ಸಿಯೋಲ್, ಡಿ.29- ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಸುಮಾರು 179 ಮಂದಿ ಸಾವನ್ನಪ್ಪಿದ್ದಾರೆ. ಜೆಜು ಏರ್‌ವೇಸ್‌ನ ವಿಮಾನವು ಬ್ಯಾಂಕಾಕ್‌ನಿಂದ ಹಿಂತಿರುಗುತ್ತಿದ್ದಾಗ ಇಳಿಯುವ ಸಂದರ್ಭದಲ್ಲಿ ಲ್ಯಾಂಡಿಂಗ್ ಗೇರ್ ವಿಫಲವಾದಾಗ ನಿಲ್ದಾಣದ ಗಡಿ ಗೋಡೆಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ.
ಸಿಯೋಲ್‌ನಿಂದ ದಕ್ಷಿಣಕ್ಕೆ 290 ಕಿಲೋಮೀಟರ್ (180 ಮೈಲುಗಳು) ದೂರದಲ್ಲಿರುವ ಮುವಾನ್‌ನಲ್ಲಿ ಇಂದು ಬೆಳಿಗ್ಗೆ ಸ್ಥಳೀಯ ಕಾಲಮಾನ ಬೆಳಗ್ಗೆ 9.03ಕ್ಕೆ ಈ ಘಟನೆ ನಡೆದಿದೆ.
ವಿಮಾನದಲ್ಲಿ ಸುಮಾರು ಸಿಬ್ಬಂದಿಗಳು ಸೇರಿದಂತೆ 181 ಜನರು ಪ್ರಯಾಣಿಸುತ್ತಿದ್ದ ಇದ್ದರು. ಇದರಲ್ಲಿ ಇಬ್ಬರು ಮಾತ್ರ ಬದುಕುಳಿದಿದ್ದಾರೆ. ಆದರೂ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನ ರನ್‌ವೇಯಲ್ಲಿ ದಾಟಿ ಹೋಗುತ್ತಿದ್ದಂತೆ ಎಚ್ಚೆತ್ತ ತುರ್ತು ಕಾರ್ಯಪಡೆ ರಕ್ಷಣೆಗೆ ಮುಂದಾಗಿದೆ. ನ್ಯಾಶನಲ್ ಫೈರ್ ಏಜೆನ್ಸಿ ಅಧಿಕಾರಿಗಳ ಪ್ರಕಾರ ಬೇಗನೆ ಬೆಂಕಿಯನ್ನು ನಂದಿಸಿ ಪ್ರಯಾಣಿಕರನ ರಕ್ಷಣೆಗೆ ಮುಂದಾದರೂ ಕೂಡ ಬಹುತೇಕರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಮೃತರಲ್ಲಿ ಸುಮಾರು ಅರ್ಧದಷ್ಟು ಮಹಿಳೆಯರು ಇದ್ದಾರೆ ಎಂದು ತಿಳಿಸಿದ್ದು, ಸುಮಾರು 32 ಅಗ್ನಿಶಾಮಕ ವಾಹನಗಳು ಮತ್ತು ಹಲವಾರು ಹೆಲಿಕಾಪ್ಟರ್‌ಗಳನ್ನು ಪರಿಹಾರ ಕಾರ್ಯಕ್ಕೆ ನಿಯೋಜಿಸಲಾಗಿತ್ತು ಎಂದು ಹೇಳಿದ್ದಾರೆ.ಸ್ಥಳೀಯ ಟಿವಿ ದುರಂತದ ದೃಶ್ಯಾವಳಿಗಳನ್ನು ಪ್ರಸಾರ ಮಾಡಿದ್ದು, ಜೆಜು ಏರ್ ವಿಮಾನ ಏರ್‌ಸ್ಟ್ರಿಪ್‌ನಿಂದ ಜಾರಿ ತಡೆಗೋಡೆಗೆ ಡಿಕ್ಕಿ ಹೊಡೆದು ಬೆಂಕಿ ಉಂಡೆಯಾಗಿ ಬಾನೆತ್ತರಕ್ಕೆ ಕಪ್ಪು ಹೊಗೆ ಆವರಿಸಿದ್ದನ್ನು ತೋರಿಸಿದೆ.
