ಬೆಂಗಳೂರು,ಜು.19– ಸದನದ ಕಲಾಪ ನಡೆಯುವ ವೇಳೆ ಸಚಿವರು ಮತ್ತೆ ಗೈರು ಹಾಜರಾಗಿದ್ದರಿಂದ ಸಭಾಪತಿ ಬಸವರಾಜ ಹೊರಟ್ಟಿ ಅವರು ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನಪರಿಷತ್‌ನಲ್ಲಿಂದು ಜರುಗಿತು.
ಬೆಳಗ್ಗೆ ಸದನ ಆರಂಭವಾದ ವೇಳೆ ಆಡಳಿತಪಕ್ಷದ ಸಾಲಿನಲ್ಲಿ ಬೆರಳೆಣಿಕೆಯ ಸಚಿವರು ಕುಳಿತಿದ್ದರು. ಈ ವೇಳೆ ಸಭಾಪತಿಯವರು ಪ್ರಶ್ನೋತ್ತರ ಕಲಾಪವನ್ನು ಪ್ರಾರಂಭಿಸಿ ಸಂಬಂಧಪಟ್ಟ ಸದಸ್ಯರಿಗೆ ಪ್ರಶ್ನೆ ಕೇಳಲು ಸೂಚಿಸಿದರು.
ಆಗ ಜೆಡಿಎಸ್‌ನ ಭೋಜೆಗೌಡ ಅವರು ನಿಯಮಗಳ ಪ್ರಕಾರ ಉತ್ತರ ನೀಡುವ ಆರು ಸಚಿವರು ಸೇರಿದಂತೆ ಸದನದಲ್ಲಿ ಒಟ್ಟು 8 ಸಚಿವರು ಇರಬೇಕು. ಇಲ್ಲಿ ಕೇವಲ ಬೆರಳಣಿಕೆಯಷ್ಟು ಮಾತ್ರ ಸಚಿವರಿದ್ದಾರೆ. ಸಭಾಪತಿಗಳ ಮಾತಿಗೆ ಬೆಲೆ ಇಲ್ಲವೇ? ಹಾಗದರೆ ಸದನವನ್ನು ಏಕೆ ನಡೆಸಬೇಕೆಂದು ಏರಿದ ದನಿಯಲ್ಲಿ ಪ್ರಶ್ನಿಸಿದರು.
ಈ ವೇಳೆ ಸಭಾನಾಯಕ ಭೋಸ್‌ರಾಜ್, ಸದಸ್ಯರಾದ ಐವಾನ್ ಡಿಸೋಜ ಮತ್ತಿತರರು ಎಲ್ಲದರಲ್ಲೂ ರಾಜಕೀಯ ಮಾಡಬೇಡಿ ಎಂದು ಭೋಜೇಗೌಡರಿಗೆ ತಿರುಗೇಟು ನೀಡಿದರು.
ಇದಕ್ಕೆ ಮತ್ತೆ ಕಿಡಿಕಾರಿದ ಭೋಜೇಗೌಡರು ಇಂದು ಸದನದಲ್ಲಿ ಭೋಸರಾಜ್, ಎಚ್.ಕೆ.ಪಾಟೀಲ್, ಈಶ್ವರ್ ಖಂಡ್ರೆ, ದಿನೇಶ್ ಗುಂಡೂರಾವ್, ಕೆ.ಎಚ್.ಮುನಿಯಪ್ಪ, ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಒಟ್ಟು 8 ಸಚಿವರು ಇರಬೇಕು. ಹಾಗಾದರೆ ಎಲ್ಲಿ ಹೋಗಿದ್ದಾರೆ ಎಂದು ಏರಿದ ದನಿಯಲ್ಲಿ ಸರ್ಕಾರದ ವಿರುದ್ಧ ಮುಗಿಬಿದ್ದರು.
ಆಗ ಸಭಾಪತಿ ಹೊರಟ್ಟಿ ಅವರು ಕಲಾಪ ನಡೆಯುವ ವೇಳೆ ಕಡ್ಡಾಯವಾಗಿ ಸಚಿವರು ಮತ್ತು ಶಾಸಕರು ಸದನದಲ್ಲಿ ಹಾಜರಿರಲೇಬೇಕು. ಅಧಿಕಾರಿಗಳು ಇಲ್ಲದಿದ್ದರೆ ಹೇಗೆ? ನಾನು ಪ್ರತಿದಿನ ಹೇಳುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.