Sunday, September 8, 2024
Homeರಾಜ್ಯಅವಧಿಗೂ ಮುನ್ನವೇ ಅಧಿವೇಶನ ಮುಕ್ತಾಯಗೊಂಡಿದ್ದು ಬೇಸರ ತಂದಿದೆ : ಸ್ಪೀಕರ್ ಖಾದರ್

ಅವಧಿಗೂ ಮುನ್ನವೇ ಅಧಿವೇಶನ ಮುಕ್ತಾಯಗೊಂಡಿದ್ದು ಬೇಸರ ತಂದಿದೆ : ಸ್ಪೀಕರ್ ಖಾದರ್

ಬೆಂಗಳೂರು,ಜು.26- ವಿರೋಧ ಪಕ್ಷಗಳ ಧರಣಿ ನಡುವೆ ಸರ್ಕಾರಿ ಕಲಾಪಗಳನ್ನು ನಡೆಸುವುದು ಅನಿವಾರ್ಯವಾಗಿತ್ತು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಇಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳ ಪ್ರತಿಭಟನೆಯಿಂದಾಗಿ ನಿಗದಿತ ಅವಧಿಗಿಂತ ಒಂದು ದಿನ ಮುನ್ನವೇ ಅಧಿವೇಶನ ಮುಕ್ತಾಯಗೊಂಡಿದ್ದು ಬೇಸರ ತಂದಿದೆ ಎಂದರು.

ಎಂಟು ದಿನಗಳ ಕಾಲ 36 ಗಂಟೆ 51 ನಿಮಿಷ ಕಾರ್ಯ ಕಲಾಪ ನಡೆಸಲಾಗಿದೆ. ದೇಶದ ಯಾವುದೇ ವಿಧಾನಸಭೆಯಲ್ಲಿ ಅಳವಡಿಸದ ಎಐ ಕ್ಯಾಮೆರಾ ಅಳವಡಿಸಲಾಗಿದ್ದು, ಶಾಸಕರು ಎಷ್ಟು ಬಾರಿ ಬರುತ್ತಾರೆ, ಎಷ್ಟು ಬಾರಿ ಹೊರಗೆ ಹೋಗುತ್ತಾರೆ, ಎಷ್ಟು ಅವಧಿ ಇದ್ದರು ಎಂಬುದು ಗೊತ್ತಾಗಲಿದೆ.

ನಿಲುವಳಿ ಸೂಚನೆಯಡಿ ಚರ್ಚಿತವಾಗುವ ವಿಚಾರವು ಇತ್ತೀಚಿನ ಘಟನೆಯಾಗಿರಬೇಕು, ಸಾರ್ವಜನಿಕ ಮಹತ್ವ ಹೊಂದಿರಬೇಕು, ನ್ಯಾಯಾಂಗ ಅಥವಾ ಅರೆ ನ್ಯಾಯಾಂಗದಿಂದ ತನಿಖೆ ನಡೆಯುತ್ತಿರಬಾರದು. ಆದರೆ ಮುಡಾ ಹಗರಣ ವಿಚಾರ ಈಗಾಗಲೇ ನ್ಯಾಯಾಂಗ ವಿಚಾರಣೆಗೆ ವಹಿಸಿರುವುದರಿಂದ ಕೆಟ್ಟ ಸಂಪ್ರದಾಯಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಚರ್ಚೆಗೆ ಅವಕಾಶ ನೀಡಲಿಲ್ಲ. ಸಭಾಧ್ಯಕ್ಷರು ನೀಡಿದ ರೂಲಿಂಗ್‌ ಸರಿಯಾಗಿದೆ ಎಂಬುದು ಮುಂದೆ ವಿರೋಧ ಪಕ್ಷಗಳಿಗೂ ಮನವರಿಕೆಯಾಗಲಿದೆ. ಅಶಿಸ್ತಿನ ವರ್ತನೆ ಕಂಡಾಗ ಕಠಿಣ ಕ್ರಮ ಕೈಗೊಳ್ಳುವುದು ಕಷ್ಟವಲ್ಲ. ಕಲಾಪ ಸುಗಮವಾಗಿ ನಡೆಯಬೇಕು ಎಂಬ ಕಾರಣಕ್ಕೆ ಸಹಿಸಿಕೊಂಡು ಅಧಿವೇಶನ ನಡೆಸಲಾಯಿತು ಎಂದರು.

ನೀಟ್‌ ಮತ್ತು ಅತಿವೃಷ್ಟಿ ಸೇರಿದಂತೆ ಹಲವು ಮಹತ್ವದ ವಿಚಾರಗಳು ಚರ್ಚೆಯಾಗಬೇಕಿತ್ತು. ಅದಾಗಲಿಲ್ಲ ಎಂಬ ಬೇಸರವಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶೇ.85ರಷ್ಟು ಹಾಜರಾತಿ ಇತ್ತು. ವಿವಿಧ ಸ್ಥಾಯಿ ಸಮಿತಿಗಳ ಅಧಿಕಾರ ಆ.8ಕ್ಕೆ ಮುಗಿಯಲಿದ್ದು, ಮರುನೇಮಕಕ್ಕೆ ಸದನ ಸಭಾಧ್ಯಕ್ಷರಿಗೆ ಅಧಿಕಾರ ಕೊಟ್ಟಿದೆ ಎಂದರು.

ಈ ಅಧಿವೇಶನದಲ್ಲಿ 23 ಅಧಿಸೂಚನೆಗಳು, 146 ವಾರ್ಷಿಕ ವರದಿಗಳು, 160 ಲೆಕ್ಕ ಪರಿಶೋಕಾ ವರದಿಗಳು, 5 ಅನುಪಾಲನ ವರದಿಗಳು, 4 ಅನುಸರಣಾವರದಿ ಹಾಗೂ 1 ಲೆಕ್ಕ ತಪಸಣಾ ವರದಿ ಮಂಡಿಸಲಾಗಿದೆ. ಮಂಡಿಸಲಾದ 13 ವಿಧೇಯಕಗಳಲ್ಲಿ 12 ವಿಧೇಯಕಗಳನ್ನು ಅಂಗೀಕರಿಸಲಾಗಿದೆ ಎಂದು ಸದನದಲ್ಲಿ ನಡೆದ ಕಾರ್ಯ ಕಲಾಪಗಳ ವರದಿಯನ್ನು ನೀಡಿದರು.

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವಿಧಾನಪರಿಷತ್‌ನಲ್ಲಿ 8 ದಿನಗಳ ಕಾಲ 37 ಗಂಟೆ, 30 ನಿಮಿಷ ಕಲಾಪ ನಡೆಸಲಾಗಿದೆ. ಒಟ್ಟು 135 ಪ್ರಶ್ನೆಗಳಲ್ಲಿ 90 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ ಎಂದರು. ನಾಲ್ಕು ಅಧಿಕೃತ ನಿರ್ಣಯಗಳನ್ನು ಮಂಡಿಸಿ ಅಂಗೀಕರಿಸಲಾಗಿದೆ. ಶೂನ್ಯ ವೇಳೆಯ 62 ಸೂಚನೆಗಳ ಪೈಕಿ 39 ಸೂಚನೆಗಳಿಗೆ ಉತ್ತರವನ್ನು ಮಂಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸೇರಿದಂತೆ ಉಭಯ ಸದನಗಳ ಕಾರ್ಯದರ್ಶಿಗಳು, ಅಧಿಕಾರಿಗಲು ಉಪಸ್ಥಿತರಿದ್ದರು.

RELATED ARTICLES

Latest News