ಬೆಂಗಳೂರು,ಏ.20– ತನ್ನ ಮಗನನ್ನು ಸೇನಾ ಅಧಿಕಾರಿ ಮಾಡಬೇಕೆಂದು ಕನಸು ಹೊತ್ತಿದ ನಿವೃತ್ತ ಯೋಧರೊಬ್ಬರನ್ನು ಮಗನೇ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಘಟನೆ ವಿವೇಕನಗರ
ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಾಜಿ ಯೋಧರಾದ ಬೋಲುಅರಬ್ (47) ಕೊಲೆಯಾದವರು. ಇವರ ಪುತ್ರ ಸಮೀರ್ (19) ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿವೇಕನಗರದ ಬಸ್ ನಿಲ್ದಾಣ ಹಿಂಭಾಗದಲ್ಲಿರುವ ಹೊನ್ನಾರ ಪೇಟೆಯ ಮನೆಯೊಂದರಲ್ಲಿ ಬೋಲುಅರಬ್ ಕುಟುಂಬ ವಾಸವಾಗಿದೆ. ಸಮೀರ್ ಸ್ಥಳೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಸಮೀರ್ ಸೇರಿದಂತೆ ಮನೆಯಲ್ಲಿ ಎಲ್ಲರೂ ನಿಯಮ ಪಾಲಿಸಬೇಕು ಎಂದು ಬೋಲುಅರಬ್ ಕಟ್ಟುನಿಟ್ಟಾಗಿ ಹೇಳುತ್ತಿದ್ದರು. ಆದರೆ ಕುಟುಂಬವನ್ನು ಹೆಚ್ಚು ಪ್ರೀತಿಸುತ್ತಿದ್ದರು. ಸಮಯಪಾಲನೆ, ಆಚಾರ-ವಿಚಾರದಲ್ಲಿ ಕುಟುಂಬದವರ ಜೊತೆ ರಾಜಿ ಮಾಡಿಕೊಳ್ಳುತ್ತಿರಲಿಲ್ಲ.
ಮಗ ಸಮೀರ್ ಕಾಲೇಜಿಗೆ ತೆರಳಿ ಮನೆಗೆ ತಡವಾಗಿ ಬಂದಾಗಲೆಲ್ಲ ಪ್ರಶ್ನಿಸುತ್ತಿದ್ದರು ಮತ್ತು ಅನಗತ್ಯವಾಗಿ ಹಣ ವೆಚ್ಚ ಮಾಡಬಾರದೆಂದು ಬುದ್ದಿ ಮಾತು ಹೇಳುತ್ತಿದ್ದರು. ಆದರೆ ಇದು ಮಗ ಸಮೀರ್‌ಗೆ ಇಷ್ಟವಾಗುತ್ತಿರಲಿಲ್ಲ. ಇದೇ ವಿಚಾರದಲ್ಲಿ ತಂದೆ ಮಗನ ಜೊತೆ ವಾಗ್ವಾದ ನಡೆಯುತಿತ್ತು.
ಕಳೆದ ರಾತ್ರಿ ಇದೇ ವಿಚಾರಕ್ಕೆ ಜಗಳ ನಡೆದು ಮುಂಜಾನೆ 2 ಗಂಟೆ ಸಂದರ್ಭದಲ್ಲಿ ಅಪ್ಪನ ಕುತ್ತಿಗೆ ಹಿಸುಕಿ ಮಗನೇ ಕೊಲೆ ಮಾಡಿದ್ದಾನೆ. ನಂತರ ಯಾರೋ ಐದಾರು ಜನ ಬಂದು ಹಲ್ಲೆ ಮಾಡಿ ಹೋದರು ಎಂದು ಪೊಲೀಸರಿಗೆ ತಿಳಿಸಿದ್ದ.
ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸ್ಥಳೀಯ ಸಿಸಿ ಟಿವಿಗಳನ್ನು ನೋಡಿ ಪರಿಶೀಲನೆ ನಡೆಸಿದಾಗ ಯಾರೂ ಕೂಡ ಮನೆಯ ಒಳಗೆ ಬಾರದಿರುವುದನ್ನು ಅರಿತು ಸಮೀರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.ಘಟನೆ ಸಂದರ್ಭದಲ್ಲಿ ಮಗನಿಗೆ ತಾಯಿ ಸಹಕಾರ ನೀಡಿರಬಹುದೆಂದು ಅನುಮಾನ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಎಂದು ತನಿಖೆ ಮುಂದುವರೆದಿದೆ.