ಬೆಂಗಳೂರು ಆ.20- ಅನಾಥಾಶ್ರಮದಲ್ಲಿರುವ ಮಕ್ಕಳಿಗೆ ಮೂಲಭೂತ ದಾಖಲಾತಿಗಳನ್ನು ಮಾಡಿಕೊಡುವ ಜೊತೆಗೆ, ವಿಶೇಷ ಚೇತನರ ಮಾದರಿಯಲ್ಲೇ ಪ್ರತ್ಯೇಕವಾದ ವರ್ಗ ಎಂದು ಪರಿಗಣಿಸಿ ಮೀಸಲಾತಿ ನೀಡಲು ಕ್ರಮ ಕೈಗೊಳ್ಳುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಶಾಸಕಿ ನಯನಾ ಮೋಟಮ್ಮ, ರಾಜ್ಯದ ಅನಾಥಾಶ್ರಮಗಳಲ್ಲಿ ಆಶ್ರಯ ಪಡೆದಿರುವ ಮಕ್ಕಳಿಗೆ ಜನನ ಪ್ರಮಾಣ ಪತ್ರ, ಆಧಾರ್‌ಕಾರ್ಡ್ ಸೇರಿದಂತೆ ಯಾವುದೇ ದಾಖಲೆಗಳು ಇಲ್ಲ. ಅವರಿಗೆ ಹುಟ್ಟಿದ ದಿನಾಂಕ ಗೊತ್ತಿಲ್ಲ, ತಂದೆ ತಾಯಿಯ ಬಗ್ಗೆಯೂ ಮಾಹಿತಿ ಇಲ್ಲ. ಅನಾಥ ಹಾಗೂ ಮಾನವ ಕಳ್ಳ ಸಾಗಾಣಿಕೆಗೆ ಸಿಲುಕಿದ ಮಕ್ಕಳ ಪರಿಸ್ಥಿತಿ ಶೋಚನೀಯವಾಗಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಜೊತೆ ಸಮಾಲೋಚನೆ ನಡೆಸಿ, ಇವರಿಗೆ ಸೂಕ್ತ ದಾಖಲಾತಿಗಳನ್ನು ಮಾಡಿಕೊಡುವ ಜೊತೆಗೆ ನಿರ್ದಿಷ್ಟ ಜಾತಿಗೆ ಸೇರ್ಪಡೆ ಮಾಡಿ ಮೀಸಲಾತಿ ಕಲ್ಪಿಸಬೇಕು ಮತ್ತು ಉನ್ನತ ಶಿಕ್ಷಣಕ್ಕೆ ಹಾಗೂ ವಿದೇಶಿ ವ್ಯಾಸಂಗಕ್ಕೆ ಅನುಕೂಲವಾಗಲು ನೆರವು ನೀಡಬೇಕು ಎಂದು ಆಗ್ರಹಿಸಿದ್ದರು.
ಉತ್ತರ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯದಲ್ಲಿ ಗಂಡು ಮಕ್ಕಳಿಗಾಗಿ 358, ಹೆಣ್ಣು ಮಕ್ಕಳಿಗಾಗಿ 280 ಹಾಗೂ 74 ದತ್ತು ಪಾಲನಾ ಸಂಸ್ಥೆಗಳು ಸೇರಿ 712 ಅನಾಥ ಆಶ್ರಮಗಳಿವೆ. ಇವುಗಳಲ್ಲಿ 9175 ಗಂಡು ಹಾಗೂ 2874 ಹೆಣ್ಣು ಮಕ್ಕಳು ಸೇರಿ 17409 ಮಕ್ಕಳು ಆಶ್ರಯ ಪಡೆದಿದ್ದಾರೆ. ಈ ಮಕ್ಕಳನ್ನು ಎಸ್ಸಿ. ಎಸ್ಟಿ ಅಥವಾ ಓಬಿಸಿ ಜಾತಿಗಳಿಗೆ ಸೇರಿಸುವಂತೆ ಎರಡು ಬಾರಿ ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದಿದ್ದೇನೆ. ಆದರೆ ಕಡತ ವಾಪಸ್ ಬಂದಿದೆ. ಈ ಮಕ್ಕಳನ್ನು ಸಾಮಾನ್ಯ ವರ್ಗ ಎಂದು ಪರಿಗಣಿಸಿ ಶಿಕ್ಷಣಕ್ಕೆ ಪ್ರವೇಶ ಅವಕಾಶ ಕಲ್ಪಿಸಲಾಗುತ್ತಿದೆ. ಜಾತಿ ಪ್ರಮಾಣ ಪತ್ರದ ಗೊಂದಲಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಇದಕ್ಕೆ ಸ್ಪಷ್ಟನೆ ನೀಡಿದ ನಯನಾ ಮೋಟಮ ಇದು ಇದು ಜಾತಿಗಷ್ಟೇ ಸೀಮಿತವಾದ ವಿಚಾರ ಅಲ್ಲ, ಬೇರೆ ಬೇರೆ ದೃಢೀಕರಣ ಪತ್ರಗಳಿಗೂ ಸಮಸ್ಯೆಗಳಾಗುತ್ತಿದೆ ಆಧಾರ್‌ಕಾರ್ಡ್ ಸಿಗುತ್ತಿಲ್ಲ. ಕೇಂದ್ರ ಸರ್ಕಾರದ ಜೊತೆ ಪತ್ರ ವ್ಯವಹಾರ ಮಾಡಿ, ಸ್ಪಷ್ಟನೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಮಧ್ಯ ಪ್ರವೇಶಿಸಿ, ನಯನಾ ಮೋಟಮ ಗಂಭೀರವಾದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಸಮಾಜ ಕಲ್ಯಾಣ ಸಚಿವರು ಗಮನಹರಿಸಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜ ಕಲ್ಯಾಣ ಸಚಿವ ಎಚ್ .