ಬೆಂಗಳೂರು,ಮೇ2- ಮಂಗಳೂರಿನಲ್ಲಿ ನಿನ್ನೆ ನಡೆದ ಸುಹಾಸ್ ಶೆಟ್ಟಿ ಕೊಲೆಯನ್ನು ತೀವ್ರವಾಗಿ ಖಂಡಿಸುವುದಾಗಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. ಈ ಹತ್ಯೆಯ ದುಷ್ಕರ್ಮಿಗಳು ಯಾರೇ ಇದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು. ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಹತ್ಯೆಯಾಗಿರಬಹುದು. ಹತ್ಯೆಯಾದ ಸುಹಾಸ್ ಶೆಟ್ಟಿ ಈ ಹಿಂದೆ ಕೀರ್ತಿ ಎಂಬುವರ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದರು. ತನಿಖೆ ನಂತರ ಸತ್ಯಾಂಶ ಗೊತ್ತಾಗಲಿದೆ. ವೈಯಕ್ತಿಕ ಗುಂಪುಗಳ ನಡುವಿನ ಘರ್ಷಣೆಯಾಗಿದೆಯೇ ಹೊರತು ಧರ್ಮ-ಧರ್ಮದ ನಡುವಿನ ದ್ವೇಷ ಇದಲ್ಲ. ಕರಾವಳಿಗೆ ಅದರದೇ ಆದ ಪರಂಪರೆ ಇದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯನ್ನು ಮುಂದೆ ಕೊಂಡಯ್ಯಲು ಎಲ್ಲರ ಸಹಕಾರ ಬೇಕು. ಯಾವುದೇ ಸಮಾಜ, ಧರ್ಮ ನಮ ಮಂಗಳೂರನ್ನು ಹಿಂದಕ್ಕೆ ಕೊಂಡಯ್ಯಬಾರದು. ಈ ಕೃತ್ಯಗಳು ನಡೆದಾಗ ದ್ವೇಷದ ಭಾವನೆ ಉಂಟಾಗುವುದು ಸಹಜ. ಇದನ್ನು ನಿಯಂತ್ರಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು ಎಂದರು.
ಫಾಜಿಲ್ ಹತ್ಯೆಗೆ ಪ್ರತೀಕಾರ ಎಂಬ ಭಾವ ಜನರಲ್ಲಿತ್ತು. ಆದರೆ ಫಾಜಿಲ್ ಅವರ ತಂದೆಯೇ ದೂರವಾಣಿ ಕರೆ ಮಾಡಿ ಇಂತಹ ಪ್ರತಿಕಾರ ನಮದಲ್ಲ. ಘಟನೆಗೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು. ರಾಜಕೀಯವಾಗಿ ಉತ್ತರ ಕೊಡಲು ಹೋಗುವುದಿಲ್ಲ. ರಾಜಕೀಯವಾಗಿ ಯಾರೂ ಈ ಘಟನೆಯನ್ನು ಬಳಸಿಕೊಳ್ಳಬೇಡಿ. ಆರೋಪ ಮಾಡುತ್ತಿರುವವರು ಆತಾವಲೋಕನ ಮಾಡಿಕೊಳ್ಳಲಿ ಎಂದು ಅವರು ಹೇಳಿದರು.