Friday, July 5, 2024
Homeಕ್ರೀಡಾ ಸುದ್ದಿಸೆಮಿಫೈನಲ್‌ಗೆ ಪ್ರವೇಶಿಸಿದ ದಕ್ಷಿಣ ಆಫ್ರಿಕಾ

ಸೆಮಿಫೈನಲ್‌ಗೆ ಪ್ರವೇಶಿಸಿದ ದಕ್ಷಿಣ ಆಫ್ರಿಕಾ

ಆಂಟಿಗುವಾ, ಜೂ. 24- ವೆಸ್ಟ್‌ಇಂಡೀಸ್‌‍ನ ಸ್ಟಾರ್‌ ಆಲ್‌ರೌಂಡರ್‌ ರಾಸ್ಟನ್‌ ಚೇಸ್‌‍ ಅವರ ಅತ್ಯಮೋಘ ಪ್ರದರ್ಶನ (52 ರನ್‌, 12ಕ್ಕೆ 3)ದ ಹೊರತಾಗಿಯೂ 3 ವಿಕೆಟ್‌ಗಳಿಂದ ಸೋಲು ಕಂಡ ಅತಿಥೇಯ ವೆಸ್ಟ್‌ ಇಂಡೀಸ್‌‍ ಸೆಮಿಫೈನಲ್‌ಗೇರುವ ಅವಕಾಶ ಕೈಚೆಲ್ಲಿಕೊಂಡಿದೆ.

ಅಂಟಿಗುವಾದ ಸರ್‌ ವಿವಿಯನ್‌ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಸೆಮೀಸ್‌‍ ಹಂತ ತಲುಪಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಟಾಸ್‌‍ ಸೋತು ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ಇಂಡೀಸ್‌‍, ಆರಂಭಿಕ ಆಟಗಾರ ಕೇಲ್‌ ಮೇಯರ್ಸ್‌ (35 ರನ್‌) ಹಾಗೂ ರಾಸ್ಟನ್‌ ಚೇಸ್‌‍ (52 ರನ್‌) ಅವರ 84 ರನ್‌ಗಳ ಜೊತೆಯಾಟದ ನಡುವೆಯೂ ಹರಿಣಿಗಳ ಬೌಲಿಂಗ್‌ ದಾಳಿ ಎದುರು ರನ್‌ ಗಳಿಸಲು ಪರದಾಟ ನಡೆಸಿದರು.

ಡೆತ್‌ ಓವರ್‌ನಲ್ಲಿ ರನ್‌ ವೇಗ ಹೆಚ್ಚಿಸುವ ಹೊಣೆ ಹೊರಬೇಕಾಗಿದ್ದ ಅಂಡ್ರೂ ರಸೆಲ್‌ 2 ಭರ್ಜರಿ ಸಿಕ್ಸರ್‌ ಸಿಡಿಸಿ 15 ರನ್‌ ಗಳಿಸಿ ಉತ್ತಮ ಆರಂಭ ಕಂಡರೂ , ಎನ್ರಿಕ್‌ ನೊರ್ಕಿಯಾ ಅವರ ಚುರುಕಿನ ಕ್ಷೇತ್ರರಕ್ಷಣೆಗೆ ವಿಕೆಟ್‌ ಒಪ್ಪಿಸಿದರು. ಅಲ್ಝಾರಿ ಜೋಸೆಫ್‌ (11 ರನ್‌) ಹಾಗೂ ಗುಡಿಕೇಶ್‌ ಮೊಹಾಟಿ (4 ರನ್‌) 8ನೇ ವಿಕೆಟ್‌ಗೆ ಮುರಿಯದ 17 ರನ್‌ಗಳ ನೆರವಿನಿಂದ 8 ವಿಕೆಟ್‌ ನಷ್ಟಕ್ಕೆ 135 ರನ್‌ ಗಳಿಸಿದರು.

ದಕ್ಷಿಣ ಆಫ್ರಿಕಾ 123 ರನ್‌ಗಳ ಗುರಿ
ಅತಿಥೇಯ ವೆಸ್ಟ್‌ಇಂಡೀಸ್‌‍ ನೀಡಿದ 136 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ಆಂಡ್ರೂ ರಸೆಲ್‌ (2 ವಿಕೆಟ್‌) ಅವರ ಒಂದೇ ಓವರ್‌ನಲ್ಲಿ ಆರಂಭಿಕರ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಪಂದ್ಯಕ್ಕೆ ಮಳೆ ಅಡಚಣೆ ಉಂಟಾಗಿದ್ದರಿಂದ ಡಕ್ವರ್ತ್‌ ಲೂಯಿಸ್‌‍ ನಿಯಮದ ಪ್ರಕಾರ ದಕ್ಷಿಣ ಆಫ್ರಿಕಾಕ್ಕೆ 17 ಓವರ್‌ಗಳಲ್ಲಿ 123 ರನ್‌ಗಳ ಗುರಿ ನೀಡಲಾಯಿತು.

ಟ್ರಿಸ್ಟನ್‌ ಸ್ಟಬ್‌ (29 ರನ್‌), ಹೆನ್ರಿಚ್‌ ಕ್ಲಾಸೆನ್‌ (22 ರನ್‌) ಹಾಗೂ ಮಾರ್ಕೊ ಯಾಸೆನ್‌ (ಅಜೇಯ 21 ರನ್‌) ಅವರ ಉಪಯುಕ್ತ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ 16.1 ಓವರ್‌ನಲ್ಲೇ 7 ವಿಕೆಟ್‌ ಕಳೆದುಕೊಂಡು 124 ರನ್‌ ಗಳಿಸಿ ಗೆಲುವಿನ ದಡ ತಲುಪುವ ಮೂಲಕ ಸೆಮಿಫೈನಲ್‌ ಟಿಕೆಟ್‌ ಖಚಿತಪಡಿಸಿಕೊಂಡಿತು.

ವೆಸ್ಟ್‌ ಇಂಡೀಸ್‌‍ ಪರ ರಾಸ್ಟನ್‌ ಚೇಸ್‌‍ (12ಕ್ಕೆ 3) ಯಶಸ್ವಿ ಬೌಲರ್‌ ಆದರೆ, ಆಂಡ್ರೂ ರಸೆಲ್‌ ಹಾಗೂ ಅಲ್ಝಾರಿ ಜೋಸೆಫ್‌ ತಲಾ 2 ವಿಕೆಟ್‌ ಪಡೆದರು. ದಕ್ಷಿಣ ಆಫ್ರಿಕಾ ಪರ 27 ರನ್‌ಗಳಿಗೆ 3 ವಿಕೆಟ್‌ ಪಡೆದ ತರ್ಬೇಜ್‌ ಶಂಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

RELATED ARTICLES

Latest News