ಸಿ .ಮಹದೇವಪ್ಪ, ಅನಾಥ ಮಕ್ಕಳು, ಚಿಂದಿ ಹಾಯುವವರು ಹಾಗೂ ದೇವದಾಸಿಯರ ಮಕ್ಕಳನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಶಿಕ್ಷಣಕ್ಕೆ ಪ್ರವೇಶ ಅವಕಾಶ ನೀಡಲಾಗುತ್ತಿದೆ ಎಂದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮಸ್ಯೆಯನ್ನು ಮತ್ತೊಮೆ ವಿವರಿಸಿ ಅನಾಥ ಮಕ್ಕಳಿಗೆ ಜಾತಿ ನಿರ್ಧರಿಸುವಾಗ ಸಮಸ್ಯೆಗಳಾಗುತ್ತಿವೆ 17000 ಮಕ್ಕಳನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ಅವಕಾಶ ನೀಡಿ. ಇವರಿಗೆ ತಂದೆ ತಾಯಿ ಇಲ್ಲ. ಸರ್ಕಾರವೇ ತಂದೆ ತಾಯಿ ಸ್ಥಾನದಲ್ಲಿ ನಿಂತು ವಿಶೇಷ ವರ್ಗ ಎಂದು ಪರಿಗಣಿಸಿ ಸೌಲಭ್ಯ ನೀಡಬೇಕಿದೆ ಎಂದರು.
ಹಿರಿಯ ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಅನಾಥ ಮಕ್ಕಳ ಬಗ್ಗೆ ಅನುಕಂಪ ಇದೆ ಆದರೆ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೇರಿಸುವ ಅವಕಾಶ ರಾಜ್ಯ ಸರ್ಕಾರಕ್ಕೆ ಇಲ್ಲ. ಇದನ್ನು ಕೇಂದ್ರ ಸರ್ಕಾರ ಮಾತ್ರ ಮಾಡಲು ಸಾಧ್ಯ. ಅನಿವಾರ್ಯ ಸಂದರ್ಭದಲ್ಲಿ ವಿಶೇಷ ವರ್ಗವನ್ನು ಸೃಷ್ಟಿಸಿ ಸೌಲಭ್ಯ ಕಲ್ಪಿಸಬಹುದಾಗಿದೆ ಎಂದು ಸಲಹೆ ನೀಡಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅನಾಥ ಮಕ್ಕಳು ದೊರೆತ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಿಂದ ಪರಿಶೀಲನೆ ನಡೆಸಿ, ವಯಸ್ಸನ್ನು ಗುರುತಿಸುವ ಮೂಲಕ ಜನನ ಪ್ರಮಾಣ ಪತ್ರ ಕೊಡಿಸಲಾಗುತ್ತಿದೆ. ಜಿಲ್ಲಾಧಿಕಾರಿಯನ್ನು ಸೂಪರಿಂಟೆಂಡ್ ಗಾರ್ಡಿಯನ್ ಎಂದು ನಮೂದಿಸಿ, ಆಧಾರ್ ಕಾರ್ಡ್ ಕೂಡ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿಗೆ ಸೇರಿಸಲಾಗುವುದಿಲ್ಲ ಎಂದಾದರೆ, ವಿಶೇಷ ವರ್ಗೀಕರಣ ಮಾಡಿ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಭಾಧ್ಯಕ್ಷರು ಇದು ಗಂಭೀರವಾದ ವಿಚಾರ. ವಿಷಯ ಪ್ರಸ್ತಾಪಿಸಿರುವುದಕ್ಕೆ ಶಾಸಕಿ ನಯನಾ ಅವರಿಗೆ ಅಭಿನಂದನೆಗಳು. ಸರ್ಕಾರ ಅನಾಥ ಮಕ್ಕಳಿಗೆ ಸೌಲಭ್ಯ ಕಲ್ಪಿಸಲು ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಿದರು.
- ಕೆರೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ವಿಧಾನಪರಿಷತ್ನಲ್ಲಿ ಪಕ್ಷಬೇಧ ಮರೆತು ಆಗ್ರಹ
- ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ಗೆ ಬೆಂಕಿ ಹೊತ್ತಿಕೊಂಡು 73 ಜನ ಸಾವು
- ಅಮರಾವತಿ ನಿರ್ಮಾಣ ಹೊಣೆ ಸಿಂಗಾಪುರದ ಹೆಗಲಿಗೆ
- ಮೃತ ಕೆಎಸ್ಆರ್ಟಿಸಿ ನೌಕರರ ಕುಟುಂಬಕ್ಕೆ ಅಪಘಾತೇತರ ಪರಿಹಾರ ಹೆಚ್ಚಳ
- ಬಸ್ಗಳ ಮೇಲೆ ‘ಪ್ರಾಣಿಗಳ ಮೇಲೆ ದಯೆ ಇರಲಿ’ ಘೋಷವಾಕ್ಯ ಕಡ್ಡಾಯ