Friday, November 22, 2024
Homeಇದೀಗ ಬಂದ ಸುದ್ದಿವಿಧಾನಸಭೆಯ ಮೊಗಸಾಲೆಗೆ ಆಪ್ತ ಸಹಾಯಕರನ್ನು ಕರೆತರದಂತೆ ಸ್ಪೀಕರ್ ಸೂಚನೆ

ವಿಧಾನಸಭೆಯ ಮೊಗಸಾಲೆಗೆ ಆಪ್ತ ಸಹಾಯಕರನ್ನು ಕರೆತರದಂತೆ ಸ್ಪೀಕರ್ ಸೂಚನೆ

ಬೆಂಗಳೂರು, ಜು.19-ವಿಧಾನಸಭೆಯ ಮೊಗಸಾಲೆಗೆ (ಲಾಂಜ್‌‍) ಆಪ್ತ ಸಹಾಯಕರನ್ನು ಕರೆತರಬಾರದು ಎಂದು ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಶಾಸಕರಿಗೆ ಸೂಚನೆ ನೀಡಿದರು.ಇಂದು ಬೆಳಿಗ್ಗೆ ಸದನ ಸಮಾವೇಶಗೊಂಡ ಕೂಡಲೆ ನಿನ್ನೆ ಸದನಕ್ಕೆ ಬೇಗ ಆಗಮಿಸಿದ ಶಾಸಕರ ಹೆಸರನ್ನು ವಾಚಿಸಿದ ನಂತರ ಸಭಾಧ್ಯಕ್ಷರು ಈ ಸೂಚನೆ ನೀಡಿದರು.

ಲಾಂಜ್‌ನಲ್ಲಿ ಆಪ್ತ ಸಹಾಯಕರು ಕೂರುವುದರಿಂದ ಅನಗತ್ಯ ಗದ್ದಲದ ವಾತಾವರಣವಾಗಲಿದೆ. ಹೀಗಾಗಿ ಶಾಸಕರು ತಮ ಆಪ್ತ ಸಹಾಯಕರನ್ನ ಕರೆತರಬಾರದು. ಮೊಗಸಾಲೆಗೆ ಆಪ್ತ ಸಹಾಯಕರು ಬಂದರೆ ಗದ್ದಲದ ವಾತಾವರಣ ನಿರ್ಮಾಣವಾಗುತ್ತಿದೆ. ಎಷ್ಟೋ ಬಾರಿ ಶಾಸಕರು ಮತ್ತು ಸಚಿವರಿಗೆ ಕೂರಲು ಲಾಂಜ್‌ನಲ್ಲಿ ಜಾಗ ಸಿಗುತ್ತಿಲ್ಲ. ಮಾಜಿ ಶಾಸಕರೊಬ್ಬರು ಲಾಂಜ್‌ನಲ್ಲಿ ಹೋಟೆಲ್‌ ಮಾಡಿದ್ದೀರಾ ಎಂದು ಕೇಳಿದರು ಎಂದು ಹೇಳಿದರು.

ಆದ್ದರಿಂದ ಅನಗತ್ಯವಾಗಿ ಶಾಸಕರು ತಮ ಸಹಾಯಕರನ್ನು ಕರೆತರಬೇಡಿ. ವಯಸ್ಸಾದ ಹಿರಿಯ ಶಾಸಕರು ಅಥವಾ ಮಾಜಿ ಶಾಸಕರು ನೆರವಿಗಾಗಿ ಒಬ್ಬರನ್ನು ಕರೆತಂದರೆ ಅಡ್ಡಿಯಿಲ್ಲ. ಆದರೆ ಉಳಿದವರು ಈ ರೂಢಿಯನ್ನು ಕೈಬಿಡಿ. ಮೊಗಸಾಲೆಯ ಗೌರವ ಕಾಪಾಡಿ ಎಂದು ಮನವಿ ಮಾಡಿದರು.

ಹಾಗೆಯೇ ಬೇರೆಯವರನ್ನು ಮೊಗಸಾಲೆಗೆ ಬರಲು ಒಳಬಿಡಲು ಮಾರ್ಷಲ್‌ಗಳ ಮೇಲೆ ಒತ್ತಡ ಹಾಕಬೇಡಿ. ನಾವೇ ಮಾಡಿದ ಕಾನೂನುಗಳನ್ನು, ನಿಯಮಗಳನ್ನು ಅವರು ಪಾಲಿಸುತ್ತಾರೆ. ಅವರ ಮೇಲೆ ಒತ್ತಡ ಹಾಕಿ ಬೇರೆಯವರನ್ನು ಒಳಗೆ ಕರೆತರುವುದರಲ್ಲಿ ಯಾವ ಹೆಚ್ಚುಗಾರಿಕೆಯೂ ಇಲ್ಲ ಎಂದು ಅವರು ಹೇಳಿದರು.

ವಿಶ್ರಾಂತಿಗೆ ಒರಗು ಕುರ್ಚಿ:

ವಿಧಾನಸಭೆಯ ಮೊಗಸಾಲೆಯಲ್ಲಿ ಮಧ್ಯಾಹ್ನದ ಊಟದ ನಂತರ ಶಾಸಕರ ಅಲ್ಪಕಾಲದ ವಿಶ್ರಾಂತಿಗೆ ಒರಗು (ರಿಕ್ಲೈನಿಂಗ್‌‍) ಕುರ್ಚಿಯ ವ್ಯವಸ್ಥೆ ಮಾಡಲಾಗಿದೆ. ಇದನ್ನು ಪ್ರಾಯೋಗಿಕವಾಗಿ ಮಾಡಿದ್ದು, ಒಂದು ಕುರ್ಚಿಯನ್ನು ಇರಿಸಲಾಗಿದೆ. ಮುಂದಿನ ಅಧಿವೇಶನದ ಹೊತ್ತಿಗೆ ಈ ಕುರ್ಚಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಪ್ರಕಟಿಸಿದರುಬಜೆಟ್‌ ಅಧಿವೇಶನದಿಂದ ವಿಧಾನಸಭೆಯ ಮೊಗಸಾಲೆಯಲ್ಲೇ ಎಲ್ಲ ಶಾಸಕರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಪೀಠ ಕಲ್ಪಿಸಿದೆ.

ಊಟಕ್ಕಾಗಿ ಹೊರಗೆ ಹೋಗಿ ಬರುವುದು ತಡವಾಗದಿರಲಿ ಎನ್ನುವ ಕಾರಣಕ್ಕೆ ಈ ಕ್ರಮವನ್ನು ತೆಗೆದುಕೊಂಡಿದೆ. ಆದರೂ ಕೆಲವರು ಊಟವಾದ ನಂತರ ವಿಶ್ರಾಂತಿಗೆ ಶಾಸಕರ ಭವನಕ್ಕೆ ಹೋಗಿ ಬರುವುದಾಗಿ ಹೇಳುತ್ತಾರೆ. ಅದನ್ನು ತಪ್ಪಿಸಲು ಈಗ ಅಲ್ಪಕಾಲದ ವಿಶ್ರಾಂತಿಗೆ (ನ್ಯಾಪ್‌‍) ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

RELATED ARTICLES

Latest News