ಮೃತರಲ್ಲಿ ಕೆಲವರು ವಿದೇಶಿ ಪ್ರಜೆಗಳು ಇದ್ದಾರೆ ಎಂದು ದಕ್ಷಿಣ ಕೊರಿಯಾದ ಸಾರಿಗೆ ಸಚಿವಾಲಯ ತಿಳಿಸಿದೆ. ಮುವಾನ್ ಅಗ್ನಿಶಾಮಕ ಠಾಣೆಯ ಮುಖ್ಯಸ್ಥ ಲೀ ಜಿಯೋಂಗ್-ಹೈಯಾನ್ ಅವರು ದೃಶ್ಯಗಳನ್ನು ಕಂಡು ದಿಗ್ಭ್ರಂತರಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿ ಅಪಘಾತದ ಪ್ರದೇಶದಲ್ಲಿ ಚದುರಿದ ದೇಹಗಳಿಗಾಗಿ ರಕ್ಷಣಾ ಕಾರ್ಯಕರ್ತರು ಹುಡುಕಾಟ ನಡೆಸಿದರೂ ವಿಮಾನವು ಸಂಪೂರ್ಣವಾಗಿ ನಾಶವಾಗಿದ್ದು, ಅವಶೇಷಗಳ ನಡುವೆ ಕೇವಲ ಹಿಂದಿನ ಭಾಗ ಗುರುತಿಸಬಹುದಾಗಿದೆ ಎಂದು ಅವರು ಭೀಕರತೆಯನ್ನು ತಿಳಿಸಿದ್ದಾರೆ.
ವಿಮಾನವು ಯಾಂತ್ರಿಕ ಸಮಸ್ಯೆಗಳನ್ನು ಉಂಟಾಗಿದೆಯೂ ಅಥವಾ ಎಂಜಿನ್‌ಗೆ ಪಕ್ಷಿ ಡಿಕ್ಕಿ ಹೊಡೆದಿದೆಯೋ ಎಂಬುದೂ ತಿಳಿಯುತ್ತಿಲ್ಲ. ಅಪಘಾತಕ್ಕೆ ಕಾರಣವೇನು ಎಂಬುದರ ಕುರಿತು ವಿಮಾನಯಾನ ಸಿಬ್ಬಂದಿ ಹಾಗೂ ಸರ್ಕಾರಿ ತನಿಖಾಧಿಕಾರಿಗಳು ಕೂಡ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ್ದಾರೆ.
ಯೋನ್‌ಹಾಪ್ ಸುದ್ದಿ ಸಂಸ್ಥೆಯ ಪ್ರಕಾರ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ರಕ್ಷಿಸಲು ಲಭ್ಯವಿರುವ ಎಲ್ಲಾ ಸಂಪನೂಲಗಳನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರೂ ಆದರೆ ಬಹುತೇಕ ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ. ದೇಶದಲ್ಲಿ ನಡೆದ ಅತ್ಯಂತ ಘೋರ ವಿಮಾನ ಅಪಘಾತದ ಬಗ್ಗೆ ಚರ್ಚಿಸಲು ಹಿರಿಯ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಕೆಲವರು ಕೊನೆಯುಸಿರೆಳೆದಿದ್ದಾರೆ. ಕೆಲ ದೇಹಗಳು ಗುರುತು ಸಿಗಲಾಗದಷ್ಟು ಕರಕಲಾಗಿದೆ. ಮೃತರ ಮಾಹಿತಿಯನ್ನು ಕಲೆಹಾಕಲಾಗುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಸಂಬಂಧಿಕರು ಜಮಾಯಿಸಿದ್ದಾರೆ. ವಿಮಾನ ನಿಲ್ದಾಣದಲ್ಲೇ ಘಟನೆ ನಡೆದಿರುವುದರಿಂದ ಆತಂಕ ಶುರುವಾಗಿದೆ.