ಬೆಂಗಳೂರು, ಜ.21-ತಲಪಾಡಿಯ ಕೋಟೆಕಾರು ಸಹಕಾರಿ ಸಂಘದಲ್ಲಿ ಹಾಡಹಗಲೇ ದರೋಡೆಗೈದ ಆರೋಪಿಗಳನ್ನು ತಮಿಳುನಾಡಿನಲ್ಲಿ ಕ್ಷಿಪ್ರವಾಗಿ ಬಂಧಿಸಿರುವ ಪೊಲೀಸರ ದಿಟ್ಟ ಕ್ರಮವನ್ನು ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಶ್ಲಾಘಿಸಿ, ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ದರೋಡೆಯಾದ ಅಲ್ಪಾವಧಿಯಲ್ಲೇ ಬಂಧಿಸಿರುವುದರಿಂದ ಪೊಲೀಸರ ಮೇಲಿನ ವಿಶ್ವಾಸ ಮತ್ತು ನಂಬಿಕೆ ಇಮಡಿಯಾಗಿದೆ. ಪೊಲೀಸರ ಶ್ರಮಕ್ಕೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದ್ದಾರೆ.
ಇದೇ ರೀತಿ ಬಂಟ್ವಾಳ ನಾರ್ಶದ ಸಿಂಗಾರಿ ಬೀಡಿ ಉದ್ಯಮಿ ಸುಲೈಮಾನ್ ಹಾಜಿ ಅವರ ಮನೆ ದರೋಡೆ ಪ್ರಕರಣದಲ್ಲೂ ಆರೋಪಿಗಳು ಶೀಘ್ರ ಪೊಲೀಸ್ ಬಲೆಗೆ ಬೀಳಲಿದ್ದಾರೆ. ಇದರ ತನಿಖೆಯಲ್ಲಿ ಬಹಳಷ್ಟು ಪ್ರಗತಿ ಕಂಡು ಬಂದಿದೆ ಎಂದು ಅವರು ತಿಳಿಸಿದ್ದಾರೆ.