ಬೆಂಗಳೂರು,ಜು.26- ಸಕಾಲಕ್ಕೆ ಬಿಬಿಎಂಪಿ ಚುನಾವಣೆ ನಡೆಸಿ ಎಂದು ಬೊಬ್ಬೆ ಹೊಡೆದರೂ ಸರ್ಕಾರದ ಕಿವಿಗೆ ಬೀಳದಿರುವುದರಿಂದ ಸಾಮಾಜಿಕ ಹೋರಾಟಗಾರರು ಇದೀಗ ದೇವರ ಮೊರೆ ಹೋಗಿದ್ದಾರೆ. ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಶ್ರೀ ಆದಿಶಕ್ತಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿ ಬಿಬಿಎಂಪಿಗೆ ಶೀಘ್ರ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಬುದ್ದಿ ನೀಡುವ ಮೂಲಕ ಪ್ರಜಾಪ್ರಭುತ್ವ ಉಳಿಸಲು ಸಹಾಯ ಮಾಡು ತಾಯಿ ಎಂದು ಪ್ರಾರ್ಥಿಸಿದ್ದಾರೆ.
ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಟ್ರಸಿಗಳಾದ ಅಮರೇಶ್, ವೀರೇಶ್, ಸಾಮಾಜಿಕ ಹೋರಾಟಗಾರರಾದ ನಾಗೇಶ್ವರ್ ಬಾಬು, ತಿಮರೆಡ್ಡಿ, ಮಲ್ಲಿಕಾರ್ಜುನ್ ಮತ್ತಿತರರು ಈ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅಮರೇಶ್ ಅವರು, ಬಿಬಿಎಂಪಿ ಜನಪ್ರತಿನಿಧಿ ಆಡಳಿತ ಮುಗಿದು ಮೂರು ವರ್ಷ, ಹತ್ತು ತಿಂಗಳು ಆಯಿತು. ಆಡಳಿತಗಾರರ ನೇಮಕ ಮಾಡಿ ಆಡಳಿತ ನಡೆಸಲಾಗುತ್ತಿದೆ. ನಾಗರಿಕರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಸ್ಥಳೀಯ ಜನಪ್ರತಿನಿಧಿಗಳು ಇರಲೇ ಬೇಕು ಎಂದು ಒತ್ತಾಯಿಸಿದರು.
198ವಾರ್ಡ್‌ಗಳಿದ್ದ ಬಿಬಿಎಂಪಿಯನ್ನು 243 ವಾರ್ಡ್ ಮಾಡಿ ನಂತರ 225 ವಾರ್ಡ್ ಎಂದರು ಇದೀಗ ಗ್ರೇಟರ್ ಬೆಂಗಳೂರು ನೆಪದಲ್ಲಿ ಐದು ಭಾಗಗಳಾಗಿ ಮಾಡಲು ಹೋರಟಿದ್ದಾರೆ. ಇದು ಅಕ್ಷಮ್ಯ ಎಂದರು.
ಯಾವುದೇ ಸರ್ಕಾರ ಬಂದರೂ ಬಿಬಿಎಂಪಿ ಚುನಾವಣೆ ಮಾಡಲು ಮನಸ್ಸು ಮಾಡುವುದಿಲ್ಲ. ಚುನಾವಣೆ ಮುಂದೂಡಿಕೆ ತಂತ್ರಗಳನ್ನು ಮಾಡುತ್ತಾರೆ. ಸಾಮಾನ್ಯ ಜನರ ಸಮಸ್ಯೆಗಳು ಜನರ ಬಳಿಗೆ ಹೋಗಿ ಸಮಸ್ಯೆ ನಿವಾರಣೆ ಮಾಡಲು ಸ್ಥಳೀಯ ಜನಪ್ರತಿನಿಧಿಗಳಿಂದ ಮಾತ್ರ ಎನ್ನುವುದನ್ನು ಎಲ್ಲರೂ ಮರೆತಿದ್ದಾರೆ ಎಂದು ತಿಳಿಸಿದರು.
ಐಎಎಸ್ ಅಧಿಕಾರಿಗಳು ಬೆಂಗಳೂರಿನ ಬಡಾವಣೆಗಳಿಗೆ ಭೇಟಿ ನೀಡಿರುವುದು ವಿರಳ, ವಾರ್ಡ್ ಕುರಿತು ಮತ್ತು ಸಮಸ್ಯೆಗಳ ಕುರಿತು ಅವರಿಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಹೀಗಾಗಿ ಬಿಬಿಎಂಪಿ ಚುನಾವಣೆ ಮಾಡಿ ಎಂದು ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಪ್ರಜಾಪ್ರಭುತ್ವ ಉಳಿವಿಗಾಗಿ, ನಾಗರಿಕರ ಸಮಸ್ಯೆ ಬಗೆಹರಿಸಲು ತತಕ್ಷಣ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರಕ್ಕೆ ಬುದ್ಧಿ ನೀಡಲಿ ಎಂದು ದೇವರಲ್ಲಿ ಮೊರೆ ಹೋಗಿದ್ದೇವೆ ಎಂದು ವಿವರಿಸಿದರು.
ವೀರೇಶ್ ಮಾತನಾಡಿ ಬಿಬಿಎಂಪಿಯವರು ಯಾವುದೇ ಕಾರ್ಯ ಮಾಡುವಾಗ ಅದಿಶಕ್ತಿ ದೇವತೆಗೆ ಪೂಜೆ ಸಲ್ಲಿಸುತ್ತಾರೆ ಅದ್ದರಿಂದ ನಾವು ಬೇಗ ಚುನಾವಣೆ ನಡೆಸಲಿ ಎಂದು ದೇವರಿಗೆ ಮೊರೆ ಹೋಗಿದ್ದೇವೆ ಎಂದರು.