಗೆ ನೆರೆಹೊರೆಯವರನ್ನು ವಿಚಾರಿಸಿದಾಗ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದ ಫೋಟೋ ತೋರಿಸಿದಾಗ ಆ ವ್ಯಕ್ತಿ ತಮ್ಮ ಅಳಿಯ ಎಂಬುವುದು ಗೊತ್ತಾಗಿದೆ. ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಗೆ ರೆಜಿನಾ ಅವರು ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಪ್ರದೀಪ್ ಕುಮಾರನನ್ನು ಬಂಧಿಸಿ 47 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈತನ ಬಂಧನದಿಂದ ಹಲಸೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಂದು ಹಗಲು ಕನ್ನಕಳವು ಪ್ರಕರಣ ಪತ್ತೆಯಾಗಿರುತ್ತದೆ.
ಇನ್ಸ್‍ಪೆಕ್ಟರ್ ಶಿವರಾಜ್ ಗಸಂಗಿ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿದ್ದರು.